ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠವನ್ನು ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೇ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕವಾಗಿಯೂ ಬೆಳೆಸಿದವರು ಶ್ರೀ ಸುಜಯೀಂದ್ರ ತೀರ್ಥರು ಎಂದು ಪೀಠಾಪತಿ ಶ್ರೀಸುಬುಧೇಂದ್ರ ತೀರ್ಥರು ಬಣ್ಣಿಸಿದರು.
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಜಯೀಂದ್ರ ತೀರ್ಥರ ಜನ್ಮಾಷ್ಟೋತ್ತರ ಶತಮಾನೋತ್ಸವ ಹಾಗೂ ಪೀಠಾರೋಹಣದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು. ಅಂಥ ಮಹಾನುಭಾವರ ಸ್ಮರಣೆ ನಿಮಿತ್ತ ಉತ್ಸವ ತ್ರಯದ ಸಮಾರಂಭ ಆಚರಿಸುತ್ತಿರುವುದು ವಿಶೇಷ ಎಂದು ಹೇಳಿದರು.
ಶ್ರೀಮಠದ 37ನೇ ಪೀಠಾಧಿಪತಿಗಳಾಗಿದ್ದ ಅವರು ಸತತ 23 ವರ್ಷ ಸಾಕಷ್ಟು ಶ್ರಮಿಸಿದ್ದರು. ಅಂದು ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಇಂದು ಶ್ರೀಮಠ ನಡೆಯುತ್ತಿದೆ. ದೇಶ ಮಾತ್ರವಲ್ಲದೇ ವಿದೇಶದಲ್ಲೂ ಮಠದ ಖ್ಯಾತಿ ಬೆಳೆದಿದೆ ಎಂದು ಹೇಳಿದರು.
ಶ್ರೀಸುಜಯೀಂದ್ರ ತೀರ್ಥರ ಆರ್ಶೀವಾದದಿಂದ ಆಧ್ಯಾತ್ಮಿಕ ವಿದ್ವಾಂಸರು ಸಾಕಷ್ಟು ಸಾಧನೆ ಮಾಡಿದ್ದಾರೆ. ಜ್ಞಾನಾರ್ಜನೆಗೆ ಅವರು ಸದಾ ಒತ್ತು ನೀಡಿದ್ದರು. ಅಲ್ಲದೇ ಭಜನಾ ಮಂಡಳಿಗಳ ಸಂಘಟನೆಗೂ ಶ್ರೀಮಠವು ಮುಂದಾಗಿದೆ ಎಂದು ಹೇಳಿದರು.
ಈ ನಿಮಿತ್ತ ಶ್ರೀಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ಬೆಳಗಿನ ಜಾವ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಸ್ಥಾನ ಶ್ರೀಮೂಲರಾಮದೇವರ ಪೂಜೆ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.