ಬಾಗಲಕೋಟೆ: ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಪಾವತಿಸಲು ಜೂ.30 ಗಡುವು ನೀಡಲಾಗಿದ್ದು, ಪಾವತಿಸದಿದ್ದಲ್ಲಿ ಜು.1ರಂದು ಸಕ್ಕರೆ ಜಪ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ನವನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆಯಲ್ಲಿ ಅವರು ಮಾತನಾಡಿದರು. 2018-19ನೇ ಹಂಗಾಮಿನ ಒಟ್ಟು 15849.18 ಲಕ್ಷ ಬಾಕಿ ಉಳಿದಿದ್ದು, ಈ ಕುರಿತು ಈಗಾಗಲೇ ಜೂ.17ರಂದು ಸಕ್ಕರೆ ಆಯುಕ್ತರ ಆದೇಶದಂತೆ ಕಬ್ಬು ಬಾಕಿ ವಸೂಲಾತಿಗೆ ನೋಟಿಸ್ ನೀಡಲಾಗಿದೆ. ಜೂ.30ರಂದು ಸಂಜೆ 6ಗಂಟೆಯೊಳಗಾಗಿ ಬಾಕಿ ಹಣ ಸಂಪೂರ್ಣ ಪಾವತಿಸಲಿದ್ದಲ್ಲಿ ಜು.1ರಂದು ಸಕ್ಕರೆ ಜಪ್ತಿಗೆ ಕ್ರಮ ಜರುಗಿಸಲಾಗುವುದು ತಿಳಿಸಿದರು.
ನಿರಾಣಿ ಸುಗರ್, ರನ್ನ ಶುಗರ್ ಹಾಗೂ ಸಾಯಿಪ್ರಿಯಾ ಶುಗರ್ ನವರು ಜೂ.30ರೊಳಗೆ ಪಾವತಿಸುವುದಾಗಿ ತಿಳಿಸಿದರೆ, ಉಳಿದ ಸಕ್ಕರೆ ಕಾರ್ಖಾನೆ ಮಾಲಿಕರು ಉತ್ಪಾದನೆ ಸಹಾಯಧನ ಮತ್ತು ರಸ್ತೆ ಸಾರಿಗೆ ವಿನಾಯಿತಿ ಕೋರಿ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ವಿನಾಯಿತಿ ಹಣ ಬಂದ ಮೇಲೆ ಪಾವತಿಸಲು ಕಾಲಾವಧಿ ಕೇಳಿ ಮನವಿ ನೀಡುವುದಾಗಿ ತಿಳಿಸಿದರು. ಈಗಾಗಲೇ ಈ ಹಿಂದೆ ಕಾಲಾವಕಾಶ ನೀಡಲಾಗಿದೆ. ಕಾಲಾವಕಾಶ ನೀಡುವ ಪ್ರಶ್ನೆಯೇ ಇಲ್ಲ. ಮೊದಲು ಕೊಡಬೇಕಾದ ರೈತರ ಕಬ್ಬು ಬಾಕಿ ಪಾವತಿಸಿ ನಂತರ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ಸೂಚಿಸಿದರು.
2018-19ನೇ ಸಾಲಿಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಯವರು ಒಟ್ಟು 98,84,052.873 (ಎಚ್ಎನ್‌ಟಿ ಒಳಗೊಂಡು) ಕಬ್ಬು ನುರಿಸಿದ್ದು, ಎಫ್‌ಆರ್‌ಪಿ ಅನ್ವಯ 2,89,863.81 ಲಕ್ಷ ರೂ. ಮೊತ್ತ ಪಾವತಿಸಬೇಕಾಗಿದೆ. ಈ ಪೈಕಿ 2,74,014.62 ಲಕ್ಷ ರೂ. ಮೊತ್ತ ಪಾವತಿಸಿದ್ದು, 15,849.18 ಲಕ್ಷ ರೂ.ಮೊತ್ತ ಪಾವತಿಸಲು ಬಾಕಿ ಇರುತ್ತದೆ. ನಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ ಲಿ) ಶುಗರ್ ನವರು 2018-19ನೇ ಸಾಲಿನ ಬಾಕಿ ಹಣ ಸಂಪೂರ್ಣವಾಗಿ ಪಾವತಿಸಿದ್ದು, ಈ ಕಾರ್ಖಾನೆಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.
2017-18ನೇ ಸಾಲಿಗೆ ಹೆಚ್ಚುವರಿಯಾಗಿ ಘೋಷಿಸಿರುವ ದರ ಪಾವತಿ ಕುರಿತು ಇಐಡಿ ಪ್ಯಾರಿ ಶುಗರ್ ಹೊರತುಪಡಿಸಿ ಉಳಿದ ಎಲ್ಲ ಕಾರ್ಖಾನೆಯವರು ಪಾವತಿಸಲು ಬಾಕಿ ಉಳಿದಿದೆ. 2016-17ನೇ ಹಂಗಾಮಿಗೆ ಕಾರ್ಖಾನೆಯವರು ಘೋಷಿಸಿರುವ ಹೆಚ್ಚುವರಿ ದರ ಪಾವತಿ ಬಾಕಿ ಉಳಿಸಿಕೊಂಡಿರುವ ನಿರಾಣಿ ಶುಗರ್ನವರು 682.66 ಲಕ್ಷ ರೂ. ಹಾಗೂ ರನ್ನ ಶುಗರ್ 288.89 ಲಕ್ಷ ರೂ. ಹಾಗೂ ಇಐಡಿ ಪ್ಯಾರಿ ಇಂಡಿಯಾ 1387.84 ಲಕ್ಷ ಬಾಕಿ ಉಳಿದಿದ್ದು, ತುರ್ತಾಗಿ ಪಾವತಿಸಲು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಚ್.ಜಯಾ, ಜಮಖಂಡಿ ಉಪ ವಿಭಾಗಾಧಿಕಾರಿ ಮೊಹಮ್ಮದ ಇಕ್ರಮ, ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಇದ್ದರು.