Advertisement

ಕಪ್ಪ ಕಾಣಿಕೆಯ ಡೈರಿ ಹುಟ್ಟು ಹಾಕಿರುವ ಹಲವು ಪ್ರಶ್ನೆಗಳು

03:50 AM Mar 01, 2017 | |

ದೊಡ್ಡ ಸದ್ದು ಮಾಡಿರುವ ಹೈಕಮಾಂಡ್‌ ಕಪ್ಪ ಕಾಣಿಕೆ ವಿವರಗಳುಳ್ಳ ಡೈರಿ ಬಹಿರಂಗ ರಾಜ್ಯ ರಾಜಕೀಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಜಕೀಯ ಪಕ್ಷಗಳಿಗೆ ಹಣ ಅಗತ್ಯ ಅನ್ನುವುದು ನಿರ್ವಿವಾದ. ಆದರೆ, ಸಚಿವರು, ಅಧಿಕಾರಿಗಳ ಮೂಲಕ ಅದನ್ನು ಸಂಗ್ರಹಿಸುವುದು ಭ್ರಷ್ಟಾಚಾರವೇ ಅಲ್ಲವೇ ಎಂಬುದು ಅಂಥ ಪ್ರಶ್ನೆಗಳಲ್ಲಿ ಮುಖ್ಯವಾದದ್ದು.

Advertisement

ಕರ್ನಾಟಕದಲ್ಲೀಗ “ವಿಕಿಲೀಕ್ಸ್‌’ ಮಾದರಿಯ ಸತ್ಯಾಂಶ ಸೋರಿಕೆಯ ಸಮರವೊಂದು ಆರಂಭವಾಗಿದೆ. ಉನ್ನತ ಮಟ್ಟದ ರಾಜಕಾರಣಿಗಳು ಒಳಗೊಂಡಿರುವ ಈ “ಸತ್ಯಾಂಶ ಬಹಿರಂಗ’ ಪ್ರಹಸನವನ್ನು ಪ್ರಸಾರಿಸುತ್ತಿರುವ ಒಂದು ರಾಷ್ಟ್ರೀಯ ಟಿವಿ ವಾಹಿನಿ ಹಾಗೂ ಕರ್ನಾಟಕದ ಅನೇಕ ಸುದ್ದಿ ವಾಹಿನಿಗಳು ಕಪ್ಪ ಕಾಣಿಕೆಯ ಕತೆಯನ್ನು ಬಿತ್ತರಿಸುತ್ತಿದ್ದರೂ, ಈ ಕುರಿತ ಸತ್ಯಾಸತ್ಯತೆಯ ಅರಿವುಳ್ಳ ವ್ಯಕ್ತಿಗಳು ಹಾಗೂ ಇದರಲ್ಲಿ ವಾಸ್ತವವಾಗಿ ಒಳಗೊಂಡಿದ್ದಾರೆನ್ನಲಾಗಿರುವ ವ್ಯಕ್ತಿಗಳು ಸಹಜವಾಗಿ ಒದ್ದಾಡುತ್ತಿದ್ದಾರೆ.

ಈ ಪ್ರಕರಣದ ನಾಟಕೀಯ ಅಂಶಕ್ಕೆ ಕಾರಣವಾಗಿರುವ ಸಂಗತಿಯೆಂದರೆ, ದಿಲ್ಲಿಯ ರಾಜಕೀಯ ದೊರೆಗಳಿಗೆ ಸಲ್ಲಿಸಲಾಗಿದೆಯೆಂಬ ಕಪ್ಪದ ವಿವರಗಳಿರುವ ಒಂದೋ ಎರಡೋ ಡೈರಿಗಳು ಬಹಿರಂಗವಾಗಿರುವುದು. ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ಬಲ್ಲವರಿಗೆ, ಈ ಪಕ್ಷಗಳು ತಮ್ಮ ದಿಲ್ಲಿಯ ಹೈಕಮಾಂಡ್‌ಗೆ ಅರ್ಪಿಸುತ್ತಿರುವ “ಮಾಮೂಲು’ ಮೊತ್ತದ ಬಗ್ಗೆ ಕಿಂಚಿತ್ತೂ ಅಚ್ಚರಿಯಾಗಿಲ್ಲ. ಅಧಿಕಾರಾರೂಢ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿ – ಇವೆರಡೂ ಹೈಕಮಾಂಡ್‌ ಹೊಂದಿರುವುದು ಇಲ್ಲಿ ಅಲ್ಲ, ದಿಲ್ಲಿಯಲ್ಲಿ. ಈ ನಡುವೆ ಈ ಪ್ರಹಸನದಲ್ಲಿ ಉಳಿದೆರಡಕ್ಕಿಂತ ಸಾಚಾ ಎಂಬಂಥ ಪಾತ್ರವನ್ನು ನಿರ್ವಹಿಸುತ್ತಿರುವ ಜೆಡಿಎಸ್‌ ಈ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿಲ್ಲ. ಕಾರಣ, ಅದರ ಹೈಕಮಾಂಡ್‌ ಇರುವುದು ಬೆಂಗಳೂರಿನ ಪದ್ಮನಾಭ ನಗರದಲ್ಲಿ. ಹೀಗೆಂದೇ ಅದು ದಿಲ್ಲಿಯಲ್ಲಿ ಕಪ್ಪ ಒಪ್ಪಿಸುವ ಸಮಸ್ಯೆಯಿಂದ ಬಚಾಯಿಸಿಕೊಂಡಿದೆ.

ಈ “ಸೂಟ್‌ಕೇಸ್‌ ಸಂಸ್ಕೃತಿ’ ಕರ್ನಾಟಕದಲ್ಲಿ ಶುರುವಾದದ್ದು 1972ರ ವಿಧಾನಸಭಾ ಚುನಾವಣೆಯ ಬಳಿಕವಷ್ಟೇ. ದೇವರಾಜ ಅರಸ್‌ ಸರಕಾರ ಕಾಂಗ್ರೆಸ್‌ ಹೈಕಮಾಂಡ್‌ಗೆ (ಇಂದಿರಾ ಗಾಂಧಿಗೆ) ಸೂಟ್‌ಕೇಸ್‌ಗಳನ್ನು ರವಾನಿಸುತ್ತಿತ್ತು ಎಂದು ಹೇಳಲಾಗುತ್ತಿದ್ದುದನ್ನು ನಾವೆಲ್ಲ ಬಲ್ಲೆವು. ತುರ್ತು ಪರಿಸ್ಥಿತಿ ರದ್ದಾದ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಸೋತದ್ದರಿಂದ ಕೈಯಲ್ಲಿ ಕಾಸಿಲ್ಲದ ಸ್ಥಿತಿ ಎದುರಿಸುತ್ತಿದ್ದ ಕಾಂಗ್ರೆಸ್‌, ತನ್ನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಕರ್ನಾಟಕವನ್ನು ಅವಲಂಬಿಸಿತ್ತು. ಆ ದಿನಗಳಿಗೂ ಕರ್ನಾಟಕದಲ್ಲಿನ ಇಂದಿನ ವಿದ್ಯಮಾನಗಳಿಗೂ ಒಂದು ತೆರನ ಸಾಮ್ಯವಿರುವುದನ್ನು ನಾವಿಂದು ಗುರುತಿಸಬಹುದು. ಇಂದಿನ ಹೈಕಮಾಂಡ್‌ ಕಾಣಿಕೆಯ ವಿವಾದದಲ್ಲಿ ಎದ್ದು ತೋರುತ್ತಿರುವ ಕೆ. ಗೋವಿಂದರಾಜು, ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಇದೇ ರೀತಿ, ಬಿಜೆಪಿಯ ಲೆಹರ್‌ ಸಿಂಗ್‌ ಕೂಡ ವಿಧಾನಪರಿಷತ್‌ ಸದಸ್ಯರೇ ಆಗಿದ್ದಾರೆ! 

ಹೀಗೆ, ಡೈರಿ ದಾಖಲೆ ಕಾರ್ಯನಿರ್ವಹಣೆ ಹಾಗೂ ದಿಲ್ಲಿಯ ದೊಡ್ಡವರೊಂದಿಗೆ ಸಂಪರ್ಕ – ಇವೆರಡೂ ರಾಜ್ಯದ ಮೇಲ್ಮನೆ ಸದಸ್ಯರಾಗಲು ಇರುವ ಮುಖ್ಯ ಅರ್ಹತೆಗಳು ಎಂಬಂತಾಗಿದೆ. ಲಘು ಧಾಟಿಯಲ್ಲಿ ಹೇಳುವುದಾದರೆ ನಮ್ಮ ಕರ್ನಾಟಕ ರಾಜ್ಯ, ಒಂದು ಕಾಲದಲ್ಲಿ ಡೈರಿಯಲ್ಲಿ ಮುಖ್ಯ ವಿದ್ಯಮಾನಗಳನ್ನು ದಾಖಲಿಸುತ್ತಿದ್ದ ವಿದ್ವನ್ಮಣಿಗಳಿಗೆ ಹೆಸರಾಗಿತ್ತು. ಇಂಥ ಪಂಡಿತವರೇಣ್ಯರು ರಾಜ್ಯ ಗಜೆಟಿಯರ್‌ಗಳನ್ನು ಬರೆಯುವವರಾಗಿದ್ದರು. ಇಂಥವರಲ್ಲಿ ಬೆಂಜಮಿನ್‌ ಲೂಯಿ ರೈಸ್‌, ಡಿ.ವಿ. ಗುಂಡಪ್ಪ ಅಥವಾ ಸಿ. ಹಯವದನ ರಾವ್‌ ಮುಂತಾದ ವಿದ್ವಾಂಸರಿದ್ದರು. ಇಂದು ಇಂಥವರ ಸ್ಥಾನವನ್ನು ಸಂಕೇತ ಭಾಷೆಯಲ್ಲಿ ಹೆಸರುಗಳನ್ನು ದಾಖಲಿಸುವ ಜಾಣ ರಾಜಕಾರಣಿಗಳು ಆಕ್ರಮಿಸಿಕೊಂಡಿದ್ದಾರೆ.  

Advertisement

ದೇಣಿಗೆ ಸಂಗ್ರಹ ಮಂತ್ರಿಗಳ ಕೆಲಸವಲ್ಲ
ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ, ಚುನಾವಣೆ ಎದುರಿಸಲು ಹಾಗೂ ದಿನನಿತ್ಯದ ಖರ್ಚುವೆಚ್ಚ ನಿಭಾಯಿಸಲು ರಾಜಕೀಯ ಪಕ್ಷಗಳಿಗೆ ಹಣದ ಅಗತ್ಯ ಇದ್ದೇ ಇದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಕೆ.ಟಿ. ಭಾಷ್ಯಂ ಅವರಂಥ ಕಾಂಗ್ರೆಸ್‌ನ ಉನ್ನತ ನಾಯಕರು ಬೆಂಗಳೂರಿನ ಕಾಟನ್‌ಪೇಟೆಯಲ್ಲಿನ ತಮ್ಮ ಮನೆಯಲ್ಲೇ ಕಾಂಗ್ರೆಸ್‌ ಕಚೇರಿಗೂ ಜಾಗ ನೀಡಿದ್ದುಂಟು. ಹಾಗೆಯೇ ಆರೆಸ್ಸೆಸ್‌ನ ನಾಯಕರು ಅಥವಾ ಕಾರ್ಯಕರ್ತರು ಬಿಜೆಪಿ ಕಚೇರಿಯನ್ನು ಯಾವುದೇ ಖರ್ಚು ವೆಚ್ಚಗಳನ್ನು ನಿರೀಕ್ಷಿಸದೆ ಉಚಿತವಾಗಿ ನಿರ್ವಹಿಸಿದ್ದುಂಟು. ದಿಲ್ಲಿಯ ಕಾಂಗ್ರೆಸ್‌ ದೊರೆಗಳು ಅತ್ಯಂತ ಮುಖ್ಯ ಆಡಳಿತಾರೂಢ ರಾಜ್ಯವಾದ ಕರ್ನಾಟಕವನ್ನು ಅವಲಂಬಿಸಲೇ ಬೇಕಾಗಿ ಬಂದಿದೆ. 

ಆದರೆ ರಾಜಕೀಯ ದೇಣಿಗೆ ಎಂಬುದು ಹೀಗಲ್ಲ. ಅದು ಬರಬೇಕಿರುವುದು ಸ್ವಇಚ್ಛಾ ದೇಣಿಗೆಗಳ ಮೂಲಕ- ವ್ಯಕ್ತಿಗಳಿಂದ, ಕಾರ್ಪೊರೇಟರ್‌ ಸಂಸ್ಥೆಗಳಿಂದ, ಉದ್ಯಮ ಹಾಗೂ ಕೈಗಾರಿಕಾ ಸಂಸ್ಥೆಗಳಿಂದ. ಆದರೆ ಗೋವಿಂದರಾಜು ಅವರದೆನ್ನಲಾದ ಡೈರಿಯ ವಿವರಗಳು ಸಂಬಂಧಪಟ್ಟಿರುವುದು ಇಲ್ಲಿನ ಸಚಿವರು ನೀಡಿರುವ ದೇಣಿಗೆಗಳಿಗೆ. ಪಕ್ಷಕ್ಕೇ ಆಗಲಿ, ಸ್ವಲ್ಪ ಮಟ್ಟಿಗೆ ತಮಗೆಂದೇ ಆಗಲಿ ಹಣ ಸಂಗ್ರಹಿಸುವುದು ಒಬ್ಬ ಮಂತ್ರಿಯ ಕೆಲಸ ಅಲ್ಲ. ಈ ಕೆಲಸವನ್ನು ಒಪ್ಪಿಸಬೇಕಾದದ್ದು ಪ್ರದೇಶ ಕಾಂಗ್ರೆಸ್‌ ಸಮಿತಿಯ ಸುಪರ್ದಿಗೆ. ಕರ್ನಾಟಕದಲ್ಲಿ ಅಥವಾ ಇತರ ರಾಜ್ಯಗಳಲ್ಲಿ; ಅಲ್ಲಿನ ಸಚಿವರು ತಮ್ಮ ಹೈಕಮಾಂಡಿನ ಹೊಟ್ಟೆ ತುಂಬಿಸಲು ರಾಜ್ಯದ ಹಣ ಎತ್ತುತ್ತಾರೆಂದರೆ, ಅದು ಭ್ರಷ್ಟಾಚಾರವಲ್ಲದೆ ಬೇರೇನೂ ಅಲ್ಲ. ಗೋವಿಂದ ರಾಜು ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆದಿರುವುದು 11 ತಿಂಗಳ ಹಿಂದೆ ಎಂದು ಕೆಲ ಕಾಂಗ್ರೆಸ್‌ ನಾಯಕರು ವಾದಿಸಿದ್ದಾರೆ. ಹಾಗಿದ್ದ ಮೇಲೆ ಆದಾಯ ತೆರಿಗೆ ಕಾಯ್ದೆಗೆ ಅನುಸಾರವಾಗಿ ಕಾಂಗ್ರೆಸ್‌ ಪಕ್ಷ ಪ್ರತಿಯೊಬ್ಬ ದೇಣಿಗೆದಾರನಿಂದ 20,000 ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ದೇಣಿಗೆಯ ರೂಪದಲ್ಲಿ ಸ್ವೀಕರಿಸ ಕೂಡದಿತ್ತು. ವಿತ್ತ ಸಚಿವ ಅರುಣ್‌ ಜೇತ್ಲಿ ಈ ದೇಣಿಗೆ ಮೊತ್ತವನ್ನು 2,000 ರೂ.ಗೆ ಇಳಿಸಿರುವುದು ಸರಿಯಾಗಿಯೇ ಇದೆ. ಕರ್ನಾಟಕದ ಕಾಂಗ್ರೆಸ್‌ ನಾಯಕರಿಗೆ ಕೋಪ ಬಂದಿದೆಯಾದರೆ ಅದಕ್ಕೆ ಇನ್ನೊಂದು ಕಾರಣವೂ ಇದೆ. ಕರ್ನಾಟಕದ ಮಂತ್ರಿಗಳಿಂದ ಅರ್ಪಿಸಲಾದ ಮೊತ್ತಗಳನ್ನು ಸ್ವೀಕರಿಸಿರುವವರು ಎಐಸಿಸಿಯ ಸರ್ವಶಕ್ತ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಎಂಬ ಸತ್ಯವನ್ನು ಇಂಗ್ಲಿಷ್‌ ಟಿ.ವಿ. ಚಾನೆಲ್‌ ಬಯಲುಗೊಳಿಸಿದೆ. ಹಣ ಪಡೆದುಕೊಂಡವರ ಹೆಸರುಗಳ ಆದಿ ಅಕ್ಷರಗಳು  ಯಾರವು ಎಂಬುದು ಎಂಥ ಹೆಡ್ಡನಿಗೂ ಅರ್ಥವಾಗುವಂಥದೇ.

ಬಿಜೆಪಿ ಸೋತದ್ದು ಭ್ರಷ್ಟಾಚಾರದಿಂದಲೇ
ಈ ವಿಷಯದಲ್ಲಿ ಬಿಜೆಪಿ ಶಿಕ್ಷೆಯಿಲ್ಲದೆ ಪಾರಾಗಬೇಕೆಂಬುದು ನನ್ನ ಇರಾದೆಯಲ್ಲ. ಈ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡದ್ದಕ್ಕೆ ಕಾರಣ, ಭ್ರಷ್ಟಾಚಾರ ಮತ್ತು ಜನಾರ್ದನ ರೆಡ್ಡಿಯಂಥವರನ್ನು ಮಂತ್ರಿಯನ್ನಾಗಿ ಮಾಡಿಕೊಂಡದ್ದೇ. ಈ ನಡುವೆ ಆಘಾತ ಹುಟ್ಟಿಸುವ ಸಂಗತಿಯೆಂದರೆ, ಮಗಳ ಮದುವೆಗಾಗಿ ಭಾರೀ ದುಂದುವೆಚ್ಚ ಮಾಡಿದ ಜನಾರ್ದನ ರೆಡ್ಡಿಯ ವಿರುದ್ಧ ಐಟಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿ ರಾಜ್ಯದ ಮುಖ್ಯ ಇಂಜಿನಿಯರ್‌ಗಳಿಬ್ಬರ ದಸ್ತಗಿರಿಯ ಬಳಿಕ ಆದಾಯ ತೆರಿಗೆ ಇಲಾಖೆ, ಮುಂದಿನ ಕ್ರಮ ಜರಗಿಸುವಲ್ಲಿ ತೋರಿರುವ ವೈಫ‌ಲ್ಯ. ರಾಜ್ಯದಲ್ಲಿರುವ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳ ಪೈಕಿ ಕೇವಲ ಇವರಿಬ್ಬರಷ್ಟೇ ಭ್ರಷ್ಟರು ಎನ್ನುವಂತಿಲ್ಲ. ಆದರೆ ಇಂಥ ಕಾರಣಗಳು, ಭ್ರಷ್ಟಾಚಾರದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ತೀವ್ರ ವಾಗ್ಧಾಳಿ ನಡೆಸದಂತೆ ಯಡಿಯೂರಪ್ಪನವರನ್ನು ತಡೆಯಲು ಸಾಧ್ಯವಾಗಿಲ್ಲ ಎಂಬಂತಾಗಿದೆ. ಭ್ರಷ್ಟಾಚಾರದ ಕಾರಣಕ್ಕೆ ಯಾವನೇ ರಾಜಕಾರಣಿಯನ್ನೂ ಜೈಲಿಗೆ ಕಳುಹಿಸುವುದು ಸುಲಭದ ಕೆಲಸವೇನಲ್ಲ ಎಂಬುದು ಇಬ್ಬರಿಗೂ ಗೊತ್ತಿದೆ. ಜೆ. ಜಯಲಲಿತಾ ಅಥವಾ ಓಂ ಪ್ರಕಾಶ್‌ ಚೌತಾಲರ ಸಹವರ್ತಿಗಳನ್ನು ದೋಷಿಗಳೆಂದು ಘೋಷಿಸಿ ಜೈಲಿಗೆ ತಳ್ಳಲು ದಶಕಗಳೇ ಬೇಕಾದವು. ಈಗ ಜಾರ್ಖಂಡ್‌ನ‌ ಮಾಜಿ ಮುಖ್ಯಮಂತ್ರಿ ಮಧು ಖೋಡಾ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷಾರ್ಹ ಅಪರಾಧಿಯೆಂದು ಘೋಷಿಸಿ ಜೈಲಿಗೆ ಅಟ್ಟುವ ಸಾಧ್ಯತೆಯೂ ಕಂಡು ಬಂದಿದೆ. ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳದೆಯೂ ಅವರು ಮುಖ್ಯಮಂತ್ರಿಯಾದರು. ಸಾರ್ವಜನಿಕ ಹಣವನ್ನು ಅವರೇ ನುಂಗಿ ನೀರು ಕುಡಿದರು; ಯಾವುದೇ ಪಕ್ಷದ ಹೈಕಮಾಂಡ್‌ ಅಲ್ಲ!

ಅಧಿಕಾರದಲ್ಲಿರುವ ಸಿದ್ದರಾಮಯ್ಯ, ಅಧಿಕಾರದಲ್ಲಿಲ್ಲದ ಬಿ.ಎಸ್‌. ಯಡಿಯೂರಪ್ಪನವರಂತೆ ಮಾಡುವಂತಿಲ್ಲ. ಅವರು ಈಗ ದೇಣಿಗೆ ಸಂಗ್ರಹ ವಿಚಾರದಲ್ಲಿ ಒಳಗೊಂಡಿರುವರೆನ್ನಲಾಗಿರುವ ಸಚಿವರು ಹಾಗೂ ಇತರರ ಮೇಲಿನ ಆರೋಪಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸದೆ ನುಣುಚಿಕೊಳ್ಳುವಂತಿಲ್ಲ. 

ಖಾಸಗಿ ಡೈರಿಯೊಂದನ್ನು ಕೋರ್ಟ್‌ ಕೇಸೊಂದರಲ್ಲಿ ಅಧಿಕೃತ ಪುರಾವೆಯಾಗಿ ಪರಿಗಣಿಸಬಹುದೇ? ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ದಾಖಲಿಸಲಾಗಿದ್ದ ನಿಧಿ ಸಂಗ್ರಹ ಕುರಿತ ಕೇಸಿನಲ್ಲಿ ಸರ್ವೋಚ್ಚ ನ್ಯಾಯಾಲಯ “ಡೈರಿ ಸತ್ಯ’ ಕುರಿತಂತೆ ಪ್ರಕಟಿಸಿದ್ದ ಅಭಿಪ್ರಾಯ, ಇದೀಗ ಕರ್ನಾಟಕದ ವಿದ್ಯಮಾನಗಳ ಮೇಲಿನ ಗಮನವನ್ನು ವಿಚಲಿತಗೊಳಿಸಲಾರದೆ? -ಇಂಥ ಪ್ರಶ್ನೆಗಳೀಗ ಎದ್ದು ನಿಂತಿವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯ ಕುರ್ಚಿಯನ್ನು ಉಳಿಸಿಕೊಳ್ಳಲಿಕ್ಕಾಗಿ “600 ಕೋ. ರೂ.ಗಳಷ್ಟು ಭಾರೀ ಮೊತ್ತವನ್ನು ಕರ್ನಾಟಕದಿಂದ ಎತ್ತಿ ದಿಲ್ಲಿಗೆ ಸುರಿಯಲಾಗಿದೆ’ ಎಂಬ ಆರೋಪವನ್ನು, “ಕೇವಲ ಬಿಜೆಪಿಯ ರಾಜಕೀಯ ದ್ವೇಷದ ಆಪಾದನೆ’ ಎಂದು ತಳ್ಳಿ ಹಾಕುವಂತಿಲ್ಲ. ಪಕ್ಷದ ಹೈಕಮಾಂಡಿಗಾಗಿ ದೇಣಿಗೆ ಸಂಗ್ರಹಿಸುವ ಕೆಲಸದಲ್ಲಿ ಐಎಎಸ್‌ ಅಧಿಕಾರಿಗಳಿಬ್ಬರು ಕೂಡ ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಆರೋಪವೂ ಕೇಳಿಬಂದಿದೆ. ಈಗಾಗಲೇ ರಮೇಶ್‌ ಜಾರಕಿಹೊಳಿಯವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದೂ ಆಗಿದೆ; ಸಿದ್ಧರಾಮಯ್ಯನವರು ಇಂಥ ಮಂತ್ರಿಯನ್ನು ಸಂಪುಟದಲ್ಲಿ ಉಳಿಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next