Advertisement

ಸಮಸ್ಯೆ ಪರಿಹಾರಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆಗೆ ಒತ್ತಾಯ

03:02 PM Mar 13, 2022 | Team Udayavani |

ಬೆಳಗಾವಿ: ಮೂರು ಜಿಲ್ಲೆಗಳ ವ್ಯಾಪ್ತಿಯ ವಾಯವ್ಯ ಶಿಕ್ಷಕ ಮತಕ್ಷೇತ್ರದಲ್ಲಿ ಅರ್ಧಕ್ಕಿಂತ ಹೆಚ್ಚು ಶಿಕ್ಷಕರು ಬೆಳಗಾವಿಯಲ್ಲಿದ್ದಾರೆ. ಅವರ ಸಮಸ್ಯೆಯನ್ನು ಈಡೇರಿಸಿಕೊಳ್ಳಲು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಹಾಗೂ ಜಿಲ್ಲಾಧ್ಯಕ್ಷ ಎಸ್‌.ಎಸ್‌. ಮಠದ ಹೇಳಿದರು.

Advertisement

ನಗರದ ಧರ್ಮನಾಥ್‌ ಭವನದಲ್ಲಿ ಶನಿವಾರ ನಡೆದ ಬೆಳಗಾವಿ ಜಿಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಆಡಳಿತ ಮಂಡಳಿ ಮತ್ತು ಶಿಕ್ಷಕರ ಒಕ್ಕೂಟದಿಂದ ಶಿಕ್ಷಕರ ಹಾಗೂ ಆಡಳಿತ ಮಂಡಳಿಗಳ ಶೈಕ್ಷಣಿಕ ಸಮಸ್ಯೆಗಳು ಮತ್ತು ಬೇಡಿಕೆಗಳ ಚರ್ಚೆ, ವಾಯವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಚಿಂತನ, ಮಂಥನ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಜಿಲ್ಲೆಗೆ ಪ್ರತಿನಿಧಿತ್ವದ ಕೂಗು ಕೇಳುವುದರಲ್ಲಿ ತಪ್ಪಿಲ್ಲ. ಶಿಕ್ಷಕರು ದೇಶ ಕಟ್ಟುವವರು. ಅನ್ಯಾಯದ ವಿರುದ್ಧ ಸಿಡಿದೇಳಬೇಕಿದೆ. ಶಿಕ್ಷಕರ ಅಳಲಿನ ಸಂಕೇತವನ್ನು ಶಿಕ್ಷಕ ಒಕ್ಕೂಟಗಳೇ ಸ್ಪಂದಿಸಬೇಕಿದೆ ಎಂದರು.

ಕಾಲ್ಪನಿಕ ವೇತನ ಬಡ್ತಿ, 1995-96ರಿಂದ 2014-15ನೇ ಸಾಲಿನ ಪ್ರಾರಂಭಿಸಲಾದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಸಹಾಯ ಅನುದಾನಕ್ಕೆ ಒಳಪಡಿಸುವುದು, ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ, ಅವೈಜ್ಞಾನಿಕ ವರ್ಗಾವಣೆ ಕಾಯ್ದೆ ತಿದ್ದುಪಡಿ, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ನಮಗೆ ನಮ್ಮ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ ಎಂದರು.

ಬೆಳಗಾವಿ 15 ತಾಲೂಕುಗಳಲ್ಲಿ ಹಂಚಿಕೆ ಆಗಿರುವ ದೊಡ್ಡ ಜಿಲ್ಲೆ. ಶೈಕ್ಷಣಿಕವಾಗಿ ಹದಿನೈದು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹೊಂದಿದೆ. ಎರಡು ಉಪ ನಿರ್ದೇಶಕರ ಕಚೇರಿ, ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಹೊಂದಿರುತ್ತದೆ. ಜಿಲ್ಲೆಯಲ್ಲಿ ಬೆಳಗಾವಿ ದಕ್ಷಿಣ ಜಿಲ್ಲೆಯಲ್ಲಿ 7 ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದು, 142 ಸರಕಾರಿ ಮತ್ತು 358 ಅನುದಾನಿತ ಅನುದಾನರಹಿತ ಪ್ರೌಢಶಾಲೆಗಳನ್ನು ಹೊಂದಿದೆ. ಒಟ್ಟು 500 ಪ್ರೌಢಶಾಲೆಗಳನ್ನು ಬೆಳಗಾವಿ ದಕ್ಷಿಣ ಜಿಲ್ಲೆ ಹೊಂದಿದೆ. ಒಟ್ಟು 32 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅದೇ ರೀತಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು 8 ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯನ್ನು ಹೊಂದಿದ್ದು, ಅದರಲ್ಲಿ 214 ಸರಕಾರಿ ಪ್ರೌಢಶಾಲೆಗಳು, 375 ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಯನ್ನು ಹೊಂದಿದೆ. ಒಟ್ಟು 589 ಪ್ರೌಢಶಾಲೆಗಳಿದ್ದು, ಒಟ್ಟು 36,000 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಅಭ್ಯಸಿಸುತ್ತಿದ್ದಾರೆ ಎಂದರು.

ಅದೇ ರೀತಿ ಬೆಳಗಾವಿ ಜಿಲ್ಲೆಯು ಪದವಿಪೂರ್ವ ಶಿಕ್ಷಣ ಇಲಾಖೆಯ ಎರಡು ಉಪ ನಿರ್ದೇಶಕರ ಕಚೇರಿಗಳನ್ನು ಹೊಂದಿದ್ದು, ಜಿಲ್ಲೆಯು 30 ಸರ್ಕಾರಿ ಮತ್ತು ಅನುದಾನಿತ ಅನುದಾನರಹಿತ 136 ಒಟ್ಟು 166 ಪದವಿ ಪೂರ್ವ ವಿದ್ಯಾಲಯವನ್ನು ಹೊಂದಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು 32 ಸರ್ಕಾರಿ 170 ಅನುದಾನಿತ ಅನುದಾನ ರಹಿತ ಒಟ್ಟು 202 ಪದವಿಪೂರ್ವ ಮಹಾವಿದ್ಯಾಲಯಗಳನ್ನು ಹೊಂದಿದೆ. ಜಿಲ್ಲೆಯು ಹತ್ತು ಸರಕಾರಿ ಮತ್ತು 122 ಅನುದಾನಿತ ಅನುದಾನರಹಿತ ಒಟ್ಟು 132 ಮಹಾವಿದ್ಯಾಲಯ ಹೊಂದಿದೆ ಎಂದು ಹೇಳಿದರು.

Advertisement

ಒಟ್ಟಾರೆಯಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸರಕಾರಿ ಮತ್ತು ಅನುದಾನ ರಹಿತ ಅನುದಾನಿತ ಶಾಲೆಗಳಲ್ಲಿ ಒಟ್ಟಾರೆ 9000 ಶಿಕ್ಷಕರು ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 3500 ಉಪನ್ಯಾಸಕರು ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 12000 ಶಿಕ್ಷಕ ಮತದಾರರು ನೋಂದಣಿ ಹೊಂದಿದ್ದಾರೆ. ಈ ಎಲ್ಲ ಅಂಶಗಳಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಅಭ್ಯರ್ಥಿ ಆಯ್ಕೆಗೆ ಅವಕಾಶ ಮಾಡಿಕೊಡಬೇಕು ಎಂದರು. ಇಷ್ಟೆಲ್ಲಾ ಮತದಾರರನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡುತ್ತಿರುವುದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಮತದಾರರು ಒಟ್ಟಾಗಿ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಬೆಳಗಾವಿ ಜಿಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ರಾಮು ಗುಗವಾಡ ಒತ್ತಾಯಿಸಿದರು.

ಡಾ| ಎ.ಆರ್‌. ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡೈಸ್‌ ಬೋರ್ಡ್‌ ಆಫ್‌ ಎಜುಕೇಶನ್‌ ಆ್ಯಂಡ್‌ ಸೊಸಿಯಲ್‌ ವೆಲ್ಫೆàರ್‌ ಕಾರ್ಯದರ್ಶಿ ಫಾದರ್‌ ನೆಲ್ಸನ್‌ ಪಿಂಟೋ, ಪಿ.ಪಿ. ಬೆಳಗಾಂವಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next