Advertisement

ಸಕ್ಕರೆ ಕಾರ್ಖಾನೆ ಚುನಾವಣೆ ಪೈಪೋಟಿ

10:54 AM Jun 20, 2019 | Suhan S |

ಹಾವೇರಿ: ಕಬ್ಬು ಬೆಳೆಗಾರರ ಹಿತಕಾಯುವ ಜತೆಗೆ ಕಾರ್ಖಾನೆಯ ಗುತ್ತಿಗೆದಾರರ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ 2014ರಿಂದ ಅಸ್ತಿತ್ವಕ್ಕೆ ಬಂದ ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಈಗ ಎರಡನೇ ಅವಧಿಗೆ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಭಾರಿ ತುರುಸು ಏರ್ಪಟ್ಟಿದೆ.

Advertisement

ಸರ್ಕಾರದ ನಿರ್ಲಕ್ಸ್ಯ ದಿಂದ ಆಡಳಿತ ನಿರ್ದೇಶಕ ಮಂಡಳಿ ಇಲ್ಲದೇ ಏಳು ವರ್ಷ ಪೂರೈಸಿದ ಸಂಗೂರಿನ ಸಹಕಾರಿ ಸಕ್ಕರೆ ಕಾರ್ಖಾನೆಗೆ 2014ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಸಿ ಹೊಸ ಆಡಳಿತ ನಿರ್ದೇಶಕ ಮಂಡಳಿ ರಚಿಸಲಾಗಿತ್ತು. ಆಡಳಿತ ಮಂಡಳಿಯ ಐದು ವರ್ಷಗಳ ಅವಧಿ ಜೂ. 12ಕ್ಕೆ ಪೂರ್ಣಗೊಂಡಿದ್ದು, ಈಗ ಹೊಸ ಆಡಳಿತ ಮಂಡಳಿಗಾಗಿ ಚುನಾವಣೆ ನಡೆಯುತ್ತಿದೆ.

ಸಹಕಾರಿ ಸಕ್ಕರೆ ಕಾರ್ಖಾನೆಯ ಬೆಳಗಾರರ ಸದಸ್ಯ ಕ್ಷೇತ್ರದಿಂದ 12, ಅನುತ್ಪಾದಕ ಸದಸ್ಯರ ಕ್ಷೇತ್ರದಿಂದ ಎರಡು ಹಾಗೂ ಸಹಕಾರ ಸಂಘಗಳ ಮತಕ್ಷೇತ್ರದಿಂದ ಒಂದು ಸೇರಿ ಒಟ್ಟು 15 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಸಾಮಾನ್ಯ ಸ್ಥಾನಗಳು ಆರು, ಪರಿಶಿಷ್ಟ ಜಾತಿ ಮೀಸಲು ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ತಲಾ ಒಂದು, ಮಹಿಳಾ ಮೀಸಲು ಸ್ಥಾನದಿಂದ ಎರಡು, ಹಿಂದುಳಿದ ಅ ವರ್ಗ ಮೀಸಲು ಸ್ಥಾನದಿಂದ ಎರಡು, ಬ ವರ್ಗದ ಅನುತ್ಪಾದಕ ಸದಸ್ಯರ ಕ್ಷೇತ್ರದಿಂದ ಎರಡು, ಡ ವರ್ಗದ ಸಹಕಾರ ಸಂಘಗಳ ಮತಕ್ಷೇತ್ರದಿಂದ ಒಂದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಹಾವೇರಿ, ಗದಗ, ಧಾರವಾಡ, ಬಳ್ಳಾರಿ, ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆ ಸೇರಿ 20,864 ಶೇರುದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಲಂಗು ಲಗಾಮು ಇಲ್ಲದ ಕಾರ್ಖಾನೆ ಗುತ್ತಿಗೆದಾರರ ವರ್ತನೆಗೆ ಆಡಳಿತ ನಿರ್ದೇಶಕ ಮಂಡಳಿ ಕಡಿವಾಣ ಹಾಕಬಹುದು. ರೈತರ ಬೇಡಿಕೆ, ಸಮಸ್ಯೆಗಳಿಗೆ ಮಂಡಳಿ ಸ್ಪಂದಿಸಬಹುದು. ಕಾರ್ಖಾನೆಯ ಆಡಳಿತ, ವ್ಯವಹಾರದಲ್ಲಿ ಒಂದಿಷ್ಟು ಪಾರದರ್ಶಕತೆ ಬರಬಹುದು ಎಂಬ ಸದುದ್ದೇಶದಿಂದ ಆಡಳಿತ ಮಂಡಳಿಯನ್ನು 2014ರಲ್ಲಿ ಮೊದಲ ಬಾರಿಗೆ ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. ಆದರೆ, ಆಡಳಿತ ಮಂಡಳಿ ಕಬ್ಬು ಬೆಳೆಗಾರರ ಪರವಾಗಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂಬ ಆರೋಪ ಈಗ ವ್ಯಾಪಕವಾಗಿ ಕೇಳಿ ಬಂದಿದೆ.

ಕಬ್ಬಿಗೆ ದರ ನಿಗದಿ, ಕಬ್ಬು ಪೂರೈಸಿದವರಿಗೆ ಸಕಾಲಕ್ಕೆ ಹಣ ನೀಡುವುದು ಸೇರಿದಂತೆ ಇನ್ನಿತರ ವಿಚಾರದಲ್ಲಿ ಕಾರ್ಖಾನೆ ಗುತ್ತಿಗೆದಾರರು ಆಡಳಿತ ಮಂಡಳಿಯನ್ನು ಹಿಡಿತಕ್ಕೆ ಪಡೆದು ರೈತರ ಹಿತ ಕಡೆಗಣಿಸುವ ವರ್ತನೆ ತೋರಿದ್ದಾರೆ. ಜತೆಗೆ ಆಡಳಿತ ಮಂಡಳಿಯ ಯಾವ ನಿರ್ಧಾರಕ್ಕೂ ಗುತ್ತಿಗೆದಾರರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಹೀಗಾಗಿ ರೈತರ ಪಾಲಿಗೆ ಆಡಳಿತ ಮಂಡಳಿ ಇದ್ದೂ ಇಲ್ಲದಂತಾಯಿತು ಎಂಬ ಅಭಿಪ್ರಾಯ ಹಲವು ಬೆಳೆಗಾರರದ್ದಾಗಿದೆ.

Advertisement

ರಾಜಕೀಯಪ್ರೇರಿತ: ಎರಡನೇ ಅವಧಿಗೆ ಆಡಳಿತ ಮಂಡಳಿ ಚುನಾವಣೆ ಘೋಷಣೆಯಾಗಿದ್ದು, ಕಬ್ಬು ಬೆಳೆಗಾರರರು ತಮ್ಮ ಹಿತ ಕಾಪಾಡುವ ಹೊಸ ಆಡಳಿತ ಮಂಡಳಿ ರಚಿಸಿಕೊಳ್ಳುವ ಅವಕಾಶ ಇದೆಯಾದರೂ ಇಲ್ಲಿ ರಾಜಕೀಯ ಪಕ್ಷಗಳು ತಮ್ಮ ಹಿಡಿತ ಸಾಧಿಸಲು ಸ್ಪರ್ಧೆಗೆ ಇಳಿದಿರುವುದರಿಂದ ಪಕ್ಷಾತೀತ ಆಡಳಿತ ಮಂಡಳಿ ರಚನೆ ಕಷ್ಟಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದ್ದು, ಕಾರ್ಖಾನೆ ಚುನಾವಣೆಯಲ್ಲಿಯೂ ರಾಜಕಾರಣ ನುಸುಳಿ ಅನಾರೋಗ್ಯಕರ ಪೈಪೋಟಿ ಶುರುವಾಗಿದೆ.

ಕಾರ್ಖಾನೆ ಗುತ್ತಿಗೆದಾರರು ಸಹ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವುದರಿಂದ ಅವರೂ ತಮ್ಮ ಪಕ್ಷದವರನ್ನು ಆರಿಸಿ ತಂದು ಆಡಳಿತ ಮಂಡಳಿ ತಮ್ಮ ಹಿಡಿತದಲ್ಲಿಯೇ ಇರುವಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ರಾಜಕೀಯ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿರುವುದರಿಂದ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ರಾಜಕೀಯ ಪ್ರೇರಿತಗೊಂಡಿರುವುದು ವಿಷಾದನೀಯ.

ಎರಡನೇ ಚುನಾವಣೆ: ರೈತರ ಷೇರು ಹಣ ಹಾಗೂ ಸರ್ಕಾರದ ಸಹಾಯಧನದೊಂದಿಗೆ 35 ವರ್ಷಗಳ ಹಿಂದೆ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಸಂಗೂರಿನಲ್ಲಿ ಸ್ಥಾಪನೆಯಾಗಿತ್ತು. ನಂತರ ಕಾರ್ಖಾನೆ ನಷ್ಟ ಅನುಭವಿಸಿತು. 50 ಕೋಟಿಯಷ್ಟು ಸಾಲ ಇತ್ತು. ಈ ಸಂದರ್ಭದಲ್ಲಿ 2007-08ರಲ್ಲಿ ದಾವಣಗೆರೆಯ ಜಿ.ಎಂ. ಶುಗರ್ಗೆ 42 ಕೋಟಿ ರೂ.ಗಳಿಗೆ 30ವರ್ಷ ಗುತ್ತಿಗೆ ನೀಡಲಾಗಿತ್ತು. ಕಾರ್ಖಾನೆ ಹಸ್ತಾಂತರಿಸುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಕಾರ್ಖಾನೆಯನ್ನು ಗುತ್ತಿಗೆ ಕೊಟ್ಟ ನಂತರ ಸರ್ಕಾರ ಆಡಳಿತ ಮಂಡಳಿಯ ಚುನಾವಣೆಯನ್ನೇ ನಡೆಸಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಾಗ ಹೊಸ ಆಡಳಿತ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದಿತ್ತು. ಈಗ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಎರಡನೇ ಚುನಾವಣೆ ನಡೆಯುತ್ತಿದೆ.

ಹುಸಿಯಾದ ನಿರೀಕ್ಷೆ: ಆಡಳಿತ ನಿರ್ದೇಶಕ ಮಂಡಳಿ ಇರದೇ ಇದ್ದಾಗ ಗುತ್ತಿಗೆದಾರರು ಕಾರ್ಖಾನೆಯಲ್ಲಿ ತಮಗೆ ಬೇಕಾದಂತೆ ಮಾರ್ಪಾಡು, ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದರು. ಕಾರ್ಖಾನೆಯಲ್ಲಿ ಏನು ಅಭಿವೃದ್ಧಿ, ಮಾರ್ಪಾಡು ನಡೆಯುತ್ತಿದೆ? ಎಷ್ಟು ಲಾಭ ಬಂದಿದೆ? ಸರ್ಕಾರಕ್ಕೆ ಎಷ್ಟು ಹಣ ಕಟ್ಟಿದ್ದಾರೆ? ಸಾಲ ಎಷ್ಟಿದೆ ? ಎಂಬ ಇತ್ಯಾದಿ ಮಾಹಿತಿ ಯಾರಿಗೂ ಸಿಗುತ್ತಿರಲಿಲ್ಲ. ಕಾರ್ಖಾನೆಗೆ ಎಷ್ಟು ಕಬ್ಬು ಬರುತ್ತದೆ. ಎಷ್ಟು ಸಕ್ಕರೆ ಉತ್ಪಾದನೆಯಾಗುತ್ತದೆ. ದರ ಎಷ್ಟು ನೀಡಲಾಗುತ್ತಿದೆ. ಕಾರ್ಖಾನೆಯ ಆವರಣದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಲಾಗುತ್ತಿದೆ ಎಂಬೆಲ್ಲ ನಿಖರ ಮಾಹಿತಿ ಜನಸಾಮಾನ್ಯ ರೈತರಿಗಂತೂ ಗೊತ್ತೆ ಆಗುತ್ತಿರಲಿಲ್ಲ. ಹೊಸ ಆಡಳಿತ ಮಂಡಳಿ ರಚನೆಯಿಂದ ಕಾರ್ಖಾನೆಯ ವ್ಯವಹಾರದಲ್ಲಿ ಒಂದಿಷ್ಟು ಪಾರದರ್ಶಕತೆ ಬರಬಹುದು ಎಂದು ಬಹುನಿರೀಕ್ಷೆಯೊಂದಿಗೆ ಕಳೆದ ಬಾರಿ ಪ್ರಥಮ ಆಡಳಿತ ಮಂಡಳಿ ರಚಿಸಲಾಗಿತ್ತು. ಆದರೆ, ಆಡಳಿತ ಮಂಡಳಿಯಿಂದ ಯಾವ ನಿರೀಕ್ಷೆಗಳೂ ಸಾಕಾರಗೊಳ್ಳದೇ ಇರುವುದರಿಂದ ಕಾರ್ಖಾನೆಗೆ ಆಡಳಿತ ಮಂಡಳಿ ಬೇಕೇ ಎಂಬ ಹೊಸ ಪ್ರಶ್ನೆ ಹುಟ್ಟಿಕೊಂಡಿರುವುದು ವಿಪರ್ಯಾಸವೇ ಸರಿ.

ಒಟ್ಟಾರೆ ಕಾರ್ಖಾನೆ ಗುತ್ತಿಗೆದಾರರಿಗೆ ಮೂಗುದಾರ ಹಾಕಿ ರೈತರಿಗೂ, ಕಾರ್ಖಾನೆಗೂ ಒಳ್ಳೆಯದಾಗಬೇಕಾದರೆ ರೈತಪರ ಇಚ್ಛಾಶಕ್ತಿ ಹೊಂದಿರುವ ಪಕ್ಷತೀತ ನಿರ್ದೇಶಕರ ಆಯ್ಕೆ ನಡೆಯಬೇಕು ಎಂಬುದು ಬೆಳೆಗಾರರ ಆಶಯವಾಗಿದೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next