Advertisement

9 ಲಕ್ಷ ವಂಚಿಸಿದ್ದ ಆರೋಪಿ ಆತ್ಮಹತ್ಯೆ

01:00 AM May 14, 2019 | Lakshmi GovindaRaj |

ಬೆಂಗಳೂರು: ಸರ್ಕಾರದ ಖಜಾನೆಗೆ ಸೇರಬೇಕಾದ 9 ಲಕ್ಷ ರೂ.ಗಳನ್ನು ಸುಳ್ಳು ದಾಖಲೆ ಸೃಷ್ಟಿಸಿ ಖಾಸಗಿ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಧಾನ ಅಂಚೆ ಕಚೇರಿಯ ಪೋಸ್ಟಲ್‌ ಅಸಿಸ್ಟೆಂಟ್‌, ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ಟಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಆರ್‌.ಟಿ.ನಗರದ ಮುನಿರಾಯನಪಾಳ್ಯ ನಿವಾಸಿ ಎ.ವಿ.ಶ್ರೀನಿವಾಸ ರೆಡ್ಡಿ (29) ಆತ್ಮಹತ್ಯೆ ಮಾಡಿಕೊಂಡವರು. ಶನಿವಾರ ರಾತ್ರಿಯೇ ದುರ್ಘ‌ಟನೆ ನಡೆದಿದ್ದು, ಭಾನುವಾರ ರಾತ್ರಿ 10.30ರ ಸುಮಾರಿಗೆ ಶ್ರೀನಿವಾಸರೆಡ್ಡಿಯ ಸ್ನೇಹಿತರೊಬ್ಬರು ಅವರ ಮನೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶ್ರೀನಿವಾಸ ರೆಡ್ಡಿ, ಕೆಲ ವರ್ಷಗಳಿಂದ ಪ್ರಧಾನ ಅಂಚೆ ಕಚೇರಿಯ ಖಜಾನೆ-2ರಲ್ಲಿ ಪೋಸ್ಟಲ್‌ ಅಸಿಸ್ಟೆಂಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆರ್‌.ಟಿ.ನಗರದ ಮುನಿರಾಯನಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಒಂದೂವರೆ ವರ್ಷದ ಹಿಂದಷ್ಟೇ ಆಂಧ್ರಪ್ರದೇಶ ಮೂಲದ ಯುವತಿಯನ್ನು ಮದುವೆಯಾಗಿದ್ದು, ಏಳು ತಿಂಗಳ ಗರ್ಭಿಣಿಯಾಗಿರುವ ಅವರ ಪತ್ನಿ, ಎರಡು ತಿಂಗಳ ಹಿಂದಷ್ಟೇ ತವರು ಮನೆಗೆ ಹೋಗಿದ್ದಾರೆ. ಹೀಗಾಗಿ ಮನೆಯಲ್ಲಿ ಒಬ್ಬರೇ ಇರುತ್ತಿದ್ದು, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದರು.

ಆತಂಕಗೊಂಡಿದ್ದ ಪತ್ನಿ: ಶನಿವಾರ ರಾತ್ರಿ ಪತ್ನಿಗೆ ಕರೆ ಮಾಡಿ ಮಾತನಾಡಿದ್ದ ಶ್ರೀನಿವಾಸರೆಡ್ಡಿ, ಭಾನುವಾರ ಕಚೇರಿಗೆ ರಜೆಯಿದ್ದರೂ ಬೆಳಗ್ಗೆಯಿಂದ ಒಂದು ಕರೆ ಕೂಡ ಮಾಡಿರಲಿಲ್ಲ. ಸಂದೇಶವನ್ನೂ ಕಳಿಸಿರಲಿಲ್ಲ. ಅಲ್ಲದೆ, ಪತ್ನಿಯೇ ಹತ್ತಾರು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ.

Advertisement

ಅದರಿಂದ ಆತಂಕಗೊಂಡ ಪತ್ನಿ, ಭಾನುವಾರ ರಾತ್ರಿ 9 ಗಂಟೆಗೆ ಅನಂತಪುರ ಜಿಲ್ಲೆಯಲ್ಲಿರುವ ಶ್ರೀನಿವಾಸ ರೆಡ್ಡಿಯ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಗಾಬರಿಗೊಂಡ ಸಹೋದರ ಕೂಡಲೇ ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತನಿಗೆ ಕರೆ ಮಾಡಿ, ಮನೆ ಬಳಿ ಹೋಗಿ ನೋಡುವಂತೆ ಕೇಳಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಮನೆ ಬಳಿ ಬಂದ ಸ್ನೇಹಿತ, ಹತ್ತಾರು ಬಾರಿ ಬಾಗಿಲು ಬಡಿದರೂ ತೆರೆದಿಲ್ಲ. ನಂತರ ಮನೆ ಮಾಲೀಕರನ್ನು ಕರೆತಂದು ಬೀಗ ತೆಗೆಯಲು ಯತ್ನಸಿದಾಗ ಒಳಗಿನಿಂದ ಬಾಗಿಲು ಲಾಕ್‌ ಮಾಡಿಕೊಂಡಿರುವುದು ಗೊತ್ತಾಗಿದೆ. ನಂತರ ಕಿಟಕಿ ಬಳಿ ಹೋಗಿ ನೋಡಿದಾಗ ಶ್ರೀನಿವಾಸ ರೆಡ್ಡಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೆಬ್ಟಾಳ ಪೊಲೀಸರು, ಶ್ರೀನಿವಾಸ ರೆಡ್ಡಿ ಸಹೋದರನನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಆಗ ಅವರ ಸಹೋದರ, “ನಾವು ಆಂಧ್ರಪ್ರದೇಶದಿಂದ ಬರುವವರೆಗೂ ಬಾಗಿಲು ಒಡೆಯಬೇಡಿ’ ಎಂದು ಮನವಿ ಮಾಡಿದ್ದರು. ಹೀಗಾಗಿ ತಡರಾತ್ರಿ 2 ಗಂಟೆ ಸುಮಾರಿಗೆ ಶ್ರೀನಿವಾಸ್‌ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಬಾಗಿಲು ಒಡೆದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ವಂಚನೆ ಪ್ರಕರಣ?: ಶ್ರೀನಿವಾಸ ರೆಡ್ಡಿಗೆ ರಾಜ್ಯ ಸರ್ಕಾರದ ಹಣವನ್ನು ಇಎಂಒ (ಎಲೆಕ್ಟ್ರಾನಿಕ್‌ ಮನಿ ಆರ್ಡರ್‌) ಮೂಲಕ ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಕಳುಹಿಸುವುದು ಮತ್ತು ಫ‌ಲಾನುಭವಿಗಳಿಗೆ ಪಾವತಿಯಾಗದೆ ವಾಪಸ್‌ ಬಂದ ಹಣವನ್ನು ಪುನಃ ರಾಜ್ಯ ಸರ್ಕಾರದ ಖಜಾನೆಗೆ ಜಮಾ ಮಾಡುವ ಜವಾಬ್ದಾರಿ ನೀಡಲಾಗಿತ್ತು.

ಆದರೆ, ಶ್ರೀನಿವಾಸ ರೆಡ್ಡಿ ಮೇ 6ರಂದು 9,16,750 ರೂ. ಮೊತ್ತದ ಚೆಕ್‌ ಅನ್ನು ಸರ್ಕಾರದ ಖಾತೆಗೆ ಜಮೆ ಮಾಡುವ ಬದಲು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು 9 ಖಾಸಗಿ ಖಾತೆಗಳಿಗೆ ವರ್ಗಾವಣೇ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿದ್ದರು.

ಈ ಸಂಬಂಧ ಪ್ರಧಾನ ಅಂಚೆ ಕಚೇರಿಯ ಅಸಿಸ್ಟೆಂಟ್‌ ಸೂಪರಿಟೆಂಡೆಂಟ್‌ ಬಿ.ಜಿ.ತಿಮ್ಮೊಜಿರಾವ್‌ ಅವರು ಮೇ 11ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿದ್ದರು. ಪೊಲೀಸರು ಸದ್ಯದ್ಲಲೇ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಶ್ರೀನಿವಾಸ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಾವಿಗೆ ಯಾರೂ ಕಾರಣರಲ್ಲ: ಶ್ರೀನಿವಾಸ ರೆಡ್ಡಿ ಆತ್ಮಹತ್ಯೆಗೂ ಮೊದಲು ಡೆತ್‌ನೋಟ್‌ ಬರೆದಿಟ್ಟಿದ್ದು, “ನಾನು ಇಲಾಖೆಯ ಲಕ್ಷಾಂತರ ರೂ. ಮೊತ್ತದ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದೇನೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನಾನೇ ಕಾರಣ’ ಎಂದು ಡೆತ್‌ನೋಟ್‌ನಲ್ಲಿ ಶ್ರೀನಿವಾಸ ರೆಡ್ಡಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.

ಬೆಟ್ಟಿಂಗ್‌ನಲ್ಲಿ ಹೂಡಿಕೆ?: ಶ್ರೀನಿವಾಸ ರೆಡ್ಡಿ ಇತ್ತೀಚೆಗೆ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಬೆಟ್ಟಿಂಗ್‌ಗಾಗಿ ಮಾಡಿಕೊಂಡಿದ್ದ ಲಕ್ಷಾಂತರ ರೂ. ಸಾಲ ತೀರಿಸಲು ಇಲಾಖೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎನ್ನಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.