ಬಾಗಲಕೋಟೆ : ನನ್ನ ಗಂಡ 25 ವರ್ಷದಿಂದ ನೌಕರಿ ಮಾಡಾಕ್‌ತ್ಯಾರ್. 22 ಸಾವಿರ ಪಗಾರ್ ಐತಿ. ಬಾಡಗಿ ಮನ್ಯಾಗ್ ಅದೀವಿ. ಮಕ್ಕಳ ಸಾಲಿ, ಮನಿ ನಡೆಸಾಕ್ ಬಾಳ್ ತೊಂದ್ರಿ ಆಗೈತಿ. ನೌಕ್ರಿ ಇದ್ರೂ ಸಾಲಾ ಮಾಡೂದೇ ಆಗೈತಿ. ಪಗಾರ್ ಇಂದ ಹೆಚ್ಚ ಮಾಡ್ತಾರ್, ನಾಳೆ ಮಾಡ್ತಾರ್ ಅಂತ ಕಾಯ್ದು ಸಾಕಾಗೈತಿ. ಆದ್ರ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಪಗಾರ್ ಹೆಚ್ಚ ಮಾಡಲ್ಲ ಅಂತಾರ್. ನಾವು ಅವರ ಮನಿ ಮುಂದ್ ಹೋಗಿ ಬೆಂಕಿ ಹಚ್ಚಕೊಂಡು ಸಾಯಿತೀವಿ… ಈ ರೀತಿ ಎಚ್ಚರಿಕೆ ಕೊಟ್ಟವರು ಸಾರಿಗೆ ಸಂಸ್ಥೆಯ ನೌಕರರ ಕುಟುಂಬದವರು.
8ನೇ ದಿನದಲ್ಲಿ ಮುಂದುವರಿದ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನವನಗರದ ಬಸ್ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯರು, ಮಕ್ಕಳು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೈಮುಗಿತೀವಿ ಭಿಕ್ಷೆ ಬೇಡಾಕ್ ಹಚ್ಚಬ್ಯಾಡ್ರಿ: ಮುಖ್ಯಮಂತ್ರಿಗಳೇ ನಿಮ ಗ್ ಕೈ ಮುಗಿದು ಕೇಳುತ್ತೇವೆ. ನಮಗೆ ಭಿಕ್ಷೆ ಬೇಡಲು ಹಚ್ಚಬೇಡಿ.
25 ವರ್ಷಗಳ ಕಾಲ ನೌಕರಿ ಮಾಡಿದರೂ 22 ಸಾವಿರ ಪಗಾರ್ ಬರುತ್ತಿದೆ. ಮನೆ ಬಾಡಿಗೆ, ಗ್ಯಾಸ್, ತರಕಾರಿ, ಕಿರಾಣಿ ಸಾಮಗ್ರಿ ಎಲ್ಲವೂ ಹೆಚ್ಚಾಗಿವೆ. ಆದರೆ, ನಮ್ಮ ಮನೆಯವರ ಪಗಾರ್ ಹೆಚ್ಚಾಗಿಲ್ಲ. ನಾವು ಹೇಗೆ ಬದುಕುವುದು. ಪ್ರತಿ ತಿಂಗಳು ಪಗಾರ್ ಬರುವ ಹೊತ್ತಿಗೆ 5ರಿಂದ 8 ಸಾವಿರ ಸಾಲ ಮಾಡುವುದೇ ಆಗೈತಿ. ಮುಂದಿನ ತಿಂಗಳ ಸಾಲ ಕೊಡುತ್ತೇವೆ ಎಂದು ಹೇಳಿದವರಿಗೆ ಮರಳಿ ಸಾಲ ಕೊಡಲು ಆಗುತ್ತಿಲ್ಲ. ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಆಗಿಲ್ಲ. ಸಾರಿಗೆ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದರೂ ಒಂದು ಉತ್ತಮ ಶಾಲೆಗೆ ಮಕ್ಕಳನ್ನು ಹಚ್ಚಲು ಆಗಿಲ್ಲ.
ನಮ್ಮ ಸಮಸ್ಯೆಯನ್ನು ಕಣ್ಣು ತೆರೆದು ನೋಡಿ ಎಂದು ಚಾಲಕರೊಬ್ಬರ ಪತ್ನಿ ತಿಪ್ಪಮ್ಮ ಮಾದರ ಹೇಳುತ್ತ ಕಣ್ಣೀರು ಹಾಕಿದರು. ನಮ್ಮ ಸಮಸ್ಯೆನೂ ಕೇಳಿ: ಸರ್ಕಾರದವರು ತಮ್ಮ ಹೊಲಸು ಮುಚ್ಚಿಕೊಳ್ಳುವಲ್ಲಿ ಬ್ಯೂಸಿ ಆಗಿದ್ದಾರೆ. ಜಾರಕಿಹೊಳಿ ಅವರದು ಮುಚ್ಚಲು ಎಲ್ಲರೂ ಓಡ್ಯಾಡಕತ್ಯಾರ್. ನಮ್ಮ ಸಮಸ್ಯೆ ಹೇಳಿದರೆ ಯಾರೂ ಕೇಳುತ್ತಿಲ್ಲ. ಇಂದಲ್ಲ ನಾಳೆ 6ನೇ ವೇತನ ಆಯೋಗದ ವರದಿಯಂತೆ ಪಗಾರ್ ಹೆಚ್ಚ ಮಾಡ್ತಾರ್ ಅಂತ ಕಾಯುತ್ತಿದ್ದೇವು.
ಕಳೆದ ಬಾರಿ ಪ್ರತಿಭಟನೆ ಮಾಡಿದಾಗ, ಮೂರು ತಿಂಗಳಲ್ಲಿ ಪಗಾರ್ ಹೆಚ್ಚು ಮಾಡುವುದಾಗಿ ಹೇಳಿದ್ದರು. ಇನ್ನೂ ಮಾಡಿಲ್ಲ. ಈಗ 8 ದಿನದಿಂದ ಹೋರಾಟ ಮಾಡುತ್ತಿದ್ದರೂ ಯಡಿಯೂರಪ್ಪ ಅವರು ಪಗಾರ್ ಹೆಚ್ಚ ಮಾಡಲ್ಲ ಅಂತಿದ್ದಾರೆ. ನಾವು ಯಡಿಯೂರಪ್ಪ ಅವರ ಮನೆಯ ಮುಂದೆ ಹೋಗಿ ಬೆಂಕಿ ಹಚ್ಚಿಕೊಂಡು ಸಾಯಲು ಸಿದ್ಧರಾಗಿದ್ದೇವೆ.
ಕೈಮುಗಿದು ಕೇಳುತ್ತಿದ್ದೇವೆ. ನಮ್ಮ ಹೊಟ್ಟಿ ಹಸಿದಿದೆ. ನಮ್ಮ ಹೊಟ್ಟೆಯ ಮೇಲೆ ಸವಾರಿ ಮಾಡಬ್ಯಾಡ್ರಿ ಎಂದು ಬೇಡಿಕೊಂಡರು. ಖಾಸಗಿ ವಾಹನ ಮಾಲೀಕರಿಗೆ ಮನವಿ: ಇದೇ ವೇಳೆ ಬಸ್ ನಿಲ್ದಾಣದಲ್ಲಿ ಸಾಲಾಗಿ ನಿಂತಿದ್ದ ಕ್ರೂಸರ್, ಗೂಡ್ಸ್, ಲಗ್ಝರಿಗಳ ಬಳಿ ಹೋದ ನೌಕರರ ಕುಟುಂಬದವರು ಖಾಸಗಿ ವಾಹನಗಳ ಚಾಲಕರಿಗೆ ಕೈಮುಗಿದು, ನಾವು ತ್ರಾಸ್‌ದೊಳಗ ಇದ್ದೇವೆ. ನಮ್ಮ ಹೋರಾಟಕ್ಕೆ ಬೆಂಬಲ ಕೊಡಿ ಎಂದು ಕೇಳಿಕೊಂಡರು.