ಹುಮನಾಬಾದ: ಕಬ್ಬು ಬೆಳೆ ಕಟಾವಿಗೆ ಸಿದ್ಧಗೊಂಡು ತಿಂಗಳು ಗತಿಸಿದೆ. ನೀರಿನ ಅಭಾವದಿಂದ ಕಬ್ಬು ಸಂಪೂರ್ಣ ಒಣಗುತ್ತಿದ್ದರೂ ಕಟಾವು ಮಾಡಲು ಮುಂದಾಗದ ಸಕ್ಕರೆ ಕಾರ್ಖಾನೆಗಳ ಧೋರಣೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳು ವಾರದೊಳಗೆ ಕಬ್ಬು ತೆಗೆದುಕೊಂಡು ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಜಿಲ್ಲೆಯ ರೈತರು ಎಚ್ಚರಿಕೆ ನೀಡಿದ್ದಾರೆ.
ಬೀದರ್ ಜಿಲ್ಲೆಯ ಮೊಗದಾಳದ ಬೀದರ್ ಕಿಸಾನ ಸಹಕಾರ ಸಕ್ಕರೆ ಕಾರ್ಖಾನೆ, ಮಹಾತ್ಮಾಗಾಂಧಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಷೇರು ಇದ್ದರೂ ನಮ್ಮ ಕಬ್ಬು ಕಟಾವು ಕುರಿತು ಸುಮಾರು ಬಾರಿ ಮೊಬೈಲ್‌ನಿಂದ ಸಂಪರ್ಕಿಸಿದಾಗ, ಕೆಲವು ಕಾರ್ಖಾನೆಗಳು ಬರೀ ನಾಳೆ ಎಂದೆನ್ನುತ್ತ ದಿನ ಮುಂದೂಡುತ್ತಿವೆ. ಇನ್ನೂ ಕೆಲವು ರ್ಕಾಖಾನೆಗಳ ಅಧಿಕಾರಿ ಹಾಗೂ ಆಡಳಿತ ಮಂಡಳಿಯವರು ನಮ್ಮಲ್ಲಿ ಸಾಕಷ್ಟು ಕಬ್ಬಿದೆ ಅಗತ್ಯಬಿದ್ದರೇ ತೆಗೆದುಕೊಳ್ಳುತ್ತೇವೆ ಎಂಬುದಾಗಿ ಹೇಳುತ್ತಿದ್ದಾರೆ. ಕಳೆದ ಬಾರಿ ತಮ್ಮ ಕಾರ್ಖಾನೆಗೆ ಕಬ್ಬನ್ನು ಸಾಗಿಸಿಲ್ಲ ಎಂಬ ಕಾರಣ ಮುಂದೆ ಮಾಡಿ ಕಳೆದ ವರ್ಷ ಯಾರಿಗೆ ಕೊಟ್ಟಿದ್ದಿರೋ ಈ ವರ್ಷವೂ ಅವರಿಗೆ ಕೊಡಿ ಎಂದು ಹೇಳಿ ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ನಮ್ಮ ಹೊಲದಲ್ಲಿ 6ಎಕರೆ ಕಬ್ಬು ಬೆಳೆದಿದ್ದೇವೆ. ಕಳೆದ ವರ್ಷ ಎಕರೆಗೆ 60ರಿಂದ 70ಟನ್ ಕಬ್ಬು ಬಂದಿತ್ತು. ಈ ಬಾರಿ ನೀರಿನ ಅಭಾವ ಜೊತೆಯಲ್ಲಿ ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ಕಬ್ಬು ಕಟಾವ್ ಮಾಡದಿರುವ ಕಾರಣ ಸಂಪೂರ್ಣ ಒಣಗುವ ಸ್ಥಿತಿಗೆ ತಲುಪಿದೆ. ಎಕರೆಗೆ 25ಟನ್ ಇಳುವರಿ ಬರುವುದು ಕಷ್ಟಸಾಧ್ಯ ಎಂಬ ಸ್ಥಿತಿಗೆ ಬಂದಿದೆ. ಕಳೆದ ಬಾರಿ 6 ಲಕ್ಷಕ್ಕೂ ಅಧಿಕ ಆದಾಯ ಬಂದಿತ್ತು. ಈ ಬಾರಿ 2 ಲಕ್ಷ ರೂ. ಆದಾಯ ಬರುವಂತಿಲ್ಲ. ಈ ಸಂಬಂಧ ಕಾರ್ಖಾನೆ ನಿರ್ದೇಶಕರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿದರೇ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಮಧ್ಯಮ ವರ್ಗದ ನಮ್ಮಥವರ ಸ್ಥಿತಿಯೇ ಹೀಗಿರಬೇಕಾದರೇ ಸಾಮಾನ್ಯ ರೈತರ ನೋವು ಯಾರು ಕೇಳಬೇಕು ಎಂದು ಪ್ರಶ್ನಿಸಿರುವ ರೈತ ಭಗವಾನರಾವ್ ಕಾಳೆ, ಬಾಬುರಾವ್ ಭುರ್ಕೆ, ರೇವಣಪ್ಪ ಗುಂಪಾ ಇನ್ನೂ ಅನೇಕರು, ಕಾರ್ಖಾನೆ ಅಧಿಕಾರಿಗಳು, ಗ್ಯಾಂಗ್‌ಮನ್‌ಗಳು ಮಾತೆತ್ತಿದರೆ ರೊಕ್ಕಾ ಎನ್ನುತ್ತಿದ್ದಾರೆ ಎಂದು ರೈತರು ಆಕ್ರೋಶದಿಂದ ನುಡಿದರು.
ಕೃಷಿಯನ್ನೇ ನಂಬಿರುವ ರೈತರಿಗೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಕಬ್ಬು ಕಟಾವು
ಮಾಡುವ ಗ್ಯಾಂಗ್‌ಮನ್‌ಗಳು ಹಣಕ್ಕಾಗಿ ರೈತರಿಗೆ ಅನಗತ್ಯ ತೊಂದರೆ ನೀಡದೇ ಶೀಘ್ರದಲ್ಲಿ ಕಬ್ಬು ಕಟಾವಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಹಣ ಕೇಳುವವರ ಮೇಲೆ ನಿಗಾ ಇಡಬೇಕು ಎಬುದು ರೈತರ
ಒತ್ತಾಯ.
ಬೀದರ್ ಜಿಲ್ಲೆಯ ರೈತರ ಜೀವನಾಡಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಗೊಂಡಿದ್ದರೇ ಈ ಸಮಸ್ಯೆ ಇಷ್ಟೊಂದು ಉಲ್ಬಣಗೊಳ್ಳುತ್ತಿರಲಿಲ್ಲ. ಕಾರ್ಖಾನೆಯನ್ನು ಆರಂಭಿಸುವ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಒಳಗೊಂಡಂತೆ ಜವಾಬ್ದಾರಿ ಸ್ಥಾನದಲ್ಲಿ ಪ್ರತಿಯೊಬ್ಬರ ಬೇಜವಾಬ್ದಾರಿಯಿಂದಾಗಿ ರೈತರು ಇಷ್ಟೊಂದು
ತೊಂದರೆ ಅನುಭವಿಸುತ್ತಿದ್ದೇವೆ. ಕೇವಲ ವಾರದೊಳಗಾಗಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಿ, ಕಬ್ಬು ಕಟಾವು ಆರಂಭಿಸಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಭಗವಾನರಾವ್ ಕಾಳೆ, ಕಬ್ಬು ಬೆಳೆದ ರೈತ