ರಾಯ್‌ಪುರ್ : ಛತ್ತೀಸ್‌ಗಡದ ಸುಖ್ಮಾ ಜಿಲ್ಲೆಯಲ್ಲಿ ಮವಾರ ಮಧ್ಯಾಹ್ನ 12.25ರ ಹೊತ್ತಿಗೆ ಚಿಂತಾಗುಫಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬುರ್ಕಾಪಾಲ್ ಗ್ರಾಮದ ಬಳಿ 300 ನಕ್ಸಲರು ಕೇಂದ್ರ ಮೀಸಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿ 25 ಯೋಧರನ್ನು ಹತ್ಯೆಗೈದು ಅಟ್ಟಾಹಾಸ ಮೆರೆದಿದ್ದು, ಹೊಂಚು ದಾಳಿಗೆ ಸ್ಥಳೀಯರು ನೆರವು ನೀಡಿ ದ್ರೋಹ ಬಗೆದಿರುವ ಬಗ್ಗೆ ವರದಿಯಾಗಿದೆ.
ದಾಳಿ ನಡೆಸಿದ ನಕ್ಸಲರ ಪೈಕಿ ಬಹುಪಾಲು ಮಹಿಳೆಯರೇ ಇದ್ದರು ಎಂದು ವರದಿಯಾಗಿದೆ. ಗಾಯಾಳು ಯೋಧನೊಬ್ಬನ ಪ್ರಕಾರ ದಾಳಿ ನಡೆಸಿದ ನಕ್ಸಲರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮೊದಲು ನಮ್ಮ ಮೇಲೆ ಮಹಿಳಾ ನಕ್ಸಲರೇ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.
ನಕ್ಸಲರ ಬಳಿ ಅತ್ಯಾಧುನಿಕ ಶಸ್ತಾಸ್ತ್ರಗಳಿದ್ದು ಎಲ್ಲರೂ ಕಪ್ಪು ವರ್ಣದ ಸಮವಸ್ತ್ರಗಳನ್ನು ಧರಿಸಿದ್ದರು ಎಂದು ಯೋಧರು ತಿಳಿಸಿದ್ದಾರೆ.
ನಕ್ಸಲರ ದಾಳಿಗೆ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ ಏಳೆಂಟು ಯೋಧರು ಕಣ್ಮರೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.
‘ಗ್ರಾಮಸ್ಥರು ನಮ್ಮ ಇರುವಿಕೆಯ ಮಾಹಿತಿಯನ್ನು ನಕ್ಸಲರಿಗೆ ನೀಡಿದ್ದಾರೆ. ಈ ವೇಳೆ 300 ನಕ್ಸಲರು ನಮ್ಮ ಮೇಲೆ ದಾಳಿ ನಡೆಸಿದ್ದು ,ನಾವು 150 ಮಂದಿ ಮಾತ್ರ ಇದ್ದೇವು. ನಾವು ಹೋರಾಟ ಮುಂದುವರಿಸಿದೆವು, ನಕ್ಸಲರನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು ನಾನು ನಾಲ್ಕೈದು ನಕ್ಸಲರ ಎದೆಗೆ ಗುರಿಯಾಗಿರಿಸಿ ಗುಂಡಿನ ದಾಳಿ ನಡೆಸಿದ್ದೆ ,ಕೆಲವು ನಕ್ಸಲರು ಹತ್ಯೆಗೀಡಾಗಿದ್ದಾರೆ’ಎಂದು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯೋಧ ಶೇರ್ ಮೊಹಮದ್ ವಿವರಿಸಿದರು.
ಇನ್ನೋರ್ವ ಗಾಯಾಳು ಯೋಧ ಸೌರಭ್ ಮಾಲಿಕ್ ಪ್ರಕಾರ
‘ನಕ್ಸಲರ ಉದ್ದೇಶ ನಮ್ಮ ಬೆಟಾಲಿಯನ್ ಸುತ್ತುವರಿಯುವುದಾಗಿತ್ತು. ನಾವು ಗುಂಡಿನ ದಾಳಿ ನಡೆಸುತ್ತಾ ಅವರ ಉದ್ದೇಶ ವಿಫಲಗೊಳಿಸಿ ಮುನ್ನುಗ್ಗಿದೆವು’ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು ಸಿಆರ್‌ಪಿಎಫ್ನ ಯೋಧರ ಸಾವು ಅತೀವ ದುಃಖ ತಂದಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದಾರೆ.
ಗೃಹ ಖಾತೆ ಸಹಾಯಕ ಸಚಿವ ಹನ್ಸರಾಜ್ ಅಹಿರ್ ಅವರನ್ನು ಛತ್ತೀಸ್‌ಗಡಕ್ಕೆ ಆಗಮಿಸಿ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ.
ನಕ್ಸಲರ ವಿರುದ್ಧ ಕ್ಷಿಪ್ರಗತಿಯಲ್ಲಿ ಭಾರೀ ಕಾರ್ಯಾಚರಣೆಗೆ ಮುಂದಾಗುವ ಸಾಧ್ಯತೆಗಳಿವೆ.