ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ, ಇನ್ನೇನು ಮದುವೆ ಒಂದು ಆದರೆ ಆಯಿತು ಎಂದು ಜಾಲಿಯಾಗಿ ಇರುವ ಹುಡುಗನಿಗೆ ತನಗೆ ಡಯಾಬಿಟಿಸ್ ಎಂದು ಗೊತ್ತಾದರೆ ಹೇಗಾಗಬಹುದು ಹೇಳಿ. ಒಂದು ಕಡೆ ಭವಿಷ್ಯ ಮತ್ತೂಂದು ಕಡೆ ಮದುವೆ ಕನಸು… ಈ ಎರಡನ್ನೂ ಆತ ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ, ಅದರಿಂದ ಆತನಿಗೆ ಏನೇನು ತೊಂದರೆಯಾಗುತ್ತದೆ ಎಂಬ ಅಂಶದೊಂದಿಗೆ ಈ ವಾರ ತೆರೆಗೆ ಬಂದಿರುವ ಚಿತ್ರ “ಶುಗರ್‌ಲೆಸ್’.
ಮೇಲ್ನೋಟಕ್ಕೆ ತುಂಬಾ ಗಂಭೀರ ಎನಿಸುವ ಒಂದು ಕಥೆಯನ್ನು ನಿರ್ದೇಶಕ ಶಶಿಧರ್ ತುಂಬಾ ಜಾಲಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ್ದಾರೆ.
ಡಯಾಬಿಟಿಕ್ ಇದೆ ಎಂದಾಗಲೇ ಅನೇಕರು ಭಯ ಬೀಳುತ್ತಾರೆ. ಅದರಲ್ಲೂ ಇನ್ನು ಮದುವೆಯಾಗದ 28ರ ಹರೆಯದ ಯುವಕನಿಗೆ ಆ ಕಾಯಿಲೆ ಇದೆ ಎಂದಾಗ ಆತನ ಪರಿಸ್ಥಿತಿ ಹೇಗಾಗಬೇಡ… ಈ ಅಂಶಗಳನ್ನು ಇಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ. ಆರಂಭದಲ್ಲಿ ಮೂಲ ಕಥೆಯನ್ನು ಟ್ರ್ಯಾಕ್‌ಗೆ ತರುವ ಮುನ್ನ ನಾಯಕನ ಸುತ್ತ ಒಂದಷ್ಟು ಫನ್ ಅಂಶಗಳನ್ನು ಕಟ್ಟಿಕೊಡಲಾಗಿದೆ.
ಇದನ್ನೂ ಓದಿ:ಮೊದಲು ಟಿ20 ತಂಡದಿಂದ ಕೊಹ್ಲಿಯನ್ನು ಕೈಬಿಟ್ಟು ಯುವ ಆಟಗಾರನಿಗೆ ಅವಕಾಶ ನೀಡಿ: ಮಾಜಿ ನಾಯಕ
ಆದರೆ, ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿಂದ ಇಡೀ ಸಿನಿಮಾದ ಕಲರ್ ಹಾಗೂ ಖದರ್ ಬದಲಾಗುತ್ತದೆ. ಹೊಸ ಹೊಸ ಪಾತ್ರಗಳು ಸೇರಿಕೊಳ್ಳುತ್ತಾ, ಸಿನಿಮಾ ಮತ್ತಷ್ಟು ಜಾಲಿಯಾಗಿಯೇ ಸಾಗುತ್ತದೆ. ಚಿತ್ರದಲ್ಲಿ ಒಂದಷ್ಟು ಸೂಕ್ಷ್ಮ ಅಂಶಗಳ ಜೊತೆ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಚಿತ್ರ ಮಜಾ ಕೊಡುವುದು ಅದರ ಟ್ವಿಸ್ಟ್ ಹಾಗೂ ನಾಯಕನ ಫಜೀತಿಗಳಿಂದ. ಆ ಮಟ್ಟಿಗೆ “ಶುಗರ್‌ಲೆಸ್’ ಒಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿ ಖುಷಿ ಕೊಡುತ್ತದೆ.
ನಾಯಕ ಪೃಥ್ವಿ ಅಂಬರ್ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಜಾಲಿ ಹುಡುಗನಾಗಿ, ಪ್ರೇಮಿಯಾಗಿ ಇಷ್ಟವಾಗುತ್ತಾರೆ. ನಾಯಕಿ ಪ್ರಿಯಾಂಕಾ ತಿಮ್ಮೇಶ್ ತೆರೆಮೇಲೆ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ದತ್ತಣ್ಣ, ಧರ್ಮಣ್ಣ, ನವೀನ್ ಡಿ ಪಡೀಲ್ ಸೇರಿದಂತೆ ಇತರರು ನಟಿಸಿದ್ದಾರೆ.
ರವಿ ರೈ