ಮೂಡಬಿದಿರೆ: ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಯಾಗಿ ಮೂಡಬಿದಿರೆ ಸಮೀಪದ ಬೆಳುವಾಯಿ ಕಾನದ ಅಬ್ದುಲ್ ನಝೀರ್ ಅಧಿಕಾರ ಸ್ವೀಕರಿಸಿದ್ದಾರೆ.
ಬೆಳುವಾಯಿ ಕಾನದ ಫಕೀರ್ ಸಾಹೇಬ್ ಅವರ 6 ಮಂದಿ ಮಕ್ಕಳಲ್ಲಿ ಅಬ್ದುಲ್ ನಝೀರ್ ಹಿರಿಯ ಪುತ್ರ. 1979ರಲ್ಲಿ ಶ್ರೀ ಮಹಾವೀರ ಕಾಲೇಜಿನಲ್ಲಿ ಬಿ.ಕಾಂ. ಪದವಿಯ ಬಳಿಕ ಮಂಗಳೂರು ಎಸ್‌ಡಿಎಂ ಲಾ ಕಾಲೇಜಿನಲ್ಲಿ ಕಾನೂನು
ಪದವಿ ಗಳಿಸಿದರು. ಕಾರ್ಕಳದ ಎಂ.ಕೆ. ವಿಜಯಕುಮಾರ್ ಅವರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಅವರು ಬೆಂಗಳೂರಿನಲ್ಲಿ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿದ್ದ ತಮ್ಮ ಮಾವ ಕೆ.ಎಸ್. ಖಾಸಿಂ ಜತೆ ಸೇರಿಕೊಂಡು ಹೈಕೋರ್ಟ್ ವಕೀಲರಾಗಿ, ಬಳಿಕ ಹೆಸರಾಂತ ವಕೀಲ
ತಾರಕರಾಂ ಅವರ ಜ್ಯೂನಿಯರ್ ಆಗಿ ಕೆಲವುಕಾಲ ವೃತ್ತಿ ನಡೆಸಿ ಬಳಿಕ ಸ್ವತಂತ್ರವಾಗಿ ಕೆಲಸ ಮಾಡತೊಡಗಿದರು.
2003ರ ಮೇ 12ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡು 14 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುವ ಅವಕಾಶ ಗಳಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಾ ಧೀಶರಾಗದಿದ್ದರೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಅಬ್ದುಲ್ ನಝೀರ್ ಅವರ ಪ್ರತಿಭೆ, ನಿಷ್ಪಕ್ಷ ಧೋರಣೆ, ಪರಿಶ್ರಮಶೀಲ ಗುಣಗಳನ್ನು ಗಮನಿಸಿ ಸುಪ್ರೀಂ ನ್ಯಾಯಮೂರ್ತಿಗಳಾಗಿ ನೇಮಿಸಲು ಕಾರಣರಾಗಿದ್ದಾರೆ ಎನ್ನಲಾಗಿದೆ. ಕಳೆದ 27 ವರ್ಷಗಳಲ್ಲೇ ಮೊದಲ ಬಾರಿಗೆ ಏಕಕಾಲದಲ್ಲಿ ಐವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದ್ದು ನಝೀರ್ ಇವರಲ್ಲಿ ಓರ್ವರಾಗಿದ್ದಾರೆ.