ಮುಂಬಯಿ: ಇಲ್ಲಿನ ಮಾಹಿಮ್ ಸಮುದ್ರ ತೀರ ಪ್ರದೇಶದಲ್ಲಿ ಮಕ್ದೂಮ್ ಶಾ ಬಾಬಾ ಮಂದಿರದ ಸಮೀಪ ಕಡಲಲ್ಲಿ ತೇಲಿ ಬಂದ ಕಪ್ಪು ಬಣ್ಣದ ಪುಟ್ಟ ಸೂಟ್ ಕೇಸೊಂದನ್ನು ತೆರೆದ ಪೊಲೀಸರು ಅರೆ ಕ್ಷಣ ಬೆಚ್ಚಿಬಿದ್ದಿದ್ದರು. ಕಿನಾರೆಯಲ್ಲಿ ಸಾಗುತ್ತಿದ್ದವರು ಸುಮುದ್ರದಲ್ಲಿ ತೇಲಿ ಬರುತ್ತಿದ್ದ ಕಪ್ಪು ಬಣ್ಣದ ಸೂಟ್ ಕೇಸೊಂದನ್ನು ನೋಡಿ ಗಾಬರಿಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.
ಆ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಸೂಟ್ ಕೇಸನ್ನು ದಡಕ್ಕೆ ತಂದು ಅದನ್ನು ತೆರೆದು ಪರಿಶೀಲಿಸತೊಡಗಿದರು. ಆ ಸಂದರ್ಭದಲ್ಲಿ ಅವರಿಗೆ ಸೂಟ್ ಕೇಸ್ ಒಳಗಡೆ ಭುಜದಿಂದ ಬೇರ್ಪಡಿಸಲ್ಪಟ್ಟ ಒಂದು ಕೈ ಮತ್ತು ಕಾಲಿನ ಒಂದು ಭಾಗ ಹಾಗೂ ಗಂಡಸಿನ ಮರ್ಮಾಂಗದ ಭಾಗಗಳನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಸಾವರಿಸಿಕೊಂಡು ಈ ಎಲ್ಲಾ ದೇಹ ಭಾಗಗಳನ್ನು ಪೊಲೀಸರು ಸಮೀಪದ ಸಿಯಾನ್ ಆಸ್ಪತ್ರಗೆ ಪರಿಶೀಲನೆಗೆಂದು ಕಳುಹಿಸಿಕೊಟ್ಟಿದ್ದಾರೆ.
ಸ್ಥಳೀಯ ಮೀನುಗಾರರು ಮತ್ತು ಕರಾವಳಿ ತೀರ ಪಡೆಗಳನ್ನೊಳಗೊಂಡ ತಂಡವನ್ನು ರಚಿಸಿ ಕೊಲೆಯಾಗಿರಬಹುದಾದ ವ್ಯಕ್ತಿಯ ದೇಹವನ್ನು ಸುಮದ್ರದಲ್ಲಿ ಮತ್ತು ತೀರ ಪ್ರದೇಶದಲ್ಲಿ ಹುಡುಕುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೇ ಈ ಭಾಗದ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ ಗಳ ತಪಾಸಣೆಯನ್ನೂ ಸಹ ಪೊಲೀಸರು ನಡೆಸುತ್ತಿದ್ದಾರೆ.
ಕೊಲೆಯಾಗಿರಬಹುದಾದ ವ್ಯಕ್ತಿಯ ಗುರುತನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ. ಇದಕ್ಕಾಗಿ ನಗರ ಠಾಣೆಗಳಲ್ಲಿ ಮತ್ತು ನಗರದ ಹೊರಭಾಗದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ಕುರಿತಾಗಿಯೂ ಪೊಲೀಸರು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ 302 (ಕೊಲೆ) ಮತ್ತು 201 (ಅಪರಾಧ ಸಂಬಂಧಿ ಪುರಾವೆ ನಾಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.