Advertisement
ಚಿತ್ತಾಪುರ ತಾಲೂಕಿನ ಗುಡ್ಡಗಾಡು ಪ್ರದೇಶಗಳಲ್ಲೂ ಸೀತಾಫಲ ಹಣ್ಣಿನ ಕೃಷಿ ಸಾಗಿದ್ದು, ಯಾಗಾಪುರ, ಶಿವನಗರ ತಾಂಡಾ, ಬೆಳಗೇರಾ, ದಂಡಗುಂಡ, ಅಣ್ಣಿಕೇರಾ ಹಾಗೂ ಲಾಡ್ಲಾಪುರ ಗ್ರಾಮಗಳಲ್ಲಿ ಈ ಹಣ್ಣುಗಳು ಅರಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಗುಡ್ಡ ಬೆಟ್ಟಗಳಿಂದ ಕೂಡಿರುವ ಈ ಅರಣ್ಯ ಪರಿಸರದಲ್ಲಿ ಸೀತಾಫಲದ ಸಾವಿರಾರು ಗಿಡಗಳನ್ನು ಕಾಣಬಹುದಾಗಿದೆ. ಕಲ್ಲು ಬಂಡೆಗಳ ಕಾವಲಿನಲ್ಲಿ ಕಾಲು ದಾರಿ ಸೀಳಿ ಸಾಗಿದರೆ ಸಿಹಿಯಾದ ಹಣ್ಣುಗಳು ನಿಮ್ಮ ಕೈಗಳಿಗೆ ತಾಕುತ್ತವೆ. ಗುಡ್ಡಗಳೇ ಇಲ್ಲಿ ಸಿಹಿ ಹಂಚಲು ಸಾಲುಗಟ್ಟಿ ನಿಂತಿವೆಯಾ ಎಂಬ ಭಾವ ಮೂಡುತ್ತದೆ.
Related Articles
ಪ್ರತಿಯೊಂದು ಹಣ್ಣು ಮತ್ತು ಸಸ್ಯ ಪ್ರಬೇಧಗಳಲ್ಲಿ ಔಷಧೀಯ ಗುಣವಿರುತ್ತದೆ. ಅಂತೆಯೇ ಈ ಸೀತಫಲವೂ ವಿಶೇಷ ಔಷಧೀಯ ಗುಣ ಹೊಂದಿದೆ. ಇದರ ತೊಗಟೆ ಜಜ್ಜಿ ಬಿಸಿ ನೀರಿನಲ್ಲಿ ಬತ್ತಿಸಿ ಜೇನು ತುಪ್ಪದೊಂದಿಗೆ ಸೇವಿಸಿದರೆ ಜ್ವರ, ಕೆಮ್ಮು, ಉಬ್ಬಸ ಗುಣವಾಗುತ್ತದೆ ಎನ್ನಲಾಗಿದೆ. ಸಿತಾಫಲದ ಎಲೆಗಳನ್ನು ನುಣ್ಣಗೆ ಅರೆದು ಹುಣ್ಣು, ಗಾಯಗಳು, ಕುರು, ಗಡ್ಡೆ (ಗ್ರಂಥಿ)ಗಳಿಗೆ ಹಚ್ಚಿದರೆ ವಾಸಿಯಾಗುತ್ತವೆ. ಪಚನಕ್ರೀಯೆ ಹೆಚ್ಚಿಸಲು ಈ ಹಣ್ಣು ಉಪಕಾರಿಯಾಗಿದೆ. ಇದರ ಬೀಜ ಮತ್ತು ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿವೆ. ಅತ್ಯಂತ ರುಚಿಯಾದ ಮತ್ತು ಆರೋಗ್ಯಕರವಾದ ಈ ಹಣ್ಣು ಅಡಿಯಿಂದ ಮುಡಿಯವರೆಗೂ ಯಾವೂದೇ ಸಮಸ್ಯೆಯಿದ್ದರೂ ಸೀತಾಫಲ ಅದನ್ನು ಹೋಗಲಾಡಿಸುತ್ತದೆ. ಶೇ.70 ರಷ್ಟು ತೇವಾಂಶವನ್ನು ಹೊಂದಿರುವ ಹೈಡ್ರೇಟಿಂಗ್ ಹಣ್ಣುಗಳಾಗಿದ್ದು, 100 ಗ್ರಾಂ. ಸೀತಾಫಲದಲ್ಲಿ 80-100 ಕ್ಯಾಲೊರಿ ಪೌಷ್ಠಿಕಾಂಶ ಇರುತ್ತದೆ. ಪ್ರೋಟೀನ್, ಕೊಬ್ಬು ಮತ್ತು ಕಬ್ಬಿಣದ ಪ್ರಮಾಣವು ಹೆಚ್ಚಿದೆ ಎಂಬುದು ಆಯೂರ್ವೇದ ವೈದ್ಯರ ಅಭಿಪ್ರಾಯವಾಗಿದೆ.
Advertisement
– ಮಡಿವಾಳಪ್ಪ ಹೇರೂರ