Advertisement
ವಿಧೇಯತೆಯಿಂದ ವ್ಯಕ್ತಿಯೊಬ್ಬರು ಜೇಬಿಗೆ ಕೈ ಹಾಕಿಕೊಂಡು ನಿಂತಿರುವ ಚಿತ್ರ ವಿಜಯ ಬ್ಯಾಂಕ್‌ನ ಲೋಗೋ. ಈ ಲೋಗೊ ಕಳೆದ 52 ವರ್ಷಗಳಿಂದ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ; ಮುಂಚೂಣಿಯಲ್ಲಿರುವ ದೇಶದ ಯಾವುದೇ ಬ್ಯಾಂಕ್ ಕೂಡ ಈ ರೀತಿಯ ಮನುಷ್ಯನ ಚಿತ್ರದ ಲೋಗೋವನ್ನು ಹೊಂದಿಲ್ಲ. ಅಷ್ಟಕ್ಕೂ ಈ ಲೋಗೋದ ಸಂಕೇತ ಹಾಗೂ ಸಂದೇಶ ವಿನಮ್ರತೆ, ಪ್ರಾಮಾಣಿಕತೆ ಹಾಗೂ ಸಭ್ಯತೆ.
Related Articles
ಬ್ಯಾಂಕ್‌ನ ಕೋರಿಕೆ ಮೇರೆಗೆ ಪ್ರಭಾಕರ್ ಅವರು ಪೆನ್ಸಿಲ್ ಬಳಸಿಕೊಂಡು ಈ ಲೋಗೋವನ್ನು ಚಿತ್ರಿಸಿದ್ದಾರೆ. ಅನಂತರ ಬ್ಯಾಂಕ್‌ನವರು ಈ ಲೋಗೋಗೆ ಸೂಕ್ತ ಬಣ್ಣವನ್ನು ಕೊಟ್ಟು ಅಧಿಕೃತ ಲಾಂಛನವನ್ನಾಗಿ ಘೋಷಣೆ ಮಾಡಿದ್ದರು. ಕೆಲವು ವರ್ಷಗಳ ಹಿಂದೆ ಸಂಭವಿಸಿದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಭಾಕರ್ ಸದ್ಯ ಪತ್ನಿ ಉಷಾ ಪಿ. ರೈ ಹಾಗೂ ಮಕ್ಕಳ ಜತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
Advertisement
ಲಾಂಛನ ಬದಲಾವಣೆ ಪ್ರಸ್ತಾವದ ಹಿನ್ನೆಲೆ ಯಲ್ಲಿ ಪತ್ರಿಕೆಯು ಅವರನ್ನು ಸಂಪರ್ಕಿಸಿದಾಗ “ನಾನು ಕ್ಲರ್ಕ್ ಆಗಿ ವಿಜಯ ಬ್ಯಾಂಕ್‌ಗೆ ಸೇರಿ ಕೊಂಡಿದ್ದೆ. 1965ರ ವೇಳೆಗೆ ಬ್ಯಾಂಕ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು ಇರಲಿಲ್ಲ. ಚಿತ್ರ ಬಿಡಿಸುವ ಹವ್ಯಾಸವಿತ್ತು¤. ಬ್ಯಾಂಕ್ ಬಹಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ ಅಷ್ಟರವರೆಗೆ ಯಾವುದೇ ಲಾಂಛನವಿರಲಿಲ್ಲ. ಆಡಳಿತ ಮಂಡಳಿ ನಮಗೊಂದು ಲೋಗೋ ಬೇಕಾಗಿದೆ ಎಂದಾಗ ಅದನ್ನು ರೂಪಿಸುವ ಅವಕಾಶ ನನ್ನ ಪಾಲಿಗೆ ಬಂತು’ ಎಂದು ರೈ ನೆನಪಿಸಿಕೊಂಡರು.
“ಹೆಚ್ಚಾ ಕಡಿಮೆ ಆಗ ನನಗೆ 45 ವರ್ಷ. ಆಗ ನನ್ನ ಮನಸ್ಸಿನಲ್ಲಿ ಬಂದ ಯೋಚನೆಯಂತೆ ನಂಬಿಕೆ, ವಿಧೇಯತೆ ಸೂತ್ರವನ್ನು ಇಟ್ಟುಕೊಂಡು ಈ ಚಿತ್ರ ಬರೆದೆ. ಬ್ಯಾಂಕ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಲೋಗೋ ಬಗ್ಗೆ ಮತ್ತಷ್ಟು ಯೋಚಿಸತೊಡಗಿದೆ. ಸುಮಾರು ಒಂದು ತಿಂಗಳು ಹಲವು ರೀತಿಯ ಚಿತ್ರ ಮಾಡಿದೆ. ಆದರೆ ಕೊನೆಗೂ ನಾನು ಮೊದಲು ಬಿಡಿಸಿದ್ದ ಚಿತ್ರವನ್ನೇ ಲಾಂಛನವಾಗಿ ಆಯ್ಕೆ ಮಾಡಲಾಯಿತು. ಮೊದಲು ಪೆನ್ಸಿಲ್‌ನಲ್ಲಿ ಚಿತ್ರಿಸಿದ್ದರೂ ಅನಂತರ ಬಣ್ಣ ಕೊಟ್ಟು ಆಕರ್ಷಕಗೊಳಿಸಲಾಯಿತು. ವಿಶೇಷವೆಂದರೆ ಈ ಲಾಂಛನ ತಯಾರಿಸಲು ಸಂಭಾವನೆ ಅಥವಾ ಯಾವುದೇ ಮನ್ನಣೆ ಪಡೆದುಕೊಂಡಿಲ್ಲ. ಒಂದುವೇಳೆ ಬ್ಯಾಂಕ್ ಈಗ ಈ ಲಾಂಛನ ಬದಲಿಸುವುದಾದರೆ ಅದಕ್ಕೆ ನನ್ನ ವಿರೋಧವಿದೆ. ಬಿಲ್‌ಕುಲ್ ಇದಕ್ಕೆ ನಾನು ಒಪ್ಪುವುದಿಲ್ಲ’ ಎನ್ನುತ್ತಾರೆ. ಲೋಗೋ ಬದಲಾವಣೆಯ ಉದ್ದೇಶವೇನು
ವಿಜಯ ಬ್ಯಾಂಕ್ 2006ರಲ್ಲಿ ತನ್ನ ಟ್ಯಾಗ್‌ಲೈನ್ ಸೇರಿದಂತೆ ಲೋಗೋದ ಬಣ್ಣವನ್ನು ಬದಲಾಯಿಸಿತ್ತು. ನಮ್ರತೆ, ವಿಧೇಯತೆ, ನಂಬಿಕೆ, ಸ್ನೇಹಪರತೆಗೆ ಸಾಕ್ಷಿಯಾಗಿ ಹಲವು ವರ್ಷಗಳಿಂದ ಜಾರಿಯಲ್ಲಿರುವ ಲೋಗೋವನ್ನು ಬದಲು ಮಾಡುವುದಕ್ಕೆ ಈಗ ಕಾರಣಗಳೇ ಇಲ್ಲ. ಆ ಲೋಗೋದಿಂದ ವಹಿವಾಟಿಗೆ ಏನಾದರೂ ತೊಂದರೆಯಾಗಿದ್ದರೆ ಅಥವಾ ಹೊಸ ಲೋಗೋದಿಂದ ವಹಿವಾಟಿಗೆ ಏನಾದರೂ ಲಾಭವಾಗುವುದಾದರೆ ಅದನ್ನು ಒಪ್ಪಬಹುದು. ಅದು ಬಿಟ್ಟು, ಏಕಾಏಕಿ ಲೋಗೋ ಬದಲಾವಣೆ ಮಾಡುವ ಅಗತ್ಯವೇನು? ಎನ್ನುವುದು ವಿಜಯ ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಹಾಗೂ ವಿಜಯ ಬ್ಯಾಂಕ್ ಆಫೀಸರ್ಸ್ ಯೂನಿಯನ್ ಮಂಗಳೂರು ವಲಯ ಮಾಜಿ ಅಧ್ಯಕ್ಷ ಮೂಲ್ಕಿ ಕರುಣಾಕರ ಶೆಟ್ಟಿ ಅವರ ಪ್ರಶ್ನೆ. ಬ್ಯಾಂಕಿನ ಲಾಂಛನ ಬದಲಾವಣೆ ಹೇಳುವುದಕ್ಕೆ ಸಣ್ಣ ವಿಚಾರ. ಆದರೆ ಅದಕ್ಕೆ ನೂರಾರು ಕೋಟಿ ರೂ. ವ್ಯಯವಾಗುತ್ತದೆ. ಲೋಗೋ ಬದಲಾಯಿಸಿದರೆ ಅ ಬ್ಯಾಂಕಿನ ಸಾವಿರಾರು ಶಾಖೆಗಳ ಮುಖ್ಯ ಬೋರ್ಡ್, ಲಕ್ಷಾಂತರ ಜಾಹೀರಾತು ಫಲಕ, ಬ್ಯಾಂಕಿನ ಲೋಗೋ ಇರುವ ಚೆಕ್, ಪಾಸ್‌ಪುಸ್ತಕ ಸೇರಿದಂತೆ ಎಲ್ಲ ರೀತಿಯ ವ್ಯವಹಾರಗಳಲ್ಲಿಯೂ ಬದಲಾವಣೆ ಮಾಡಬೇಕಾಗುತ್ತದೆ ಎನ್ನುವುದು ವಿಜಯ ಬ್ಯಾಂಕ್ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ನಾಯಕ್ ಅಭಿಪ್ರಾಯ.