ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್ ಸುಖು ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದೆ. ಇತರ ನಾಯಕರೊಂದಿಗೆ ಚರ್ಚಿಸಿದ ನಂತರ ಇಂದು ಸಂಜೆಯೊಳಗೆ ಅವರ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದೆ ವೇಳೆ ಹುದ್ದೆಗೆ ಪ್ರಬಲ ಆಕಾಂಕ್ಷಿ ಯಾಗಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ವೀರಭದ್ರ ಸಿಂಗ್ ಬೆಂಬಲಿಗರು ಶಿಮ್ಲಾದಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಾ ಅವರಿಗೆ ಹೈಕಮಾಂಡ್ ಹುದ್ದೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಪ್ರತಿಭಾ ವೀರಭದ್ರ ಸಿಂಗ್, ಸುಖು ಮತ್ತು ಇತರರು ಪರಸ್ಪರ ಸಂವಾದ ನಡೆಸಿದ್ದಾರೆ.
”ಹೈಕಮಾಂಡ್ ನಿರ್ಧಾರದ ಬಗ್ಗೆ ನನಗೆ ಇನ್ನೂ ತಿಳಿದಿಲ್ಲ. ನಾನು ಸಂಜೆ 5 ಗಂಟೆಗೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಹೋಗುತ್ತಿದ್ದೇನೆ” ಎಂದು ಕಾಂಗ್ರೆಸ್ ನಾಯಕ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
”ನಾವೆಲ್ಲರೂ ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆ. ಎಲ್ಲ ಜನರ ನಡುವೆ ಸೌಹಾರ್ದತೆ ಮೆರೆಯುವ ಮೂಲಕ ಕಾಂಗ್ರೆಸ್ ಪಕ್ಷ ಮುನ್ನಡೆಯುತ್ತಿದೆ. ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಸುಖು ಹೇಳಿಕೆ ನೀಡಿದ್ದಾರೆ.
58 ರ ಹರೆಯದ ಸುಖು ಹಿಮಾಚಲ ಪ್ರದೇಶದ ನಾದೌನ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2013 ರಿಂದ 2019 ರವರೆಗೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.