ಬ್ರಹ್ಮಾವರ: ಕಳೆದ ಹದಿನೆಂಟು ವರ್ಷಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಶೀಘ್ರ ಪುನರ್ ನಿರ್ಮಾಣಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಸರಕಾರದ ಸಾಲ ಹೊರತುಪಡಿಸಿ ಇತರ ಬಾಕಿ ಪಾವತಿ ಹಾಗೂ ಸಾಲಗಳು ಶೀಘ್ರ ಋಣ ಮುಕ್ತವಾಗಲಿದೆ ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಥಗಿತಗೊಂಡಿದ್ದ ಸಕ್ಕರೆ ಕಾರ್ಖಾನೆಯಿಂದ ಬರತಕ್ಕ ಬಾಕಿಯ ವಸೂಲಾತಿಗಾಗಿ ವಾಣಿಜ್ಯ ತೆರಿಗೆ ಇಲಾಖೆ, ಭವಿಷ್ಯ ನಿಧಿ ಇಲಾಖೆ, ಮಾಜಿ ಕಾರ್ಮಿಕರು, ಆರ್ಥಿಕ ಸಂಸ್ಥೆಗಳು ಹಾಗೂ ಇನ್ನೂ ಅನೇಕರು ಕಾರ್ಖಾನೆಯ ಜಮೀನಿನ ಮೇಲೆ ಪಹಣಿ ಪತ್ರದ ಕಲಂ ಹನ್ನೊಂದರಲ್ಲಿ ಋಣ ದಾಖಲಿಸಿಕೊಂಡಿದ್ದರು. ಈ ಹಿಂದೆ ಸಕ್ಕರೆ ಕಾರ್ಖಾನೆಯು ಆರ್ಥಿಕ ಸಂಸ್ಥೆಗಳಿಂದ ವಿವಿಧ ರೂಪದಲ್ಲಿ ಸಾಲ ಪಡೆಯುವ ಸಂದರ್ಭ ಕಾರ್ಖಾನೆಯ ಆಸ್ತಿಯನ್ನು ಅಡವು ಇಟ್ಟು ಸಾಲ ಪಡೆದಿದ್ದು, ಸುಮಾರು 20 ವರ್ಷಗಳಿಂದ ಮರುಪಾವತಿಯಾಗಿಲ್ಲ.
ಹೀಗಾಗಿ ಈ ಸಾಲವನ್ನು ಬಡ್ಡಿ ಸಹಿತವಾಗಿ ವಸೂಲಾತಿ ಮಾಡುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ದಾವೆ ದಾಖಲಿಸಲಾಗಿದೆ. ಮಾಜಿ ಕಾರ್ಮಿಕರು, ವಾಣಿಜ್ಯ ತೆರಿಗೆ ಇಲಾಖೆ, ಭವಿಷ್ಯ ನಿಧಿ ಇಲಾಖೆಯವರು ಪಾವತಿಗೆ ಬಾಕಿ ಇರುವ ಮೊತ್ತಕ್ಕೆ ಕಾರ್ಖಾನೆಯ ಜಮೀನನ್ನು ಹರಾಜು ಮಾಡಲು ಆದೇಶ ಪಡೆದಿದ್ದು, ಸಂಬಂಧಪಟ್ಟವರೊಂದಿಗೆ ಆಡಳಿತ ಮಂಡಳಿ ಮಾತುಕತೆ ನಡೆಸಿದೆ.
ಇದೀಗ ಕಾರ್ಖಾನೆಯ ಹಳೆಯ ಕಟ್ಟಡವನ್ನು ಹಾಗೂ ಹಾಳಾಗುತ್ತಿದ್ದ ಯಂತ್ರೋಪಕರಣಗಳನ್ನು ಸರಕಾರದ ಅನುಮತಿ ಪಡೆದು ಉತ್ತಮ ಧಾರಣೆಗೆ ಮಾರಾಟ ಮಾಡಿ ಸಕ್ಕರೆ ಕಾರ್ಖಾನೆಯ ಸಾಲವನ್ನು ಮರು ಪಾವತಿಸಲಾಗುತ್ತಿದೆ ಎಂದು ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಶೀಘ್ರ ಸಾಲ ಮುಕ್ತ
ಈಗಾಗಲೇ ವಾಣಿಜ್ಯ ತೆರಿಗೆ, ಭವಿಷ್ಯ ನಿಧಿ ಇಲಾಖೆ ಹಾಗೂ ಮಾಜಿ ಕಾರ್ಮಿಕರ ಸಾಲ ಮತ್ತು ಬಾಕಿಯನ್ನು ಪಾವತಿ ಮಾಡಿ ಹರಾಜಾಗಲಿದ್ದ ಕಾರ್ಖಾನೆಯ ಆಸ್ತಿಯನ್ನು ಉಳಿಸಿಕೊಂಡಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಕೋಟ ಸಹಕಾರಿ ವ್ಯಾವಸಾಯಿಕ ಸಂಘದೊಂದಿಗೆ ಚರ್ಚಿಸಿ ಅವರ ಸಾಲವನ್ನು ಸಹ ಶೀಘ್ರ ಮರು ಪಾವತಿಸಿ ಕಾರ್ಖಾನೆಯ ಜಮೀನನ್ನು ಸಂಪೂರ್ಣ ಋಣ ಮುಕ್ತಗೊಳಿಸಿ ಕಾರ್ಖಾನೆಯನ್ನು ಸಂಪೂರ್ಣ ಸಾಲ ಮುಕ್ತ ಗೊಳಿಸಲಾಗುವುದೆಂದು ಸುಪ್ರಸಾದ್ ಶೆಟ್ಟಿ ದೃಢ ನಿಲುವು ವ್ಯಕ್ತಪಡಿಸಿದ್ದಾರೆ.