Advertisement
ಡ್ಯಾಂ ನಿರ್ಮಾಣದ ಬಳಿಕ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನೀರು ಸಂಗ್ರಹ ಮಾಡಲಾಗಿದೆ. ಕಳೆದ ವರ್ಷ 5 ಮೀ. ಮಟ್ಟಕ್ಕೆ ನೀರು ಸಂಗ್ರಹ ಮಾಡಲಾಗಿತ್ತು. ಪ್ರಸ್ತುತ ವರ್ಷ 6 ಮೀ.ಗೆ ಏರಿಸಿ ಅದನ್ನು ಪ್ರಾಯೋಗಿಕ ವ್ಯವಸ್ಥೆ ಎಂದು ಕಾರ್ಪೊರೇಶನ್ ಎಂಜಿನಿಯರ್‌ಗಳು ತಿಳಿಸಿದ್ದರು. ಪ್ರಸ್ತುತ ವರ್ಷದಲ್ಲಿ ವಾರದ ಹಿಂದೆ ನದಿ ನೀರಿನ ಮಟ್ಟವು 5.70 ಮೀ. ಇಳಿದಿತ್ತು. ಇದರ ಬಳಿಕ 2 ಮಳೆ ಚೆನ್ನಾಗಿ ಸುರಿದ ಕಾರಣದಿಂದ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಸಹಕಾರಿ ಆಗಿತ್ತು. ಇದಲ್ಲದೆ ಶಂಭೂರು AMR ಡ್ಯಾಂನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ಅದರಿಂದ ಎರಡು ಸಲ ನೀರನ್ನು ಹರಿಯ ಬಿಡುವ ಮೂಲಕ ತುಂಬೆಯ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗಿದೆ.
ನೇತ್ರಾವತಿ ನದಿ ವ್ಯಾಪ್ತಿಯಲ್ಲಿ ಮೇ ಆರಂಭದಿಂದ 18ರ ತನಕ ಒಟ್ಟು ಆರು ಸಲ ಸಾಮಾನ್ಯ ಮಳೆಯಾಗಿದೆ. ಎರಡು ಸಲ ಉತ್ತಮ ಮಳೆಯಾಗಿದೆ. ಇದರಿಂದ ನದಿಯಲ್ಲಿ ನೀರಿನ ಮಟ್ಟ ಯಥಾವತ್ತಾಗಿ ಉಳಿದುಕೊಳ್ಳಲು ಸಾಧ್ಯವಾಗಿದೆ. ಕೃಷಿಕರು ನೀರನ್ನು ಎತ್ತಿ ಪ್ರಮುಖವಾಗಿ ತೋಟಗಾರಿಕೆಗೆ ಬಳಸುವುದರಿಂದ ಪುನಃ ಅಂತರ್ಜಲವಾಗಿ ನದಿಗೆ ಮರುಪೂರಣ ಆಗುವುದು. ಇದರಿಂದ ನದಿಯಲ್ಲಿ ನೀರೆತ್ತಿದಂತೆ ಮರುಪೂರಕ ಕ್ರಿಯೆಯು ಒಂದು ವರ್ತುಲದಂತೆ ನಡೆಯುವುದು. ಕಳೆದ ವರ್ಷ ಮಳೆಯೇ ಆಗಿರಲಿಲ್ಲ. ಆದರೂ ಕೊನೆಯ ಹಂತದಲ್ಲಿ ನದಿ ಮೇಲ್ಗಡೆಯ ಡ್ಯಾಂಗಳಿಂದ ನೀರನ್ನು ಬಳಸಿಕೊಂಡು ಕುಡಿಯುವ ನೀರಿನ ಕೊರತೆ ನೀಗಿಸಲಾಗಿತ್ತು.
ನೀರಿಗೆ ಕೊರತೆ ಆಗಿಲ್ಲ
ಕಳೆದ ವರ್ಷ ನೂತನ ತುಂಬೆ ಡ್ಯಾಂ ಪೂರ್ಣವಾಗಿದ್ದು, ನೀರಿನ ಮಟ್ಟವನ್ನು 5 ಮೀ.ನಲ್ಲಿ ನಿಲ್ಲಿಸಿಕೊಳ್ಳಲಾಗಿತ್ತು. ಆದರೆ ಮೇ ಅಂತ್ಯಕ್ಕೆ ಸ್ವಲ್ಪ ಮಟ್ಟಿಗೆ ನೀರಿನ ಕೊರತೆ ಎದುರಾಗಿತ್ತು. ಶಂಭೂರು, ನೀರಕಟ್ಟೆ, ಉಪ್ಪಿನಂಗಡಿ ಡ್ಯಾಂ ನೀರನ್ನು ಉಪಯೋಗಿಸಿ ಬೇಸಗೆಯಲ್ಲಿ ಮಂಗಳೂರಿಗೆ ನೀರಿನ ಕೊರತೆ ಆಗದಂತೆ ಕಾಯ್ದುಕೊಳ್ಳಲಾಗಿತ್ತು. ಪ್ರಸ್ತುತ ವರ್ಷದ ಆರಂಭದಲ್ಲಿಯೇ ತುಂಬೆ ಡ್ಯಾಂನಲ್ಲಿ 6 ಮೀ. ನೀರು ನಿಲುಗಡೆ ಮಾಡಲಾಗಿತ್ತು. ಇದರಿಂದ ನೀರಿಗೆ ಕೊರತೆ ಆಗಿಲ್ಲ. ನದಿಯ ಮೇಲ್ಗಡೆಯ ಎಲ್ಲ ಡ್ಯಾಂಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ.
Related Articles
ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ 8 ಮೀಟರ್ ತನಕವೂ ಅವಕಾಶವಿದೆ. ಆದರೆ ಅಪಾರ ಪ್ರಮಾಣದಲ್ಲಿ ಜಮೀನು ಮುಳುಗಡೆ ಆಗುವುದರಿಂದ 8 ಮೀಟರ್ ನೀರು ನಿಲುಗಡೆ ಸಾಧ್ಯತೆ ಕಡಿಮೆ ಇದೆ. ಪ್ರಸ್ತುತ ವರ್ಷದಲ್ಲಿ 6 ಮೀಟರ್ ನೀರು ನಿಲುಗಡೆ ಮಾಡಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಡ್ಯಾಂನಲ್ಲಿ ಇನ್ನಷ್ಟು ನೀರು ನಿಲುಗಡೆ ಮಾಡುವ ಅವಕಾಶ ಇದೆ. ಆದರೆ ಇದರಿಂದ ಜಮೀನು ಮುಳುಗಡೆ, ಪರಿಹಾರಕ್ಕೆ ದೊಡ್ಡ ಮೊತ್ತದ ಆರ್ಥಿಕ ಸಂಪನ್ಮೂಲ ಬೇಕಾಗುವ ಕಾರಣ 7 ಮೀಟರ್ ನೀರಿನ ಮಟ್ಟ ಎತ್ತರಿಸುವ ಪ್ರಸ್ತಾವವನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಕೈಬಿಡಲಾಗಿದೆ.
– ಭಾಸ್ಕರ ಮೊಯಿಲಿ, ಮೇಯರ್ ಮಂಗಳೂರು ಮಹಾನಗರಪಾಲಿಕೆ
Advertisement
— ರಾಜಾ ಬಂಟ್ವಾಳ