Advertisement
ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜತೆ ವಿಧಾನಸೌಧದಲ್ಲಿ ಮಂಗಳವಾರ ಇಡೀ ದಿನ ಸಭೆ ನಡೆಸಿದ ಸಿಎಂ, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದರು. ಕೇವಲ ಬದಲಾವಣೆಗಾಗಿ ನಾಡಿನ ಜನತೆ ಸರಕಾರವನ್ನು ಬದಲಾಯಿಸಿಲ್ಲ. ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಹಿಂದಿನ ಸರಕಾರವನ್ನು ಬದಲಾಯಿಸಿ ನಮ್ಮನ್ನು ಅಧಿಕಾರಕ್ಕೆ ತಂದಿದ್ಧಾರೆ. ಅಭಿವೃದ್ಧಿಯ ಆಶೋತ್ತರಗಳನ್ನು ಇಟ್ಟುಕೊಂಡ ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದರು.
ನಾಡಿನ ಜನತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರುತ್ತಾರೆಂದರೆ ನೀವುಗಳು ಇದ್ದು ಏನು ಪ್ರಯೋಜನ? ಜಿಲ್ಲಾ, ತಾಲೂಕು ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಹೊತ್ತುಕೊಂಡು ಜನ ನನ್ನ ಬಳಿ ಬರುತ್ತಿದ್ದಾರೆ. ನೀವು ಸ್ಥಳೀಯವಾಗಿ ಜನಸಂಪರ್ಕ ಸಭೆ ನಡೆಸಿ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಕೊಟ್ಟಿದ್ದರೆ ಹೀಗಾಗುತ್ತಿರಲಿಲ್ಲ. ಕೆಲವು ಸಮಸ್ಯೆಗಳಿಗೆ ವಾರದ ಕಾಲಮಿತಿಯಲ್ಲಿ ಪರಿಹಾರ ಒದಗಿಸಿಕೊಡಿ. ಕೆಲಸ ಆಗಿದೆಯೇ, ಇಲ್ಲವೇ ಎನ್ನುವುದನ್ನು ಮರು ಪರೀಕ್ಷಿಸಿ. ಆಗ ಸ್ಥಳೀಯ ಸಮಸ್ಯೆಗಳಿಗಾಗಿ ಜನತೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು ನನ್ನವರೆಗೂ ಬರುವ ಅಗತ್ಯವೇ ಬೀಳುವುದಿಲ್ಲ ಎಂದು ಹೇಳಿದರು. ಪ್ರಮುಖವಾಗಿ ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಹಕಾರ ಇಲಾಖೆ, ಸಮಾಜ ಕಲ್ಯಾಣ, ಕಾನೂನು ಇಲಾಖೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮೊದಲ ದಿನದ ಸಭೆಯಲ್ಲಿ ಹೆಚ್ಚು ಪ್ರಸ್ತಾವಿಸಿದರು. ತಾಲೂಕು ಮಟ್ಟದಲ್ಲಿ ಸಚಿವರು, ಶಾಸಕರನ್ನು ಆಹ್ವಾನಿಸಿ, ಜನ ಸಂಪರ್ಕ ಸಭೆಗಳನ್ನು ವಾರಕ್ಕೊಮ್ಮೆ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು.
Related Articles
Advertisement
ವಿಳಂಬ ಮಾಡುವುದೂ ಭ್ರಷ್ಟಾಚಾರಕ್ಕೆ ಸಮತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬರುವ ಅರ್ಜಿಗಳು 5 ವರ್ಷಕ್ಕೂ ಹೆಚ್ಚು ಅವಧಿಗೆ ಬಾಕಿ ಉಳಿದಿರುವುದನ್ನು ಗಮನಿಸಲಾಗಿದೆ. 5 ವರ್ಷವಾದರೂ ಪ್ರಕರಣ ಇತ್ಯರ್ಥಪಡಿಸದೆ ಇದ್ದರೆ, ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ. ವಿಳಂಬ ಜಾಸ್ತಿಯಾದಷ್ಟು ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ವಿಳಂಬವೂ ಭ್ರಷ್ಟಾಚಾರವೇ. ತಹಶೀಲ್ದಾರರು ಒಂದು ಅರ್ಜಿಯನ್ನು ಸ್ವೀಕರಿಸಿದರೆ, ಮೂರು ತಿಂಗಳಲ್ಲಿ ಇತ್ಯರ್ಥವಾಗಬೇಕು. ಜಿಲ್ಲಾಧಿಕಾರಿಗಳು ಅನಗತ್ಯವಾಗಿ ಪ್ರಕರಣ ಮುಂದೂಡುವುದು, ಕಕ್ಷಿದಾರರನ್ನು ಕಾಯಿಸುವುದು, ವಾದ-ವಿವಾದ ಗಳನ್ನು ಆಲಿಸಿದ ಅನಂತರ ತೀರ್ಪು ಬರೆಯಲು ವಿಳಂಬ ಮಾಡುವುದು ತರವಲ್ಲ. ಪ್ರಕರಣ ಇತ್ಯರ್ಥಗೊಳಿಸಲು ವಿಳಂಬ ಮಾಡಿದರೆ ನಮ್ಮ ಸರಕಾರ ಸಹಿಸಲ್ಲ. ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು. ಸರಕಾರಕ್ಕೆ ಕೆಟ್ಟ ಹೆಸರು ಬಂದರೆ ಸುಮ್ಮನಿರಲ್ಲ
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸವಿದ್ದು, ಜನರ ಸೇವೆಗೆ ಲಭ್ಯರಿರಬೇಕು. ಅಧಿಕಾರಿಗಳು ಕಚೇರಿಯಲ್ಲಿರಬೇಕು, ಇಲ್ಲ ಪ್ರವಾಸದಲ್ಲಿರಬೇಕು. ಮನೆಯಲ್ಲಿ ಕುಳಿತು ಕೆಲಸ ಮಾಡಬಾರದು. ವರ್ಕ್ ಫ್ರಮ್ ಹೋಮ್‌ಗೆ ಅವಕಾಶವಿಲ್ಲ. ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕರು, ಶಾಸಕರು ಮತ್ತು ಮಂತ್ರಿಗಳಿಂದ ಇವೆ. ಇದು ಒಳ್ಳೆಯದಲ್ಲ. ಎಲ್ಲರ ಕರೆಗೂ ಸ್ಪಂದಿಸಬೇಕು. ಚಾಚೂ ತಪ್ಪದೆ ಶಿಷ್ಟಾಚಾರ ಪಾಲಿಸಬೇಕು. ಅಧಿಕಾರಿಗಳಿಗೆ ಹೃದಯ ಸರಿಯಾಗಿ ಕೆಲಸ ಮಾಡಬೇಕು. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ಅಧಿಕಾರಿಗಳಿಗೆ ಸೌಲಭ್ಯ ನೀಡುವುದು ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ. ನೀವು ಚೆನ್ನಾಗಿ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಕೆಲಸ ಮಾಡದಿದ್ದರೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆತನದಿಂದ ಸರಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸುಮ್ಮನಿರಲ್ಲ ಎಂದು ಸಿಎಂ ಕಟ್ಟೆಚ್ಚರ ನೀಡಿದರು. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನಸೇವಕರೇ ಹೊರತು ನಾವ್ಯಾರೂ ರಾಜರಲ್ಲ. ಈ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರಲ್ಲೂ ಇರಲಿ. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ಅಧಿಕಾರಿಗಳು ವರ್ಕ್ ಫ್ರಮ್ ಹೋಂ ಮನಸ್ಥಿತಿಯಿಂದ ಹೊರಬನ್ನಿ.
-ಸಿದ್ದರಾಮಯ್ಯ, ಸಿಎಂ