Advertisement

ಜ.5ಕ್ಕೆಸುಕೋ ಬ್ಯಾಂಕ್‌ ರಜತ ಮಹೋತ್ಸವ

11:32 AM Dec 16, 2018 | |

ಬಳ್ಳಾರಿ: ನೆರೆಯ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಆರಂಭವಾಗಿದ್ದ ಸುಕೋ ಬ್ಯಾಂಕ್‌ 25 ವರ್ಷ ಪೂರ್ಣಗೊಳಿಸಿದ್ದ ಹಿನ್ನೆಲೆಯಲ್ಲಿ 2019, ಜ.1ರಿಂದ ವರ್ಷವಿಡೀ ಎಲ್ಲ ಶಾಖೆಗಳಲ್ಲಿ “ರಜತ ಸಂಭ್ರಮ’ ಆಚರಿಸಲಾಗುತ್ತದೆ
ಎಂದು ಬ್ಯಾಂಕ್‌ ಅಧ್ಯಕ್ಷ ಮೋಹಿತ್‌ ಮಸ್ಕಿ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನ ಬೆಳ್ಳಿಹಬ್ಬ ಸಂಭ್ರಮದ ಹಿನ್ನೆಲೆಯಲ್ಲಿ ಜ.5ರಂದು ಬೆಳಗ್ಗೆ 6 ಗಂಟೆಗೆ “ರಜತ ಸಂಭ್ರಮ’ಕ್ಕೆ ಚಾಲನೆ ನೀಡಲಾಗುವುದು. ಅಂದು ಬೆಳಗ್ಗೆ 6ಕ್ಕೆ “ಸುಸ್ಥಿರ ಕೃಷಿ’ಗಾಗಿ
ಮ್ಯಾರಥಾನ್‌, ಮಧ್ಯಾಹ್ನ 12 ಗಂಟೆಗೆ ಬರ ಗೆದ್ದ ಕೃಷಿಕರ ಜೊತೆ ಜಿಪಂ “ನಜೀರ್‌ ಸಾಬ್‌’ ಸಭಾಂಗಣದಲ್ಲಿ ಸಂವಾದ.

ಉತ್ತರ ಕರ್ನಾಟಕದಲ್ಲಿ ಮರೆಯಾದ ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆ ಕುರಿತು “ಫುಡ್‌ ಟ್ಯಾಲೆಂಟ್‌ ಹಂಟ್‌
ಫಾರ್‌ ಸ್ಟಾರ್ಟ್‌ಅಪ್‌’ ಕಾರ್ಯಕ್ರಮ ಮತ್ತು ಅಂದು ಸಂಜೆ 6 ಗಂಟೆಗೆ ಸುಕೃತ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ, ಸುಕೋಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದರು.
 
ರಜತ ಸಂಭ್ರಮದ ಅಂಗವಾಗಿ ಜ.5ರಂದು ಬೆಳಗ್ಗೆ ನಗರದಲ್ಲಿ ಮ್ಯಾರಥಾನ್‌ ಓಟ ನಡೆಯಲಿದೆ. ಇಲ್ಲಿನ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾಗುವ ಓಟವು ಗಡಗಿ ಚನ್ನಪ್ಪ ವೃತ್ತ, ಎಚ್‌.ಆರ್‌.ಗವಿಯಪ್ಪ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಪುನಃ ಕನಕದುರ್ಗಮ್ಮ ದೇವಸ್ಥಾನ ಆವರಣಕ್ಕೆ ತಲುಪಲಿದೆ. ಓಟದಲ್ಲಿ ಕೃಷಿ ಸಾಧಕರು, ರೈತರು, ಸುಕೃತ ಕೃಷಿ ಪ್ರಶಸ್ತಿ ಪುರಸ್ಕೃತರು, ಪ್ರಗತಿಪರರು, ಕೃಷಿ ತಜ್ಞರು, ವಿದ್ಯಾರ್ಥಿಗಳು ಮತ್ತು ನಗರವಾಸಿಗಳು ಸೇರಿ ಓಟದಲ್ಲಿ
1000ಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ. 

ವಿಜೇತರಿಗೆ ಪ್ರಥಮ ಬಹುಮಾನ 25,000 ರೂ., ದ್ವಿತೀಯ 15,000 ರೂ., ಮತ್ತು ತೃತೀಯ ಬಹುಮಾನ 10000 ರೂ. ನೀಡಲಾಗುತ್ತದೆ. 14 ವರ್ಷ ಮೇಲ್ಪಟ್ಟವರಿಗೆ ಓಟದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಿದ್ದು, ಬ್ಯಾಂಕ್‌ನ ಯಾವುದಾದರೂ ಶಾಖೆಯಲ್ಲಿ ಹೆಸರು ನೋಂದಾಯಿಸಬಹುದು ಎಂದರು.

ಬರ ಗೆದ್ದ ಕೃಷಿಕರೊಂದಿಗೆ ಸಂವಾದ: ಅಂದು ಮಧ್ಯಾಹ್ನ 12 ಗಂಟೆಗೆ ನಗರದ ಜಿಪಂ ನಜೀರ್‌ ಸಭಾಂಗಣದಲ್ಲಿ
ಬರ ಗೆದ್ದ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಛಲದಿಂದ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿ, ನಾಡಿನ ಕೃಷಿಕರಿಗೆ ಮಾದರಿಯಾಗಿ, ಅನೇಕರಿಗೆ ಮಾರ್ಗದರ್ಶನ ನೀಡುತ್ತಿರುವ ಬರ ಗೆದ್ದ ಅನೇಕ ರೈತರನ್ನು ಭೇಟಿ ಮಾಡಿ, 45 ಸಾಧಕರನ್ನು ಗುರುತಿಸಿ, ಸಂವಾದಕ್ಕೆ ಆಯ್ಕೆ ಮಾಡಲಾಗಿದೆ. ಈ ಸಾಧಕರು ಕೃಷಿಯನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆ, ಶ್ರಮ, ಗುರಿ ತಲುಪಿದ ಯೋಜನೆ (ಪ್ಲಾನಿಂಗ್‌), ಯಶಸ್ಸು, ಎದುರಿಸಿದ ಸವಾಲುಗಳು, ಗುರಿ ತಲುಪಿದಾಗ ಸಿಕ್ಕ ಸಮಾಧಾನ ಬಗ್ಗೆ ಮನದಾಳದ ಮಾತುಗಳ ಮೂಲಕ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಎಂದರು.

Advertisement

ಸಿರಿಧಾನ್ಯ ಖಾದ್ಯ ಸ್ಪರ್ಧೆ: ನಗರದ ಬಸವ ಭವನದಲ್ಲಿ ಉತ್ತರ ಕರ್ನಾಟಕದ ಮರೆತು ಹೋದ ತಿನಿಸು, ಸಿರಿಧಾನ್ಯ
ಖಾದ್ಯಗಳ ತಯಾರಿಕೆ ಸ್ಪರ್ಧೆ ಮತ್ತು ಕಡ್ಡಾಯ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯು ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದು, ಕೊನೆಯ ಸುತ್ತಿನಲ್ಲಿ ಮೆಗಾ ಫೈನಲ್‌ (ಬಳ್ಳಾರಿಯಲ್ಲಿ) ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದವರು, ಮೆಗಾ ಫೈನಲ್‌ಗೆ ಆಯ್ಕೆಯಾಗಲಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಪ್ರಥಮ 10,000 ರೂ., ದ್ವಿತೀಯ 7500 ರೂ., ಮತ್ತು ತೃತೀಯ ಬಹುಮಾನವಾಗಿ 5000 ರೂ. ನೀಡಲಾಗುತ್ತದೆ. ಮೆಗಾ ಫೈನಲ್‌ ನಲ್ಲಿ ಪ್ರಥಮ ಸ್ಥಾನಕ್ಕೆ 25,000 ರೂ., ದ್ವಿತೀಯ 15,000 ರೂ., ತೃತೀಯ
ಸ್ಥಾನಕ್ಕೆ 10,000 ರೂ. ನೀಡಲಾಗುತ್ತದೆ ಎಂದರು.

ಜಿಲ್ಲಾವಾರು ಮತ್ತು ಮೆಗಾ ಫೈನಲ್‌ನ ಎಲ್ಲಾ ಸ್ಪರ್ಧೆಗಳಲ್ಲೂ ಜನಪ್ರಿಯ ನಟ, ಸಿಹಿ ಕಹಿ ಚಂದ್ರು ಪ್ರಮುಖ ತೀರ್ಪುಗಾರರು. ಸಮನ್ವಯ ತೀರ್ಪುಗಾರರಾಗಿ ಮರ್ಚೇಡು ಮಲ್ಲಿಕಾರ್ಜುನಗೌಡ ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಸುಕೃತ ಕೃಷಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಾಧಕರಿಗೆ ಸನ್ಮಾನ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 1 ಲಕ್ಷ ರೂ. ಪಾರಿತೋಷಕ ನೀಡಲಾಗುತ್ತದೆ ಎಂದರು. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಅಗ್ನಿಹೋತ್ರಿ, ಕಾರ್ಯದರ್ಶಿ ವೆಂಕಟೇಶ್‌ ರಾವ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next