ಹೊಸದಿಲ್ಲಿ : ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಮದುವೆ ವಿಷಯ ರಾಜಕಾರಣಿಗಳಲ್ಲಿ ಮತ್ತು ಇತರರಲ್ಲಿ ಅನೇಕ ಸಂದರ್ಭಗಳಲ್ಲಿ ಈ ಹಿಂದೆ ಚರ್ಚೆಯಾದದ್ದಿದೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಹಿತೈಷಿಗಳ ಪಟ್ಟಿಯಲ್ಲಿ ಇದೀಗ ಹೊಸ ಸೇರ್ಪಡೆ ಎಂದರೆ ಈ ಹಿಂದೆ ಕಾಂಗ್ರೆಸಿಗರಾಗಿದ್ದು ಈಗ ಟಿಡಿಪಿ ಸಂಸದರಾಗಿರುವ ಜೆ ಸಿ ದಿವಾಕರ ರೆಡ್ಡಿ ಅವರು.
ದಿವಾಕರ ರೆಡ್ಡಿ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಹಿಂದೆ “ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯ ಮುಖ್ಯವಾಗಿದ್ದು ಅವರ ಬೆಂಬಲ ಪಡೆಯುವುದಕ್ಕಾಗಿ ರಾಹುಲ್‌ಗೆ ಬ್ರಾಹ್ಮಣ ಸಮುದಾಯದ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆ ಮಾಡಿಸಬೇಕು’ ಎಂಬ ಸಲಹೆಯನ್ನು ನೀಡಿದ್ದರಂತೆ. “ಆದರೆ ಸೋನಿಯಾ ನನ್ನ ಮಾತಿಗೆ ಬೆಲೆಯೇ ಕೊಡಲಿಲ್ಲ’ ಎಂದು ದಿವಾಕರ ರೆಡ್ಡಿ ಹೇಳುತ್ತಾರೆ.
ದಿವಾಕರ ರೆಡ್ಡಿ ಅವರ ಈ ಮಾತುಗಳು ಇದೇ ಜು.4ರಂದು ಮಾಡಲಾಗಿರುವ ವಿಡಿಯೋದಲ್ಲಿ ದಾಖಲಾಗಿದೆ.
ಈ ವರ್ಷ ಮೇ ತಿಂಗಳಲ್ಲಿ ರಾಹುಲ್ ಅವರಿಗೆ ರಾಯ್‌ಬರೇಲಿಯ ಶಾಸಕಿ ಸದರ್ ಆದಿತಿ ಸಿಂಗ್ ಅವರನ್ನು ಪ್ರಪೋಸ್ ಮಾಡಲಾಗಿದೆ ಎಂಬ ವದಂತಿಗಳು ಜೋರಾಗಿ ಹಬ್ಬಿದ್ದವು. ಆದರೆ ಈ ವದಂತಿಗಳಿಂದ ಬೇಸರಗೊಂಡಿದ್ದ ಆದಿತಿ ಅವರು “ರಾಹುಲ್ ನನಗೆ ಸಹೋದರನ ಹಾಗೆ’ ಎಂದು ಹೇಳಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಈ ರೀತಿಯ ವದಂತಿಗಳನ್ನು ಹರಡಲಾಗುತ್ತಿದೆ ಎಂದು ಆದಿತಿ ಆಗ ಹೇಳಿದ್ದರು.
ಆ ಸಂದರ್ಭದಲ್ಲಿ ರಾಹುಲ್ ಮತ್ತು ಆದಿತಿ ಜತೆಯಾಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಅಂತಹ ಫೋಟೋಗಳಿಗೆ “ರಾಹುಲ್ ಕೊನೆಗೂ ತಮಗೆ ಸರಿಹೊಂದುವ ಸಂಗಾತಿಯನ್ನು ಕಂಡುಕೊಂಡಿದ್ದಾರೆ; ಸೋನಿಯಾ ಗಾಂಧಿ ಅವರು ಆದಿತಿ ಅವರ ಕುಟುಂಬದವರೊಂದಿಗೆ ಮದುವೆ ವಿಷಯವನ್ನು ಅಂತಿಮಗೊಳಿಸುವ ಮಾತುಕತೆ ನಡೆಸುತ್ತಿದ್ದಾರೆ’ ಎಂಬ ಅಡಿ ಶೀರ್ಷಿಕೆಗಳನ್ನು ನೀಡಲಾಗಿತ್ತು.