Advertisement

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಡಿಸಿ

05:50 PM Sep 13, 2020 | Suhan S |

ಯಾದಗಿರಿ: ಆತ್ಮಹತ್ಯೆಯು ಸಾಮಾಜಿಕ ವ್ಯವಸ್ಥೆಗೆ ಅಂಟಿದ ಒಂದು ಕಳಂಕವಾಗಿದೆ. ಆತ್ಮಹತ್ಯೆಯು ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಮಾರು 70 ವರ್ಷದ ಹಿಂದೆ ಯಾವುದೇ ಸೌಲಭ್ಯ ಇರಲಿಲ್ಲ. ಆದರೂ ಜನರು ಖುಷಿಯಾಗಿದ್ದರು. ಆದರೆ ಇಂದು ಹಲವು ಸೌಲಭ್ಯಗಳಿದ್ದರೂ ಜನರು ಮಾನಸಿಕವಾಗಿ ಸಂತೋಷವಾಗಿಲ್ಲ. ಆತ್ಮಹತ್ಯೆಗೆ ಬಡತನ ಒಂದೇ ಕಾರಣವಲ್ಲ. ಶ್ರೀಮಂತರು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೊಬೈಲ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ನಲ್ಲಿ ತಮಗೆ ಬಹಷ್ಟು ಜನ ಸ್ನೇಹಿತರು ಇದ್ದಾರೆ ಎಂದು ತೋರಿಸಿಕೊಳ್ಳತ್ತಾರೆ. ಆದರೆ ನಿಜವಾಗಿ ಕಡಿಮೆ ಜನ ಸ್ನೇಹಿತರು ಇರುತ್ತಾರೆ.ಹೀಗಾಗಿ ಅವರು ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಲು ಆಗದೆ ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಾರೆ ಎಂದರು.

ಜೀವನದಲ್ಲಿ ಘಟಿಸುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸದು. ಸಮಸ್ಯೆಗಳು ಇಲ್ಲವೇಕಾರ್ಯಭಾರದ ಒತ್ತಡವೇ ಆತ್ಮಹತ್ಯೆಗೆ ಮುಖ್ಯ ಕಾರಣವಾಗುತ್ತದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಕಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಒಳಗಾಗುತ್ತಾರೆ. ಜೀವನ ಮೌಲ್ಯಯುತವಾಗಿದೆ. ಅದನ್ನು ಹಾಳು ಮಾಡಿಕೊಳ್ಳದೆ ಸಮಸ್ಯೆಗಳ ಕುರಿತು ಚರ್ಚಿಸಬೇಕು. ಸಮಸ್ಯೆಗಳನಿರ್ವಹಣೆಯಿಂದ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಜಗತ್ತಿನಲ್ಲಿ ಪ್ರತಿವರ್ಷ 8 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಿನ್ನತೆ, ಕುಟುಂಬ ಕಲಹ, ವಿವಾಹ ವಿಚ್ಛೇದನ, ವೈವಾಹಿಕ ಸಮಸ್ಯೆಗಳು, ಪರೀಕ್ಷೆಯಲ್ಲಿ ಅನುತ್ತೀರ್ಣ, ರ್ಯಾಗಿಂಗ್‌, ಮಾನಸಿಕ ಕಾಯಿಲೆ, ನಿರುದ್ಯೋಗ ಸಮಸ್ಯೆಗಳು, ಮಾರಕ ರೋಗಗಳು ಸೇರಿದಂತೆ ಇತರೆ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರು.

Advertisement

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಲಕ್ಷಿ¾àಕಾಂತ, ತಾಲೂಕು ವೈದ್ಯಾಧಿಕಾರಿ ಡಾ| ಹಣಮಂತರಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸಾಜೀದ್‌ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಹಿರಿಯ ಆರೋಗ್ಯ ಸಹಾಯಕ ಮಹಿಪಾಲರೆಡ್ಡಿ ಜೋಳದಡಗಿ ಸ್ವಾಗತಿಸಿ, ನಿರೂಪಿಸಿದರು. ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ವಂದಿಸಿದರು.

ಮನೋಚೈತನ್ಯ ಕಾರ್ಯಕ್ರಮ : ಪ್ರತಿ ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸೆ ನೀಡಲಾಗುತ್ತದೆ. ಮನೋಚೈತನ್ಯಕಾರ್ಯಕ್ರಮದಡಿ 1ನೇ ಮಂಗಳವಾರ ಶಹಾಪುರ, 2ನೇ ಮಂಗಳವಾರ ಸುರಪುರ, 3ನೇ ಮಂಗಳವಾರ ಗುರುಮಠಕಲ್‌, 4ನೇ ಮಂಗಳವಾರ ಹುಣಸಗಿ ಹಾಗೂ 1ನೇ ಶುಕ್ರವಾರ ವಡಗೇರಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾನಸಿಕ ತಜ್ಞರಿಂದ ಸಲಹೆ, ಚಿಕಿತ್ಸೆ ನೀಡಲಾಗುತ್ತಿದೆ. ಉಚಿತ ಸಹಾಯವಾಣಿ ಸಂಖ್ಯೆ 104 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಮನೋವೈದ್ಯ ಡಾ| ಉಮೇಶ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next