Advertisement

ಆತ್ಮಹತ್ಯೆ ಮಹಾ ಪಾಪ

06:00 AM Sep 21, 2018 | |

ಪರೀಕ್ಷೆ ಬರೆದು “ಫ‌ಲಿತಾಂಶ’ ಬಂದ ಬಳಿಕ ಅದೆಷ್ಟೋ ವಿದ್ಯಾರ್ಥಿಗಳು ಫೇಲ್‌ ಆದಾಗ ಅಥವಾ ಅಂಕಗಳು ಕಡಿಮೆ ಬಂದಾಗ ಪೋಷಕರು ಏನನ್ನುತ್ತಾರೋ, ಬೇರೆಯವರು ಹೇಗೆ ಕಾಣುತ್ತಾರೋ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಹಾಗೆ ಆತಂಕ ಪಟ್ಟು, ಬದುಕನ್ನೇ ಹಾಳು ಮಾಡಿಕೊಳ್ಳುವ ಮುನ್ನ, ಯೋಚಿಸಿ ಧೈರ್ಯದಿಂದ ಎಲ್ಲವನ್ನೂ ಮೆಟ್ಟಿನಿಲ್ಲಬೇಕು. ಯಾವುದೇ ಕಾರಣಕ್ಕೂ “ಆತ್ಮಹತ್ಯೆ ಬೇಡ’ ಎಂಬ ಸಂದೇಶ ಸಾರುವ ಕಿರುಚಿತ್ರವೊಂದು ಮೂಡಿಬಂದಿದೆ. ಆ ಕಿರುಚಿತ್ರದ ಹೆಸರು “ಫ‌ಲಿತಾಂಶ’. ರವಿ ಸಾಸನೂರ್‌ ಕಥೆ ಬರೆದು ಈ ಕಿರುಚಿತ್ರ ನಿರ್ದೇಶಿಸಿದ್ದಾರೆ. ಇದಕ್ಕೂ ಮುನ್ನ ನಿರ್ದೇಶಕರು ಕಿರುತೆರೆ ಮತ್ತು ಸಿನಿಮಾಗಳಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಎಸ್‌.ಜಿ.ಆರ್‌. ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ತಯಾರಾಗಿರುವ “ಫ‌ಲಿತಾಂಶ’ ಕಿರುಚಿತ್ರದ ಸಣ್ಣ ಟ್ರೇಲರ್‌ ಬಿಡುಗಡೆ ಮಾಡಲಾಯಿತು.

Advertisement

ಈ ವೇಳೆ ಮಾತನಾಡಿದ ನಿರ್ದೇಶಕ ರವಿ ಸಾಸನೂರ್‌, “ಪ್ರತಿ ವರ್ಷ ಶಾಲೆ ವಿದ್ಯಾರ್ಥಿಗಳ ಫ‌ಲಿತಾಂಶ ಬಂದಾಗ, ಫೇಲ್‌ ಆದವರು, ಅಂಕ ಕಡಿಮೆ ಬಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಆ ಹಾದಿ ಹಿಡಿಯಬಾರದು. ಮನಸ್ಸು ಬದಲಿಸಿ, ಛಲದಿಂದ ಚೆನ್ನಾಗಿ ಓದಿದರೆ, ಎಲ್ಲವನ್ನೂ ಗೆಲ್ಲಬಹುದು ಎಂಬ ಅಂಶದೊಂದಿಗೆ ಈ “ಫ‌ಲಿತಾಂಶ’ ಕಿರುಚಿತ್ರ ನಿರ್ದೇಶಿಸಿದ್ದಾಗಿ’ ಹೇಳುತ್ತಾರೆ ರವಿ ಸಾಸನೂರ್‌.

“ಈ ಕಿರುಚಿತ್ರ ಮಾಡುವ ಮುನ್ನ, ರಾಜ್ಯದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ಕೊಟ್ಟು, ಕೆಲ ಶಾಲೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಅವರ ಅನಿಸಿಕೆಗಳನ್ನು ಪಡೆದು ಕಿರುಚಿತ್ರ ಮಾಡಲಾಗಿದೆ. ಸುಮಾರು 5 ಸಾವಿರ ವಿದ್ಯಾರ್ಥಿಗಳು ಪತ್ರಗಳ ಮೂಲಕ ತಮ್ಮೊಳಗಿನ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಕಿರುಚಿತ್ರವಾಗದೆ, ಈ ಮೂಲಕ ಒಂದು ಸ್ಟ್ರಾಂಗ್‌ ಮೆಸೇಜ್‌ ತಲುಪಬೇಕೆಂಬ ಕಾರಣಕ್ಕೆ ನನ್ನ ತಂಡದೊಂದಿಗೆ ಚರ್ಚಿಸಿ, ಕಿರುಚಿತ್ರವನ್ನು ಶಾಲೆ ಪರಿಕ್ಷಾ ಮಂಡಳಿ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನ ಮಾಡುವುದಾಗಿ’ ಹೇಳಿಕೊಂಡರು ನಿರ್ದೇಶಕರು.

ಸಂತೋಷ್‌ರಾಜ್‌ ಝಾವರೆ ಈ ಕಿರುಚಿತ್ರದ ಬೆನ್ನೆಲುಬು. ಅವರು ಇಲ್ಲಿ ಒಂದು ಪಾತ್ರ ಮಾಡುವುದರ ಜೊತೆಗೆ ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ. ಇನ್ನು, ಲಕ್ಷ್ಮೀ ಸಿದ್ದಯ್ಯ, ಲತಾ, ಆಕಾಶ್‌ ಸೇರಿದಂತೆ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಕಿರುಚಿತ್ರಕ್ಕೆ ದೀಪು ಹೊನ್ನಾಳಿ ಅವರ ಛಾಯಾಗ್ರಹಣವಿದೆ. ರಘು ಸಂಗೀತವಿದೆ. ಶಿವಕುಮಾರ್‌ ಸಂಕಲನ ಮಾಡಿದ್ದಾರೆ. ಶೈಲಜಾ ಮಂಜುನಾಥ, ಸಂತೋಷ್‌ ಝಾವರೆ ನಿರ್ಮಾಣವಿದೆ. ಹೇಮಂತ್‌, ಸಂತೋಷ್‌ ಜಯಣ್ಣ ಇತರರು “ಫ‌ಲಿತಾಂಶ’ಕ್ಕೆ ಶುಭಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next