ನೆಲಮಂಗಲ: ಖಾಸಗಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಎರಡು ಮಾದರಿಯ ಚುಚ್ಚುಮದ್ದುಗಳನ್ನು ಸಮೀಕರಿಸಿಕೊಂಡು ಸ್ವತಃ ಇಂಜೆಕ್ಷನ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಕುಣಿಗಲ್ ವೃತ್ತದ ಬಳಿಯಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ.
ಸಂಜಯ್ (19)ಮೃತ ಆಸ್ಪತ್ರೆ ಸಿಬ್ಬಂದಿ. ಮೂಲತಃ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಾರ್ವತಿನಗರ ಮಂಜುನಾಥ್ ಎಂಬುವರ ಮಗನಾದ ಈತ ಕಳೆದ ಎರಡು ತಿಂಗಳಿನಿಂದ ಕುಣಿಗಲ್ ವೃತ್ತದ ಬಳಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸಮಾಡುತ್ತಿದ್ದ.
ಇದನ್ನೂ ಓದಿ:- ರಾಜ್ಯದಲ್ಲಿ ನೀಚ ರಾವಣ ಸರ್ಕಾರವಿದೆ: ಡಿ.ಕೆ.ಶಿವಕುಮಾರ್
ಎಂದಿನಂತೆ ಶನಿವಾರ ರಾತ್ರಿ ಕೆಲಸಕ್ಕೆ ಬಂದಿದ್ದ ಈತ ತಡರಾತ್ರಿ ವೇಳೆ ಆಸ್ಪತ್ರೆಯಲ್ಲಿ ಭಾನುವಾರ ಬೆಳ್ಳಗ್ಗೆ ರೋಗಿಯೊಬ್ಬರ ಶಸ್ತ್ರಚಿಕಿತ್ಸೆಯಿದ್ದ ಕಾರಣಕ್ಕೆ ಶನಿವಾರ ತಡರಾತ್ರಿವರೆಗೂ ಶಸ್ತ್ರಚಿಕಿತ್ಸಾ ಘಟಕವನ್ನು ಸಿದ್ಧಪಡಿಸಿದ ಬಳಿಕ ಸ್ವತಃ ಮಾರಣಾಂತಿಕವಾದ ರೀತಿಯಲ್ಲಿ ಇಂಜೆಕ್ಷನ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಪ್ರಕರಣ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆತ್ಮಹತ್ಯೆ ನಿಗೂಢ: ಸಂಜಯ್ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇನ್ಸ್‌ಪೆಕ್ಟರ್ ಎ.ವಿ.ಕುಮಾರ್ ಮತ್ತು ಸಿಬ್ಬಂದಿ ತನಿಖೆಯನ್ನು ಕೈಗೊಂಡಿದ್ದು, ಪೊಲೀಸರ ತನಿಖೆಯಿಂದಷ್ಟೇ ಸಾವಿನ ಸತ್ಯಾಸತ್ಯತೆ ಹೊರಬರಬೇಕಿದೆ. ಆತ್ಮಹತ್ಯೆ ಪ್ರಕರಣ ತಾಲೂಕಿನ ವೈದ್ಯಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪೋಷಕರ ಆರೋಪ: ಸಂಜಯ್ ಸಾವು ಆಕಸ್ಮಿಕವಾಗಿಲ್ಲ. ಈತನ ಸಾವಿನ ವಿಚಾರದಲ್ಲಿ ಅನುಮಾನವಿದೆ ಎಂದು ಮೃತನ ಪೋಷಕರು ಪೊಲೀಸರ ಬಳಿಯಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಸೂಕ್ತ ತನಿಖೆಯಿಂದಷ್ಟೇ ಸತ್ಯ ಹೊರಬರಲಿದೆ.