ಅಕ್ಕಿಆಲೂರು: ಗ್ರಾಮೀಣ ಭಾಗಗಳಲ್ಲಿ ಹಿಂದೂ ಸಂಪ್ರದಾಯದಂತೆ ಹಲವಾರು ಕಟ್ಟುಪಾಡುಗಳ ಮಧ್ಯೆ ಆಚರಿಸಲಾಗುವ ಪ್ರತಿಯೊಂದು ಹಬ್ಬಗಳಿಗೂ ತನ್ನದೆ ಆದ ವಿಶಿಷ್ಟ ಇತಿಹಾಸವಿದ್ದು, ಪ್ರತಿವರ್ಷ ಕಾರ್ತಿಕ ಮಾಸದ ಪ್ರಾರಂಭದಲ್ಲಿ ಗೌರಿ ಹುಣ್ಣಿಮೆ ಆಚರಿಸುವ ನಿಟ್ಟಿನಲ್ಲಿ ತಯಾರಾಗುತ್ತಿರುವ ಸಕ್ಕರೆ ಗೊಂಬೆಗಳ ಬೆಲೆ ಏರಿಕೆಯಾಗಿದ್ದು ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಗೆ ಹಬ್ಬ ಆಚರಿಸುವುದೇ ಹೊರೆಯಂತಾಗಿದೆ.
ಸಂಪದ್ಬರಿತ ರಾಷ್ಟ್ರವಾಗಿರುವ ಭಾರತದಲ್ಲಿ ಪೂರ್ವಜರ ಮಾರ್ಗದರ್ಶನದಂತೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಗೌರಿ ಹುಣ್ಣಿಮೆಯನ್ನು ಮಕ್ಕಳು ಮತ್ತು ಮಹಿಳೆಯರು ಅತ್ಯಂತ ಸಂಭ್ರಮದಿಂದ ಆಚರಿಸುವುದು ವಾಡಿಕೆ, ಹಿಂದೂ ಸಂಪ್ರದಾಯದ ಧರ್ಮಾಚರಣೆಯಂತೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವ ಈ ಹಬ್ಬದಲ್ಲಿ ಲಕ್ಷ್ಮೀ ಸ್ವರೂಪಳಾದ ಗೌರಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂಲಕ ಗ್ರಾಮೀಣ ಭಾಗಗಳಲ್ಲಿನ ಸಮಸ್ಯೆಗಳು ಪರಿಹಾರಗೊಳ್ಳಲಿ ಎಂದು ಪ್ರಾರ್ಥಿಸಲಾಗುತ್ತದೆ. ಹಳ್ಳಿ ಸೊಗಡಿನ ಜನಪದ ಶೈಲಿಯಲ್ಲಿ ವೈವಿಧ್ಯಮಯವಾಗಿ ರೂಪುಗೊಂಡಿರುವ ಗೌರಿಹುಣ್ಣಿಮೆಯಲ್ಲಿ ಕಂಡುಬರುವ ಸಕ್ಕರೆಗೊಂಬೆಗಳ ಆರತಿ ಹಬ್ಬದ ಆಚರಣೆ ವೈಶಿಷ್ಟ್ಯವಾಗಿದೆ.
ಕುಟುಂಬದವರ, ನೆರೆಹೊರೆಯವರ ಮತ್ತು ಬಂಧು-ಬಾಂಧವರ ಬಾಳು ಸಕ್ಕರೆಯಂತಿರಲಿ. ಪ್ರತಿಮನೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮೀ ನೆಲೆಸಲಿ ಎಂಬುದು ಸಕ್ಕರೆ ಗೊಂಬೆ ಆರತಿಯ ಉದ್ದೇಶವಾಗಿದೆ. ನೆರೆ ಸಂಕಷ್ಟದಿಂದ ಉಂಟಾದ ಹಣಕಾಸಿನ ಸಮಸ್ಯೆ ಮತ್ತು ಕಾರ್ಮಿಕರ ಕೊರತೆ ಮದ್ಯೆಯೂ ಗೊಂಬೆ ತಯಾರಕರು ಹಬ್ಬದ ಆಕರ್ಷಣೆಯಾಗಿರುವ ಸಕ್ಕರೆಗೊಂಬೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಗೌರಿ, ಆನೆ, ಬಸವಣ್ಣ, ಈಶ್ವರ, ಒಂಟೆ, ಗೋಪುರ, ತೇರು ಮುಂತಾದ ಆಕಾರಗಳಲ್ಲಿ ತಯಾರಾಗುವ ಬಣ್ಣ ಬಣ್ಣದ ಸಕ್ಕರೆ ಗೊಂಬೆ ತಯಾರಿಕೆ ಭರದಿಂದ ಸಾಗಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಕಳೆದ ವರ್ಷ ಪ್ರತಿ ಕೆಜಿಗೆ 80ರೂ. ನಷ್ಟಿದ್ದ ಸಕ್ಕರೆ ಗೊಂಬೆ ಬೆಲೆ ಈ ಬಾರಿ 120ರೂ. ಗಳ ವರೆಗೂ ಏರಿಕೆಯಾಗಲಿದೆ. ಎನ್ನುತ್ತಾರೆ ಗೊಂಬೆ ತಯಾರಕರು.
ಪ್ರತಿವರ್ಷ 5-6 ಕ್ವಿಂಟಲ್‌ನಷ್ಟು ಸಕ್ಕರೆ ಬಳಸಿ ಗೊಂಬೆ ತಯಾರಿಸಲಾಗುತ್ತದೆ. ಹಳ್ಳಿಯ ಆಚರಣೆಯಾಗಿರುವ ಗೌರಿಹುಣ್ಣಿಮೆ ವರ್ಷ ಕಳೆದಂತೆ ತನ್ನ ಕಳೆ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಕಾರ್ಮಿಕರು ಸಿಗದೆ ಗೊಂಬೆ ತಯಾರಿಕೆಗೆ ಸಮಯ ಮತ್ತು ಖರ್ಚು ಹೆಚ್ಚುತ್ತಿದೆ. ಪ್ರತಿ ಕೆಜಿ ಗೊಂಬೆಗೆ 40 ರಿಂದ 50 ರೂ. ವರೆಗೂ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ.
–ಮಲ್ಲೇಶಪ್ಪ, ನಂದಿಗೇರಿ, ಗೊಂಬೆ ತಯಾರಕ
-ಪ್ರವೀಣಕುಮಾರ ಎಸ್. ಅಪ್ಪಾಜಿ