Advertisement

ಸುಖಾನಂದ ಶೆಟ್ಟಿ ಕೊಲೆ ಪ್ರಕರಣ: 17 ಮಂದಿ ಆರೋಪಿಗಳು ಖುಲಾಸೆ

09:25 AM Mar 29, 2018 | Karthik A |

ಮಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ 17 ಮಂದಿ ಆರೋಪಿಗಳನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಖುಲಾಸೆಗೊಳಿಸಿ ಬುಧವಾರ ತೀರ್ಪು ನೀಡಿದೆ.

Advertisement

ನವಾಜ್‌, ನೌಷಾದ್‌, ಶಾಕಿರ್‌, ಮೊಹಮ್ಮದ್‌ ಅಜೀಜ್‌, ಮೊಹಮ್ಮದ್‌ ರಫೀಕ್‌, ಅಬ್ದುಲ್‌ ಖಾದರ್‌ ಅಲಿ, ಪಿ.ಕೆ.ಅಯ್ಯೂಬ್‌, ಮೊಹಮ್ಮದ್‌ ಅಶ್ರಫ್, ಫಾತಿಮಾ ಝೊಹರಾ, ಸಲೀಂ, ಖಲಂದರ್‌ ಬಜಪೆ, ರೆಹಮತ್‌ ಖಲಂದರ್‌, ಅಜೀಜ್‌ ಯಾನೆ ಯುರೋಪಿಯನ್‌ ಅಜೀಜ್‌, ನಿಜಾಮುದ್ದೀನ್‌, ಮೊಹಮ್ಮದ್‌ ಯಾನೆ ಸಾದಾ ಮೊಹಮ್ಮದ್‌, ಅಪ್ರೋಜ್‌, ನಾಸಿರ್‌ ದೋಷಮುಕ್ತಗೊಂಡವರು. ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್‌ ವಿಫ‌ಲವಾದ ಹಿನ್ನೆಲೆಯಲ್ಲಿ  ದೋಷಮುಕ್ತಗೊಳಿಸಲಾಗಿದೆ.

ಒಟ್ಟು 23 ಆರೋಪಿಗಳಿದ್ದರು
ಪ್ರಕರಣದಲ್ಲಿ ಒಟ್ಟು 23 ಆರೋಪಿಗಳಿದ್ದರು. ಈ ಪೈಕಿ ಮೂಲ್ಕಿ ರಫೀಕ್‌ ಉಡುಪಿ ರೈಲು ನಿಲ್ದಾಣದಲ್ಲಿ ಹಾಗೂ ಬುಲೆಟ್‌ ಸುಧೀರ್‌ ಯಾನೆ ಆತಿಕ್‌ ಕುಂದಾಪುರ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. ಮಾಡೂರು ಯೂಸುಫ್ ಮಂಗಳೂರು ಜೈಲಿನಲ್ಲಿ ಹಾಗೂ ಕಬೀರ್‌ ಗುರುಪುರ ಬಳಿ ಕೊಲೆಯಾಗಿದ್ದರು. ಇಬ್ಬರು ತಲೆಮರೆಸಿಕೊಂಡಿದ್ದಾರೆ. ಒಟ್ಟು 72 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. 

ಪ್ರಕರಣದ ಹಿನ್ನೆಲೆ
2006 ಡಿ.1ರಂದು ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಮೇಲೆ ಕುಳಾಯಿ ಹೊನ್ನಕಟ್ಟೆಯಲ್ಲಿರುವ ಅವರ ಮಾರ್ಬಲ್‌ ಟ್ರೇಡ್‌ ಕಂಪೆನಿ ಆವರಣದಲ್ಲಿ ಕ್ವಾಲಿಸ್‌ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮರಣಾಂತಿಕ ದಾಳಿ ನಡೆಸಿದ್ದರು. ತೀವ್ರ ಸ್ವರೂಪದ ಗಾಯಗೊಂಡಿದ್ದ  ಸುಖಾನಂದ ಶೆಟ್ಟಿ ಅವರನ್ನು ತತ್‌ಕ್ಷಣ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಸಾವನ್ನಪ್ಪಿ ದ್ದರು. ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಆಗಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಯಾನಂದ್‌ ಅವರು ಇನ್ಸ್‌ಪೆಕ್ಟರ್‌ ಡಾ| ಎಚ್‌. ಎನ್‌. ವೆಂಕಟೇಶ ಪ್ರಸನ್ನ ನೇತೃತ್ವದಲ್ಲಿ ವಿಶೇಷ ಪೊಲೀಸ್‌ ತಂಡವನ್ನು ರಚಿಸಿ ಕೊಲೆಗೆ ಹಣಕಾಸು ನೆರವು ನೀಡಿದ್ದವರ ಸಹಿತ ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಗುರುಪುರ ನಿವಾಸಿ ಅಕ್ಬರ್‌ ಕಬೀರ್‌ ಪ್ರಮುಖ ಆರೋಪಿಯಾಗಿದ್ದ. ಆರೋಪಿಗಳಿಗೆ ಮೂಲ್ಕಿ ರಫೀಕ್‌ ಹಣಕಾಸು ನೆರವು ನೀಡಿದ್ದ ಎಂದು ಆರೋಪಿಸಲಾಗಿತ್ತು. ಆರೋಪಿಗಳ ಪರವಾಗಿ ಬಿ. ನಾರಾಯಣ ವಾದಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next