ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಮಹತ್ವದ ಸಭೆ ಗುರುವಾರ ನಡೆದಿದ್ದು , ರೈತರಿಗೆ ಎಫ್ಆರ್‌ಪಿ ದರಕ್ಕಿಂತ 300 ರೂಪಾಯಿ ಹೆಚ್ಚು ನೀಡಲು ತೀರ್ಮಾನಿಸಲಾಗಿದೆ.
ಟನ್‌ಗೆ ಹೆಚ್ಚುವರಿಯಾಗಿ 300 ರೂಪಾಯಿ ನೀಡಲು ತೀರ್ಮಾನಕ್ಕೆ ಬರಲಾಗಿದ್ದು, ಸಕ್ಕರೆ ಕಾರ್ಖಾನೆಗಳು 150 ರೂಪಾಯಿ ನೀಡಲು ತೀರ್ಮಾನಿಸಿದ್ದು, ಇನ್ನುಳಿದ 150 ರೂಪಾಯಿಯನ್ನು ಸರ್ಕಾರ ನೀಡಲು ತೀರ್ಮಾನಿಸಿದೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಬಂಡೆಪ್ಪ ಕಾಶೆಂಪೂರ, ರಮೇಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಮಾಜಿ ಸಚಿವರುಗಳು, ಅಧಿಕಾರಿಗಳು ಮತ್ತು ಕಾರ್ಖಾನೆ ಮಾಲೀಕರು ಉಪಸ್ಥಿತರಿದ್ದರು.
ರೈತರೊಂದಿಗೆ ನಡೆದ ಸಭೆಯಲ್ಲಿ ಹೆಚ್ಚುವರಿ ಹಣ ನೀಡಲು ಮುಖ್ಯಮಂತ್ರಿಯವರಿಗೆ ಬೇಡಿಕೆ ಸಲ್ಲಿಸಲಾಗಿತ್ತು.
ಕಬ್ಬಿನ ದರ ನಿಗದಿ ಹಾಗೂ ಬಾಕಿ ಹಣ ಪಾವತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಭಾರತೀಯ ಕೃಷಿಕ ಸಮಾಜ ಮುಖಂಡರ ಅಹೋರಾತ್ರಿ ಧರಣಿ ಮುಖ್ಯಮಂತ್ರಿಗಳ ರೈತರೊಂದಿಗಿನ ಸಭೆ ನಂತರವೂ ಮುಂದುವರಿದಿದ್ದು ರೈತರು ಕಾರ್ಖಾನೆ ಮಾಲೀಕರ ಸಭೆಯ ಬಳಿಕ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು.