ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ’ ಕಾರ್ಯಕ್ರಮದ 13ನೆಯ ಸೀಸನ್‌ನ ಮೆಗಾ ಆಡಿಷನ್‌ನ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದಕ್ಕೆ ಕಾರಣ ಆ ವಿಡಿಯೋದಲ್ಲಿ ಇರುವ ಸ್ಪರ್ಧಿ. ಸುಹನಾ ಸಯ್ಯದ್ ಎಂಬ ಶಿವಮೊಗ್ಗ ಜಿಲ್ಲೆ ಸಾಗರದ ಹುಡುಗಿ ಈ ಮೆಗಾ ಆಡಿಷನ್‌ನಲ್ಲಿ ಭಾಗ ವಹಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ಹಿಂದೂ ದೇವರುಗಳ ಸ್ತೋತ್ರ ಭಜನೆ ಸೇರಿದಂತೆ ಜಾನಪದ ಹಾಡುಗಳನ್ನು ಸ್ಪಷ್ಟ ಹಾಗೂ ಸುಶ್ರಾವ್ಯವಾಗಿ ಹಾಡುವ ಮೂಲಕ ಈಗ ತೀರ್ಪುಗಾರರಿಂದ ಹಿಡಿದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸಾಗರದ ಹೆಗ್ಗೊಡು ಸಮೀಪದ ಭೀಮನಕೋಣೆಯ ನಿವಾಸಿ ಸುಹಾನಾ ಬರೀ ಒಳ್ಳೆಯ ಗಾಯಕಿ ಅಷ್ಟೇ ಅಲ್ಲ, ಎಸ್‌ಎಸ್‌ಎಲ್‌ಸಿಯಲ್ಲಿ ಇದ್ದಾಗ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ನೀನಾಸಂನ ಊರುಮನೆ ಹಬ್ಬದಲ್ಲಿ ಸಕ್ರಿಯವಾಗಿ ವೆಂಕಟರಮಣ ಐತಾಳ, ಕೆ.ವಿ. ಅಕ್ಷರ ನಿರ್ದೇಶನದ ನಾಟಕಗಳಲ್ಲಿ ಅಭಿನಯ ಮಾಡಿರುವ ಅವರು, “ಲವ-ಕುಶ’ ಯಕ್ಷಗಾನ ಪ್ರಸಂಗದ ಚಂದ್ರಕೇತ ಪಾತ್ರ ಸೇರಿ 35ಕ್ಕೂ ಹೆಚ್ಚು ಯಕ್ಷಗಾನದಲ್ಲಿ ಪಾತ್ರ ವಹಿಸಿದ್ದಾರೆ. ಸುಹಾನಾ ಅವರ ತಂದೆ ಸಯ್ಯದ್ ಮುನೀರ್ ಹಾಗೂ ತಾಯಿ ಫರ್ವೀನ್ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ.
“ಸರಿಗಮಪ ಸೀಸನ್ -13′ ಮೆಗಾ ಆಡಿಷನ್ ಕುರಿತು ಆ ವೇದಿಕೆಯಲ್ಲೇ ಸುಹಾನಾ ಮಾತನಾಡಿದ್ದಾರೆ. “ಸರಿಗಮಪ ವೇದಿಕೆ ಎಲ್ಲಾ ಹಾಡುಗಾರರಿಗೂ ಒಂದು ಕನಸು. ನನ್ನ ಸ್ನೇಹಿತರು ಇದರಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡಿದರು. ಹಾಗಾಗಿ ನಾನು ಬಂದೆ. ಈಗ ತುಂಬಾನೇ ಖುಷಿಯಾಗುತ್ತಿದೆ.
ಆ ಪಯಣ ಇಲ್ಲಿ ತನಕ ತಂದು ನಿಲ್ಲಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ. ಪ್ರಪಂಚದಲ್ಲಿ ಎಷ್ಟೋ ಪ್ರತಿಭೆಗಳಿಗೆ ಅವಕಾಶದ, ಪ್ರೋತ್ಸಾಹದ ಕೊರತೆ ಇದೆ. ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ. ಕೆಲವು ಕಟ್ಟುಪಾಡುಗಳು ಪ್ರತಿಭಾ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿವೆ. ಪ್ರತಿಭಾವಂ ತರು ಮುಂದೆ ಬರಬೇಕು. ಮುಂದೆ ಬಂದು ಸಾಧನೆ ಮಾಡಬೇಕು.
ನನ್ನನ್ನು ನೋಡಿ ಅವರು ಮುಂದೆ ಬರಬೇಕೆಂಬುದು ನನ್ನ ಆಸೆ. ನನ್ನಲ್ಲಿರುವ ಪ್ರತಿಭೆಗೆ ಯಾವುದೇ ಕಟ್ಟುಪಾಡುಗಳು ಅಡ್ಡ ಬರಬಾರದು, ಅದು ಜನರಿಗೆ ತಲುಪಬೇಕೆಂಬುದು ಪ್ರತಿ ಪ್ರತಿಭಾವಂತರ ಮನಸ್ಸಲ್ಲಿ ಬರಬೇಕೆಂಬುದು ನನ್ನ ಆಶಯ’ ಎನ್ನುವ ಮೂಲಕ ಕಟ್ಟುಪಾಡುಗಳ ಕಾರಣ ನೀಡಿ ಪ್ರತಿಭೆಗಳನ್ನು ಚಿವುಟಬೇಡಿ ಎಂಬ ಸಂದೇಶ ನೀಡಿದ್ದಾರೆ.