Advertisement

ಕನಿಷ್ಠ ವೇತನ ಜಾರಿಯಾಗದಿದ್ದರೆ ಆತ್ಮಹತ್ಯೆ ಎಚ್ಚರಿಕೆ

01:39 PM Jul 01, 2019 | Suhan S |

ಹಾವೇರಿ: ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕೂಡಲೇ ಕನಿಷ್ಠ ವೇತನ ಜಾರಿ ಮಾಡಬೇಕು ಇಲ್ಲದಿದ್ದರೆ ಜಿಲ್ಲೆ ಎಲ್ಲ ಗ್ರಂಥಾಲಯ ಮೇಲ್ವಿಚಾರಕರು ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿ ಎದುರು ಪ್ರತಿಭಟನೆ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಸಿದ್ಧರಾಗಿದ್ದೇವೆ. ನಮ್ಮ ಸಾವಿಗೆ ಸರ್ಕಾರ, ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು ಎಚ್ಚರಿಕೆ ನೀಡಿದ್ದಾರೆ.

Advertisement

ರಾಜ್ಯ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘದ ನೇತೃತ್ವದಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಗ್ರಾಪಂ ಗ್ರಂಥಾಲಯಗಳಲ್ಲಿ ಕಳೆದ 30ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಮೊದಲು ಗ್ರಂಥಾಲಯ ಸಮಯ ಎಂಟು ತಾಸು ಇದ್ದು ಗೌರವಧನ 300ರೂ.ಗಳಿಂದ 5500ರೂ. ವರೆಗೆ ಇತ್ತು. 5-8-2016ರಲ್ಲಿ ಕಾರ್ಮಿಕ ಇಲಾಖೆಯು ನಮಗೆ 13200ರೂ. ಕನಿಷ್ಠ ವೇತನ ನಿಗದಿ ಮಾಡಿದ್ದು ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿತು. ಇದಾದ ನಂತರ ನಮಗೆ ಗ್ರಂಥಾಲಯ ಸಮಯವನ್ನು ನಾಲ್ಕು ತಾಸು ಎಂದು ಬದಲಾವಣೆ ಮಾಡಿ, 7000ರೂ. ಗೌರವಧನ ನಿಗದಿಪಡಿಸಿ, ಕನಿಷ್ಠ ವೇತನ ತಡೆಹಿಡಿಯಲಾಗಿದೆ. ಕನಿಷ್ಠ ವೇತನ ನೀಡುವಂತೆ ಹಲವು ಬಾರಿ ಪ್ರತಿಭಟನೆ, ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಂಥಾಲಯ ಮೇಲ್ವಿಚಾರಕರು ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಅನೇಕ ಗ್ರಂಥಾಲಯ ಮೇಲ್ವಿಚಾರಕರು ನಿವೃತ್ತಿ ಹೊಂದಿದ್ದು, ಸಾವಿರಾರು ಜನರು ನಿವೃತ್ತಿ ಅಂಚಿನಲ್ಲಿದ್ದಾರೆ. ಗ್ರಂಥಾಲಯ ಮೇಲ್ವಿಚಾರಕರ ಕುಟುಂಬಕ್ಕೆ ಗ್ರಂಥಾಲಯ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ. ಹೀಗಾಗಿ ಗ್ರಂಥಾಲಯ ಮೇಲ್ವಿಚಾರಕರು ಕುಟುಂಬ ನಿರ್ವಹಣೆ ಮಾಡಲಾಗದೆ ಹತ್ತಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಈಗಲಾದರೂ ಎಚ್ಚೆತ್ತು ಕೆಲಸದ ಅವಯನ್ನು ಮೊದಲಿದ್ದಂತೆ ಎಂಟು ತಾಸು ಮಾಡಿ ಕನಿಷ್ಠ ವೇತನ 13200ರೂ. ನೀಡಬೇಕು ಎಂದು ಕೋರಿದ್ದಾರೆ.

ಮನವಿ ಸಲ್ಲಿಕೆ ವೇಳೆ ಸಂಘಟನೆಯ ಅಧ್ಯಕ್ಷ ನಾಗರಾಜ ಚಲವಾದಿ, ಉಪಾಧ್ಯಕ್ಷ ಎಂ.ಎಫ್‌. ಕಮ್ಮಾರ, ಫಕ್ಕೀರಗೌಡ ಪಾಟೀಲ, ರೇಣುಕಾ ಹುರಳಿ, ಹುಚ್ಚಪ್ಪ ದ್ಯಾವಕ್ಕನವರ, ಪ್ರಕಾಶ ಅಗಸರ, ಜಗದೀಶ ಅಂಬಿಗೇರ, ಎಂ.ಟಿ. ಕರಿಯಣ್ಣನವರ, ವಿ.ಜಿ. ಪಾಟೀಲ, ಶ್ರೀಕಾಂತ ಕಜ್ಜರಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next