Advertisement

ಕಬ್ಬಿನ ತೋಟಗಳಿಗೆ ಕರಮಂಟನ ಕಾಟ

09:35 AM Jun 26, 2021 | Team Udayavani |

ಧಾರವಾಡ: ರಾತ್ರೋರಾತ್ರಿ ನೆಲಸಮವಾಗುತ್ತಿದೆ ಎದೆಎತ್ತರದ ಕಬ್ಬು. ತಿಂದಿದ್ದಕ್ಕಿಂತಲೂ ತುಳಿದಾಡಿದ್ದೇ ಹೆಚ್ಚು. ವಿದ್ಯುತ್‌ ಬೇಲಿಗೂ ಅಂಜದ ಮಿಕಗಳು. ಒಂದೆಡೆ ಬೆಂಕಿರೋಗ ಮತ್ತು ಕಪ್ಪುಚುಕ್ಕೆ ರೋಗದ ಹಾವಳಿ, ಇನ್ನೊಂದೆಡೆ ಕರಮಂಟನ ಕಾಟ.

Advertisement

ಹೌದು, ಜಿಲ್ಲೆಯ ಅರೆಮಲೆನಾಡು ತಾಲೂಕುಗಳಾದ ಅಳ್ನಾವರ, ಕಲಘಟಗಿ ಮತ್ತು ಧಾರವಾಡ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಗಳ ಕೃಪೆಯಿಂದ ಎದೆಎತ್ತರಕ್ಕೆ ಬೆಳೆದು ನಿಂತ ಕಬ್ಬಿಗೆ ಇದೀಗ ಒಂದೊಂದೆ ಕಂಟಕಗಳು ಆರಂಭಗೊಂಡಿವೆ. ಬೇಸಿಗೆಯಲ್ಲಿ ನೀರಿನ ಬರ ಸಾಮಾನ್ಯ. ಆದರೆ ಈ ಬಾರಿ ಸುರಿದ ಮಳೆಗಳಿಂದಾಗಿ ಕಬ್ಬಿಗೆ ನೀರು ಸಾಕಷ್ಟು ಪೂರೈಕೆಯಾಗಿದ್ದು, ಬೆಳೆ ಪೊಗರುದಸ್ತಾಗಿಯೇ ಬೆಳೆದು ನಿಂತಿದ್ದು, ಈಗಾಗಲೇ ಆರೇಳು ಗಣಿಕೆ ಕಟ್ಟಿದ್ದು, ಇನ್ನೆರಡು ತಿಂಗಳಾದರೆ ಕಬ್ಬು ಬೆಳೆಗಾರರಿಗೆ ಶೇ.70ರಷ್ಟು ಬೆಳೆ ಕೈ ಸೇರಿದಂತೆಯೇ. ಇಂತಿಪ್ಪ ಸ್ಥಿತಿಯಲ್ಲಿ ಇದೀಗ ಕಾಡುಮಿಕ ಅಥವಾ ಕಾಡುಹಂದಿಗಳ ಕಾಟ ಶುರುವಾಗಿದೆ.

ಜಿಲ್ಲೆಯಲ್ಲಿ 2020-21ರಲ್ಲಿ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ವರ್ಷದಿಂದ ವರ್ಷಕ್ಕೆ ಬೆಳೆಯ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದೆ. ಈ ವರ್ಷ ಕಳೆದ ವರ್ಷಕ್ಕಿಂತ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಹೆಚ್ಚುವರಿಯಾಗಿ ಬೆಳೆಯಾಗುತ್ತಿದ್ದು,ಗೊಬ್ಬರ, ಕಳೆ, ಕಳೆನಾಶಕಗಳನ್ನು ಬಳಸಿ ಎದೆಎತ್ತರಕ್ಕೆ ಕಬ್ಬಿನ ಬೆಳೆ ಕಂಗೊಳಿಸುತ್ತಿದ್ದು, ಇದೀಗ ಕರಮಂಟನ ಕರಾಳ ದೃಷ್ಠಿಗೆ ತೋಟಕ್ಕೆ ತೋಟಗಳೇ ನಾಶವಾಗುತ್ತಿವೆ.

ಏಲ್ಲೆಲ್ಲಿ ಹಾನಿ?: ಕಬ್ಬಿನ ತೋಟಗಳಿಗೆ ಮಿಕ ಅಂದರೆ ಕಾಡುಹಂದಿಗಳು ರಾತ್ರೋರಾತ್ರಿ ನುಗ್ಗಿ ಮೂರ್‍ನಾಲ್ಕು ಗನ್ನಿನ ಕಬ್ಬನ್ನು ಎತ್ತಂದರತ್ತ ತಿಂದು ಹಾಕಿ ಬಿಡುತ್ತವೆ. ಮೂರು ಗಳ ಕಬ್ಬ ತಿನ್ನುವ ಹೊತ್ತಿಗೆ ಹತ್ತು ಗಳ ಕಬ್ಬಿಗೆ ಇದು ಹಾನಿ ಮಾಡಿ ಬಿಡುತ್ತದೆ. ತುಳಿತ, ಕೋರೆಯಿಂದ ನೆಲದ ಇರಿತಕ್ಕೆ ಬೆಳೆ ಸಂಪೂರ್ಣ ನಾಶವಾಗಿ ಹೋಗುತ್ತದೆ. ಹತ್ತರಿಂದ ಹನ್ನೆರಡು ಕಾಡುಹಂದಿಗಳು ಒಟ್ಟಿಗೆ ಸೇರಿ ತೋಟಗಳಿಗೆ ನುಗ್ಗುತ್ತಿದ್ದು, ಒಂದು ತೋಟಕ್ಕೆ ಹೊಕ್ಕರೆ ಒಂದೇ ರಾತ್ರಿಯಲ್ಲಿ ಗುಂಟೆಗಟ್ಟಲೇ ಬೆಳೆಗೆ ತೀವ್ರ ಹಾನಿ ಮಾಡಿ ಬಿಡುತ್ತವೆ. ಅಳ್ನಾವರ ತಾಲೂಕಿನ ಕಾಡಿಗೆ ಹೊಂದಿಕೊಂಡಿರುವ ಹೆಚ್ಚು ಕಡಿಮೆ ಕಡಬಗಟ್ಟಿ, ಅರವಟಗಿ, ಕುಂಬಾರಕೊಪ್ಪ, ಗೌಳಿದಡ್ಡಿ, ಡೋರಿ, ಬೆನಚಿ ಸುತ್ತಲಿನ ಹಳ್ಳಿಗಳು, ಧಾರವಾಡ ತಾಲೂಕಿನ ಮುಗದ, ಮಂಡಿಹಾಳ, ಕಲಕೇರಿ, ಹೊಲ್ತಿಕೋಟೆ, ವೀರಾಪೂರ, ರಾಮಾಪೂರ, ಕಲ್ಲಾಪೂರ, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ, ಜೋಡಳ್ಳಿ, ಬಸವನಕೊಪ್ಪ, ದೇವಿಕೊಪ್ಪ, ಹುಲಕೊಪ್ಪ, ಹಸರಂಬಿ ಸೇರಿಂದಂತೆ ಸುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹುಲುಸಾಗಿ ಬೆಳೆದ ತೋಟಗಳನ್ನೆ ಕಾಡುಹಂದಿ ಹಿಂಡುಗಳು ಹೊಕ್ಕು ತಿಂದು ಹಾನಿ ಮಾಡುತ್ತಿವೆ.

ಚಂದಗಡಕ್ಕೆ ಬೆಂಕಿರೋಗ :ಇನ್ನು ಈ ಮಧ್ಯೆ ಅತ್ಯಂತ ಹುಲುಸಾಗಿ ಬೆಳೆದು ರೈತರಿಗೆ ಉತ್ತಮ ಫಸಲು ನೀಡುವ ಚಂದಗಡ ತಳಿಯ ಕಬ್ಬಿಗೆ ಕಳೆದ ವರ್ಷದಂತೆ ಈ ವರ್ಷವೂ ಕೆಂಪುಚುಕ್ಕಿರೋಗ ಕಾಣಿಸಿಕೊಂಡಿದೆ. ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಅಭಿವೃದ್ಧಿ ಪಡೆಸಿರುವ ಈ ಕಬ್ಬು (92005) ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಬೆಳಗಾವಿ ಜಿಲ್ಲೆಯ ಉತ್ತರ ಭಾಗದ ತಾಲೂಕುಗಳ ಹವಾಗುಣ ಮತ್ತು ಭೂಮಿಗೆ ಹೇಳಿ ಮಾಡಿಸಿದ ಬೆಳೆ. ಆದರೆ, ಧಾರವಾಡ ಜಿಲ್ಲೆಯ ಮಣ್ಣು ಮತ್ತುಹವಾಗುಣಕ್ಕೆ ಇದು ಅಷ್ಟಾಗಿ ಹೊಂದಿಕೊಳ್ಳುತ್ತಿಲ್ಲ. ಇದರ ಪರಿಣಾಮವೇ ಇದೀಗ ಕೆಂಪುಚುಕ್ಕೆ ರೋಗಕಾಣಿಸಿಕೊಂಡಿದೆ. ಅತೀ ಹೆಚ್ಚಿನ ತೇವಾಂಶ ಮತ್ತು ಸತತಮಳೆ ಕಾಣಿಸಿಕೊಂಡರೆ ಈ ರೋಗ ಹತ್ತುವುದು ನಿಶ್ಚಿತ. ಇದರಿಂದ ಬರೊಬ್ಬರಿ ಶೇ.15ರಷ್ಟು ಪ್ರಮಾಣದಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಕೃಷಿ ವಿಜ್ಞಾನಿಗಳು. ಧಾರವಾಡ ಜಿಲ್ಲೆಯ ಅಂದಾಜು 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈ ವರ್ಷ ಚಂದಗಡ ಕಬ್ಬು ಬೆಳೆಯಲಾಗುತ್ತಿದೆ.

Advertisement

ಹಂಡೆಬಡಗನಾಥನ ಮೊರೆ : ಕಾಡು ಪ್ರಾಣಿಗಳಿಂದ ಉಂಟಾಗುವ ಬೆಳೆಹಾನಿ ತಡೆಯಲು ಈಗಲೂ ರೈತರು ಆಧುನಿಕ ವಿಧಾನಗಳಿಗಿಂತಲೂ ಸಾಂಪ್ರದಾಯಿಕಮತ್ತು ಜಾನಪದೀಯ ವಿಧಾನಗಳಿಗೆ ಮೊರೆಹೋಗುತ್ತಾರೆ. ಕರಮಂಟನ ಕಾಟ ತಡೆಗೆ ಧಾರವಾಡ ಜಿಲ್ಲೆಯ ಜನರು ಈಗಲೂ ಖಾನಾಪುರ ತಾಲೂಕಿನ ಹಂಡೆಬಡಗನಾಥ ದೇವಸ್ಥಾನದಲ್ಲಿಪೂಜಿಸಿ ಕೊಡುವ ಟೆಂಗಿನಕಾಯಿಗಳನ್ನು ತಂದು ಹೊಲದಲ್ಲಿ ಹುಗಿಯುತ್ತಾರೆ. ಟೆಂಗಿನಕಾಯಿಗೆ ಅಲ್ಲಿನ ಸ್ವಾಮೀಜಿಗಳುಬೂದಿಯೊಂದನ್ನು ಲೇಪಿಸಿ ಕೊಡುತ್ತಿದ್ದು,ಅದರ ವಾಸನೆಗೆ ಕಾಡುಹಂದಿಗಳು ಹೊಲದತ್ತ ಸುಳಿಯುವುದೇ ಇಲ್ಲ ಎನ್ನುವ ನಂಬಿಕೆ ರೈತರಲ್ಲಿ ಗಾಢವಾಗಿದೆ. ಹೀಗಾಗಿ ಅಮಾವಾಸ್ಯೆ ದಿನ ಹಂಡೆಬಡಗನಾಥನ ಸನ್ನಿಧಿಗೆ ಹೋಗಿ ಕಾಯಿ ತಂದು ರೈತರು ಹೊಲಗಳಲ್ಲಿ ಹುಗಿಯುತ್ತಿದ್ದಾರೆ.

ಪ್ರಾಣಿ-ಬೆಳೆ ಉಳಿಸಲು ಸಾಹಸ : ಕಾಡು ಪ್ರಾಣಿಗಳನ್ನು ಮೊದಲಿನಂತೆ ಸರಾಗವಾಗಿ ಬೇಟೆಯಾಡಿ ಕೊಂದು ಹಾಕಲು ಇದೀಗ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಹೀಗಾಗಿ ಬೆಳೆಯೂ ಉಳಿಯಬೇಕು, ಇತ್ತ ಪ್ರಾಣಿಗಳನ್ನು ಉಳಿಯಬೇಕು. ಇದಕ್ಕಾಗಿ ಅನೇಕ ಸೂತ್ರಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ರೈತರು. ವಿದ್ಯುತ್‌ ಪ್ರವಹಿಸುವ ತಂತಿಗಳ ನಿರ್ಮಾಣ, ರಾತ್ರಿಯಿಡಿ ಬೆಂಕಿಹಾಕಿಕೊಂಡು ಕಾಯುವುದು, ತೋಟದ ಸುತ್ತಲೂ ಬಟ್ಟೆ, ನೆಟ್‌ಗಳನ್ನು ಕಟ್ಟಿ ಬೆಳೆ ರಕ್ಷಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಆದರೆ ಎಷ್ಟೊ ಕಡೆಗಳಲ್ಲಿ ವಿದ್ಯುತ್‌ ತಂತಿಗೂ ಕಾಡುಹಂದಿಗಳು ಅಂಜುತ್ತಿಲ್ಲ.ಅದೇಗೋ ಪಾರಾಗಿ ತೋಟಕ್ಕೆ ನುಗ್ಗಿ ಹಾನಿ ಮಾಡುತ್ತಿರುವುದು ರೈತರಿಗೆ ತೊಂದರೆಯಾಗಿದೆ.

ಕಾಡು ಪ್ರಾಣಿಗಳಿಂದ ಉಂಟಾಗುವ ಬೆಳೆಹಾನಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ. ಸರ್ಕಾರ ನಿಗದಿ ಪಡೆಸಿದ ದರಪಟ್ಟಿಗೆ ಅನುಗುಣವಾಗಿ ಅರಣ್ಯ ಅಧಿಕಾರಿಗಳೇ ಸ್ಥಳ ಪರಿಶೀಲನೆ ನಡೆಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ.- ಎಸ್‌.ಜಿ. ಉಪ್ಪಾರ, ಆರ್‌ಎಫ್‌ಒ, ಕಲಕೇರಿ ರೇಂಜ್‌, ಧಾರವಾಡ ಜಿಲ್ಲೆ

ಪ್ರತಿ ವರ್ಷವೂ ಕಬ್ಬು, ಭತ್ತಕ್ಕೆ ಕರಮಂಟನ ಕಾಟ ಇದ್ದಿದ್ದೆ. ಇವುಗಳನ್ನು ಕೊಂದಾದರೂ ಬೆಳೆ ರಕ್ಷಣೆ ಮಾಡುವ ಅನಿವಾರ್ಯತೆ ರೈತರಿಗೆ ಬಂದಿದೆ. ಹೀಗಾಗಿಕೂಡಲೇ ಅರಣ್ಯ ಇಲಾಖೆ ಈ ಬಗ್ಗೆ ಲಕ್ಷéವಹಿಸಿ ಬೆಳೆ ರಕ್ಷಣೆಗೆ ಕ್ರಮ ವಹಿಸಬೇಕು.ಶಿವಾಜಿ ಕುರವನಕೊಪ್ಪ, ದಾಸ್ತಿಕೊಪ್ಪ ರೈತ

 

ಡಾ| ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next