Advertisement

ವ್ಯರ್ಥವಾಗದಿರಲಿ ತ್ಯಾಗ

12:30 AM Feb 16, 2019 | |

ಜಮ್ಮು-ಕಾಶ್ಮೀರದಲ್ಲಿ ಜೈಶ್‌ ಉಗ್ರರ ಹೀನ ಕೃತ್ಯಕ್ಕೆ ನಮ್ಮ ಅನೇಕ ಸೈನಿಕರು ಬಲಿಯಾಗಿದ್ದಾರೆ. ಅದರಲ್ಲಿ ಬಹುತೇಕರು ಕೆಲವೇ ದಿನಗಳ ಹಿಂದಷ್ಟೇ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ತೆರಳಿದವರು. “ಬೇಗ ಬರುತ್ತೇನೆ’ ಎಂದು ನಗುನಗುತ್ತಾ ಕೈಬೀಸಿ ಹೋದವರು ಹೀಗೆ ಶವಪೆಟ್ಟಿಗೆಗಳಲ್ಲಿ ಹಿಂದಿರುಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ…ತಮ್ಮ ಪ್ರೀತಿಪಾತ್ರರೊಂದಿಗೆ ಕಟ್ಟಿಕೊಂಡ ಕನಸುಗಳೂ ಛಿದ್ರಗೊಂಡು ಈ ಕುಟುಂಬಗಳು ದಿಗ್ಭ್ರಾಂತವಾಗಿವೆ. ಆದರೆ ಈ ಅತೀವ ದುಃಖದ ಸಮಯದಲ್ಲೂ ಕುಟುಂಬಸ್ಥರು ತಮ್ಮ ಮನೆಯ ಮಗ ದೇಶಕ್ಕಾಗಿ ಪ್ರಾಣ ನೀಡಿದ್ದಾರೆ ಎಂದು ಗರ್ವ ಪಡುತ್ತಿದ್ದಾರೆ.. ಅದರ ಜತೆಯೇ, ಸೈನಿಕರ ತ್ಯಾಗ ವ್ಯರ್ಥವಾಗದಿರಲಿ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ…

Advertisement

ಅವರು ವಾಪಸ್‌ ಬಂದರಾ?
ಉಗ್ರರ ದಾಳಿಗೆ ಮೃತಪಟ್ಟ ಯೋಧರಲ್ಲಿ, ಬಸ್‌ನ ಚಾಲಕ 44 ವರ್ಷದ ಜೈಮಲ್‌ ಸಿಂಗ್‌ ಕೂಡ ಒಬ್ಬರು. ಪಂಜಾಬ್‌ನ ಮೊಗಾ ಪ್ರದೇಶದ ಜೈಮಲ್‌ 19 ವರ್ಷದವರಿದ್ದಾಗಲೇ ಸಿಆರ್‌ಪಿಎಫ್ ಸೇರಿದ್ದರಂತೆ. ಅವರ ಮರಣದ ಸುದ್ದಿ ಕೇಳಿ ಪತ್ನಿ ಸುಖೀjತ್‌ ಕೌರ್‌ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಜ್ಞೆ ಬಂದಾಗಲೆಲ್ಲ “ಅವರು ವಾಪಸ್‌ ಬಂದರಾ? ಅವರು ಬರ್ತಾರೆ’ ಎಂದು ಪದೇ ಪದೆ ಹೇಳುತ್ತಿದ್ದಾರಂತೆ. ಸುದ್ದಿ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲ ತಂಡೋಪತಂಡವಾಗಿ ವಾಹನಗಳನ್ನು ಮಾಡಿಕೊಂಡು ಜೈಮಲ್‌ರ  ಮನೆಗೆ ಭೇಟಿಕೊಟ್ಟು ಕುಟುಂಬಸ್ಥರನ್ನು ಸಂತೈಸುತ್ತಿದ್ದಾರೆ. ತಮ್ಮ ಮಗನ ಸಾವಿನ ದುಃಖದ ನಡುವೆಯೂ ತಂದೆ ಜಸ್ವಂತ್‌ ಸಿಂಗ್‌ ಅವರು, ” ಮಗನ ಬಲಿದಾನದ ಬಗ್ಗೆ ಹೆಮ್ಮೆಯಿದೆ. ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲೇಬೇಕು. ಹಾಗಾದಾಗ ಮಾತ್ರ ಮತ್ಯಾವ ಕುಟುಂಬವೂ ತಮ್ಮ ಮಕ್ಕಳನ್ನು ಹೀಗೆ ಕಳೆದುಕೊಳ್ಳಲಾರದು’ ಎನ್ನುತ್ತಾರೆ. ಜೈಮಲ್‌ ಸಿಂಗ್‌ರಿಗೆ 6 ವರ್ಷದ ಮಗನಿದ್ದಾನೆ. ಅವರು ಕಾಶ್ಮೀರದಿಂದ ಮನೆಗೆ ಫೋನ್‌ ಮಾಡಿದಾಗಲೆಲ್ಲ ಹೆಚ್ಚಾಗಿ ಮಗನೊಂದಿಗೇ ಹರಟುತ್ತಿದ್ದರಂತೆ. ಅಪ್ಪನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ಬಾಲಕ, ಸದ್ಯಕ್ಕೆ ಅಮ್ಮನ ಜೊತೆಯಲ್ಲಿ ಆಸ್ಪತ್ರೆಯಲ್ಲಿದ್ದಾನಂತೆ. 

ನಾ ಸತ್ತರೆ ಕಣ್ಣೀರಿಡಬೇಡಿ….
ಉತ್ತರ ಪ್ರದೇಶದ ಕನೌಜ್‌ನ‌ ಸೈನಿಕ ಪ್ರದೀಪ್‌ ಸಿಂಗ್‌ ಯಾದವ್‌ರ ಮರಣದ ಸುದ್ದಿ ಕೇಳಿ ಅವರ ಪತ್ನಿ ನೀರಜಾ ಅತ್ತೂ ಅತ್ತೂ ಹಾಸಿಗೆ ಹಿಡಿದಿದ್ದಾರೆ. ಆದರೆ ಇದೇ ವೇಳೆಯಲ್ಲಿ ಅವರ ಇಬ್ಬರು ಪುತ್ರಿಯರಾದ ಸುಪ್ರಿಯಾ ಮತ್ತು ಸೋನಾ ಮಾತ್ರ ಅತೀವ ನೋವಿನ ನಡುವೆಯೂ ತಮ್ಮ ಅಮ್ಮನಿಗೆ ಸಮಾಧಾನ ಮಾಡುತ್ತಿದ್ದಾರೆ. ದೇಶಕ್ಕಾಗಿ ಪ್ರಾಣಬಿಟ್ಟ ಅಪ್ಪನ ಬಗ್ಗೆ ನಮಗೆ ಗರ್ವವಿದೆ ಎನ್ನುತ್ತಾರೆ ಈ ಹೆಣ್ಣುಮಕ್ಕಳು. “ಒಂದು ವೇಳೆ ನಾನು ಮೃತಪಟ್ಟರೆ, ಕಣ್ಣೀರು ಹಾಕಬೇಡಿ, ಗರ್ವಪಡಿ’ ಎಂದು ಪ್ರದೀಪ್‌ ತಮ್ಮ ಪುತ್ರಿಯರಿಗೆ ಹೇಳುತ್ತಿದ್ದರಂತೆ.

ಮದುವೆ ನಿಶ್ಚಯ; ತುಂಡಾದ ಕೈಯಲ್ಲಿತ್ತು ರಿಂಗ್‌
ಪಂಜಾಬ್‌ನ ರೌಲಿ ಗ್ರಾಮದ ಕುಲ್ವಿಂದರ್‌ ಸಿಂಗ್‌ ಉಗ್ರರ ದಾಳಿಯಲ್ಲಿ ಮೃತಪಟ್ಟ ಸುದ್ದಿ ಕೇಳಿ ಅವರ ಪೋಷಕರು ತೀವ್ರ ಆಘಾತಗೊಂಡಿದ್ದಾರೆ. ಇದ್ದ ಒಬ್ಬ ಮಗನನ್ನೂ ಕಳೆದುಕೊಂಡುಬಿಟ್ಟೆವು ಎಂದು ಕುಲ್ವಿಂದರ್‌ರ ತಾಯಿ ಅತ್ತರೆ, “ಈ ವರ್ಷದ ನವೆಂಬರ್‌ ತಿಂಗಳಲ್ಲಿ ಅವನ ಮದುವೆ ನಿಶ್ಚಯ ವಾಗಿತ್ತು. ಸನಿಹದ ಲೋಧಿಪುರ ಗ್ರಾಮದ ಹುಡುಗಿ ಅವನಿಗೆ ಇಷ್ಟವಾಗಿದ್ಧಳು’ ಎಂದು ಬಿಕ್ಕುತ್ತಾರೆ ಕುಲ್ವಿಂದರ್‌ರ ತಂದೆ ದರ್ಶನ್‌ ಸಿಂಗ್‌. ಅತ್ಯಂತ ವೇದನೆಯ ಸಂಗತಿಯೆಂದರೆ, ಬಾಂಬ್‌ ದಾಳಿಯಲ್ಲಿ ಕುಲ್ವಿಂದರ್‌ ಅವರ ದೇಹ ಛಿದ್ರವಾಗಿ ಕೇವಲ ಅವರ ಕೈಯಷ್ಟೇ ಉಳಿದಿದೆ. ಆ ಕೈ ಬೆರಳುಗಳಿಗೆ ಎಂಗೇಜೆ¾ಂಟ್‌ ರಿಂಗ್‌ ಇದ್ದದ್ದನ್ನು ನೋಡಿ ಇದು ಕುಲ್ವಿಂದರ್‌ರ ದೇಹ ಎಂದು ಸೈನಿಕರು ತಕ್ಷಣ ಗುರುತಿಸಿದ್ದಾರೆ.

ಹೊಸ ಮನೆ ಕಟ್ಟಿಸುತ್ತೇನೆ ಎಂದಿದ್ದ
ಸೈನಿಕ ರಾಮ್‌ ವಕೀಲ್‌ ರಜೆಯ ಮೇಲೆ ತಮ್ಮ ಹುಟ್ಟೂರು ವಿನಾಯ ಕಪುರಕ್ಕೆ ಬಂದು, ಫೆಬ್ರವರಿ 10ಕ್ಕೆ ಹಿಂದಿರುಗಿದ್ದರು. ಹೊರಡುವ ಮುನ್ನ ಪತ್ನಿ ಗೀತಾಗೆ ಆದಷ್ಟು ಬೇಗನೇ ಬರುತ್ತೇನೆ, ಸ್ವಂತ ಮನೆ ಕಟ್ಟಿಸಲು ಆರಂಭಿ ಸೋಣ ಎಂದು ಭರವಸೆ ನೀಡಿದ್ದರಂತೆ. ಸದ್ಯಕ್ಕೆ ರಾಮ್‌ವಕೀಲರ ಮಡದಿ ಮತ್ತು  3 ಪುಟ್ಟಮಕ್ಕಳು ಅಜ್ಜ-ಅಜ್ಜಿಯ ಮನೆಯಲ್ಲಿ ವಾಸಿಸುತ್ತಾರೆ. ಈಗ ಮಕ್ಕಳು, ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ. 

Advertisement

ಅವನಿಗೆ ಮಗಳನ್ನು ಎತ್ತಿಕೊಳ್ಳಲಾಗಲೇ ಇಲ್ಲ
ರಾಜಸ್ಥಾನದ ಗೋವಿಂದಪುರದ ರೋಹಿ ತಾಶ್‌ ಲಾಂಬಾ ಅವರಿಗೆ ಈ ಬಾರಿ ರಜೆಯ ಮೇಲೆ ಊರಿಗೆ ಬರಲಾಗಿರಲಿಲ್ಲ. ದುಃಖದ ಸಂಗತಿ ಯೆಂದರೆ, ಡಿಸೆಂಬರ್‌ ತಿಂಗಳಲ್ಲಿ ಅವರಿಗೆ ಹೆಣ್ಣು ಮಗುವಾಗಿತ್ತು. “ಮಗಳನ್ನು ಒಮ್ಮೆಯೂ ಎತ್ತಿಕೊಳ್ಳುವ ಅವಕಾಶ ಅವನಿಗೆ ಸಿಗಲೇ ಇಲ್ಲ’ ಎಂದು ಅವರ ಸ್ನೇಹಿತನೊಬ್ಬ ಕಣ್ಣೀರಾಗುತ್ತಾನೆ.

ಖ್ಯಾತ ಗಾಯಕ, ದೇಶ ಸೇವಕ
ಹಿಮಾಚಲ ಪ್ರದೇಶದ ತಿಲಕ್‌ ರಾಜ್‌ ಉಗ್ರರ ದಾಳಿಗೆ ಮೃತಪಟ್ಟ ಸುದ್ದಿ ಕೇಳಿ ಕಾಂಗ್ರಾ ಜಿಲ್ಲೆಯ ಜನರೆಲ್ಲ ತೀವ್ರ ಆಘಾತ ಗೊಂಡಿದ್ದಾರೆ. ಜಿಲ್ಲೆಯ ಅತ್ಯುತ್ತಮ ಕಬಡ್ಡಿ ಆಟಗಾರನಾಗಿ ಗುರುತಿಸಿಕೊಂಡಿದ್ದ ತಿಲಕ್‌ ರಾಜ್‌, ತಮ್ಮ ಸುಮಧುರ ಕಂಠದ ಮೂಲಕವೂ ಬಹಳ ಅಭಿಮಾನಿಗಳನ್ನು ಹೊಂದಿದ್ದರು. ಊರಿಗೆ ಬಂದಾಗಲೆಲ್ಲ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದ ಅವರು, ಜಿಲ್ಲೆಯಲ್ಲಿದ್ದ ರೆಕಾರ್ಡಿಂಗ್‌ ಸ್ಟುಡಿಯೋಗೂ ಹೋಗಿ ಪ್ರತಿ ಬಾರಿಯೂ ಒಂದಲ್ಲ ಒಂದು ಹಾಡನ್ನು ರೆಕಾರ್ಡ್‌ ಮಾಡುತ್ತಿದ್ದರಂತೆ. ಅವರ ಅನೇಕ ಹಿಟ್‌ ಜನಪದ ಹಾಡುಗಳು ಕಾಂಗ್ರಾ ಜಿಲ್ಲೆಯ ಚಿಕ್ಕ ಹೋಟೆಲ್‌ಗ‌ಳಲ್ಲಿ, ಆಟೋಗಳಲ್ಲಿ, ಟ್ರಾÂಕ್ಟರ್‌ಗಳಲ್ಲಿ ನಿರಂತರ ಪ್ಲೇ ಆಗುತ್ತಲೇ ಇರುತ್ತವೆ. ತಿಲಕ್‌ ರಾಜ್‌ರ “ಮೇರಾ ಸಿದ್ದು ಬಡಾ ಶರಾಬಿ’ ಹಾಡಂತೂ ಬಹಳ ಫೇಮಸ್‌ ಹಾಡಂತೆ. ಡ್ನೂಟಿಯ ವೇಳೆ ಬಿಡುವಿನ ಸಮಯ ಸಿಕ್ಕಾಗಲೆಲ್ಲ ಹಾಡುಗಳನ್ನು ಬರೆಯುತ್ತಿದ್ದ ತಿಲಕ್‌ ಊರಿಗೆ ಬಂದು ರೆಕಾರ್ಡ್‌ ಮಾಡಿ ರಿಲೀಸ್‌ ಮಾಡಿಸುತ್ತಿದ್ದರಂತೆ. ಈ ಬಾರಿಯೂ ರಜೆಯ ಮೇಲೆ ಬಂದಾಗ ಒಂದು ಹಾಡು ರೆಕಾರ್ಡ್‌ ಮಾಡಲು ಬಯಸಿದ್ದರು ತಿಲಕ್‌. ಆದರೆ ಇದೇ ವೇಳೆಯಲ್ಲೇ ಅವರ ಪತ್ನಿಗೆ ಎರಡನೇ ಡೆಲಿವರಿ ಆಗಿತ್ತು. ಹಾಗಾಗಿ ಅವರು ಆಸ್ಪತ್ರೆಗೆ ಓಡಾಡಿದ್ದರು. ಅವರೀಗ ಪತ್ನಿ, ತಂದೆ-ತಾಯಿ, 2 ವರ್ಷದ ಮಗುವನ್ನಷ್ಟೇ ಅಲ್ಲದೆ, 15 ದಿನದ ಹಸುಗೂಸನ್ನೂ ಅಗಲಿದ್ದಾರೆ. ತಿಲಕ್‌ ವೀರಮರಣವಪ್ಪಿದ ಸುದ್ದಿ ಹರಡುತ್ತಿದ್ದಂತೆಯೇ ಕಾಂಗ್ರಾ ಜಿಲ್ಲೆಯಾದ್ಯಂತ ಅವರದ್ದೇ ಹಾಡುಗಳು ಎಲ್ಲೆಡೆಯೂ ಕೇಳಿಬರುತ್ತಿವೆ…

ಇನ್ನೊಂದು ಸರ್ಜಿಕಲ್‌ ಸ್ಟ್ರೈಕ್‌ನ ಅಗತ್ಯವಿದೆ
ಉತ್ತರ ಪ್ರದೇಶದ ಶಾಮಲಿ ಗ್ರಾಮದವರಾದ ಪ್ರದೀಪ್‌ ಕುಮಾರ್‌ ಅವರ ಮನೆ ಶೋಕದಲ್ಲಿ ಮುಳುಗಿದೆ. ಪ್ರದೀಪ್‌ ಅವರಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯಿದ್ದಾಳೆ. ಐಟಿಬಿಪಿಯಲ್ಲಿರುವ ಅವರ ಸಹೋದರ ಸಂದು ಅವರು  “ನನ್ನ ಅಣ್ಣ ಮತ್ತು ಇತರೆ ಸೈನಿಕ ಸಹೋದರರ ಬಲಿದಾನ ವ್ಯರ್ಥವಾಗಬಾರದು. ಮತ್ತೂಮ್ಮೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿರಿ’ ಎನ್ನುತ್ತಾ ಭಾವುಕರಾಗುತ್ತಾರೆ. 

ನಾನು ಬರುವಷ್ಟರಲ್ಲಿ ನೀನು ನಡೆಯುತ್ತೀ!
ಪಂಜಾಬ್‌ನ ಗಾಂದಿವಿಂಡ್‌ ಗ್ರಾಮದ ಸುಖ್‌ಜಿಂದರ್‌ ಸಿಂಗ್‌ ಅವರಿಗೆ ಮದುವೆಯಾಗಿ 7 ವರ್ಷಗಳಾದರೂ ಮಕ್ಕಳಾಗಿರಲಿಲ್ಲವಂತೆ, “ವಾಹೆಗುರುವಿನ ಕೃಪೆಯಿಂದ ಕೊನೆಗೂ ಅವನಿಗೆ ಮಗು ಹುಟ್ಟಿತು. ಈಗ ಅದಕ್ಕೆ 7 ತಿಂಗಳು’ ಎನ್ನುತ್ತಾರೆ ಸುಖ್‌ಜಿಂದರ್‌ರ ಸಹೋದರ ಗುರ್ಜಂತ್‌ ಸಿಂಗ್‌. ಸುಖ್‌ಜಿಂದರ್‌ರ ತಾಯಿ ಹರಭಜನ್‌ ಕೌರ್‌ಗೆ ಮಗನ ಸಾವಿನ ಸುದ್ದಿ ಕೇಳಿದಾಗಿನಿಂದ ಪದೇ ಪದೆ ಪ್ರಜ್ಞೆ ತಪ್ಪುತ್ತಿದೆಯಂತೆ. ಪ್ರಜ್ಞೆ ಬಂದಾಗಲೆಲ್ಲ ಪಕ್ಕದಲ್ಲೇ ಇಟ್ಟುಕೊಂಡ ಮಗನ ಫೋಟೋವನ್ನು ಎದೆಗೆ ಅವುಚಿಕೊಂಡು ಅಳುತ್ತಿದ್ದಾರಂತೆ. “ನನ್ನ ಮಗ ಅಮರನಾದ’ ಎಂದು ಕಣ್ಣೀರುಹಾಕುತ್ತಾರಂತೆ.  “”ಮೊದಲು ಅಣ್ಣನ ಸಾವಿನ ಸುದ್ದಿ ಕೇಳಿ ಅಮ್ಮ ಕುಸಿದು ಕುಳಿತಳು. ಆಮೇಲೆ ಚೇತರಿಸಿಕೊಂಡು ಭಗತ್‌ ಸಿಂಗ್‌, ರಾಜಗುರು ಮತ್ತು ಸುಖದೇವ್‌ರಂತೆ ನನ್ನ ಮಗನೂ ದೇಶಕ್ಕಾಗಿ ಪ್ರಾಣ ಅರ್ಪಿಸಿ ಅಮರನಾಗಿದ್ದಾನೆ ಎಂದು ಭಾವುಕಳಾದಳು’ ಎನ್ನುತ್ತಾರೆ ಸುಖ್‌ಜಿಂದರ್‌ರ ಸಹೋದರ. 
ಸುಖ್‌ಜಿಂದರ್‌ರ ವೃದ್ಧ ತಂದೆಯೂ ಮಗನ ಮರಣದ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದಾರೆ “ಈಗ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸೊಸೆಯನ್ನು ಹೇಗೆ ಸಂತೈಸುವುದೋ ತಿಳಿಯುತ್ತಿಲ್ಲ. ಅತ್ತೂ ಅತ್ತೂ ಏನಾದರೂ ಮಾಡಿಕೊಳ್ಳುತ್ತಾಳೆ ಎಂದು ನಮ್ಮ ಎದೆ ಒಡೆದಿದೆ. ಮೊನ್ನೆಯಷ್ಟೇ ಮಗ ಊರಿಗೆ ಬಂದಿದ್ದ. ಹೊರಡುವ ಮುನ್ನ ತನ್ನ ಮಗುವಿಗೆ ಪದೇ ಪದೆ ಮುತ್ತು ಕೊಟ್ಟು “ನಾನು ವಾಪಸ್‌ ಬರುವುದರೊಳಗೆ ನೀನು ನಡೆದಾಡುವುದನ್ನು ಕಲಿತಿರ್ತೀಯ’ ಎಂದು ಮಗುವಿಗೆ ಮತ್ತೂಮ್ಮೆ ಮುತ್ತಿಟ್ಟು ಹೊರಟುಬಿಟ್ಟ. ನನ್ನ ಮಗನ ಬಲಿದಾನ ವ್ಯರ್ಥವಾಗಬಾರದು, ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕು’ ಎಂದು ನಿಟ್ಟುಸಿರುಬಿಡುತ್ತಾರೆ ಸುಖ್‌ಜಿಂದರ್‌ರ ತಂದೆ.  ಸುಖಜಿಂದರ್‌ ವೀರಮರಣವಪ್ಪುವ ಹಿಂದಿನ ದಿನವಷ್ಟೇ ಸಹೋದರನಿಗೆ ಫೋನ್‌ ಮಾಡಿದ್ದರಂತೆ. “ನನ್ನ ಮಗು ಜಾಸ್ತಿ ಅಳ್ಳೋದಿಲ್ಲ ತಾನೆ? ಈ ಬಾರಿ ಅವನಿಗೆ ಸಾಕಷ್ಟು ಆಟಿಕೆ ಸಾಮಾನು ಕಳುಹಿಸುತ್ತೇನೆ ಅಂತ ಹೇಳಿದ್ದ ಅಣ್ಣ ‘ ಎಂದು ಕಣ್ಣೀರಾಗುತ್ತಾರೆ ಅವರ ಸಹೋದರ. 

ದುಃಖಕ್ಕೆ ದೂಡಿ ಹೋದ ಹಸನ್ಮುಖೀ
ಮಧ್ಯಪ್ರದೇಶದ ಕುದ್ವಾಲ್‌ ಗ್ರಾಮದ ಸಿಆರ್‌ಪಿಎಫ್ ಯೋಧ ಅಶ್ವಿ‌ನಿ ಕುಮಾರ್‌ ಅವರ ಮರಣ, ಗ್ರಾಮಸ್ಥರನ್ನು ದುಃಖದ ಮಡುವಿಗೆ ತಳ್ಳಿದೆ. 30 ವರ್ಷದ ಅಶ್ವಿ‌ನಿ ಕುಮಾರ್‌ ಅವರನ್ನು  ಊರಿನ ಜನರೆಲ್ಲ  ಪ್ರೀತಿಯಿಂದ “ಹಸನ್ಮುಖ್‌’ ಎಂದೇ ಕರೆಯುತ್ತಿದ್ದರಂತೆ. ಏಕೆಂದರೆ ಸದಾ ನಗುನಗುತ್ತಾ ಎಲ್ಲರನ್ನೂ ಮಾತನಾಡಿಸುತ್ತಿದ್ದರಂತೆ ಅವರು. “ಅಶ್ವಿ‌ನಿ ಕುಮಾರ್‌ ಅವರ ಹೆಸರು ಕೇಳಿದಾಕ್ಷಣ ನಮಗೆ ಅವರ ನಗು ಮುಖವೇ ನೆನಪಾಗುತ್ತದೆ. ಊರಿಗೆ ಬಂದಾಗಲೆಲ್ಲ ಇಲ್ಲಿನ ಯುವಕರೊಂದಿಗೆ ಮಾತನಾಡುತ್ತಿದ್ದರು. ನೀವೆಲ್ಲ ಸೇನೆ ಸೇರಿ ಎಂದು ನಮಗೆಲ್ಲ ಸಲಹೆ ಕೊಡುತ್ತಿದ್ದರು’ ಎನ್ನುತ್ತಾರೆ ಕುದ್ವಾಲ್‌ನ ಯುವಕ ರೊಬ್ಬರು. ಗ್ರಾಮಸ್ಥರಷ್ಟೇ ಅಲ್ಲದೆ, ಜಿಲ್ಲೆಯಾದ್ಯಂತದ ಜನರೀಗ ಕುದ್ವಾಲ ಗ್ರಾಮಕ್ಕೆ ಬಂದು ಅಶ್ವಿ‌ನಿಯವರ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ.  ಅಶ್ವಿ‌ನಿ ಕುಮಾರ್‌ ವೀರಮರಣವನ್ನಪ್ಪಿದ ಕುದ್ವಾಲ ಗ್ರಾಮದ ಮೂರನೇ ಸೈನಿಕರು. ಈ ಹಿಂದೆ ರಾಜೇಂದ್ರ ಉಪಾಧ್ಯಾಯ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಮತ್ತು ರಾಮೇಶ್ವರ್‌ ಪಟೇಲ್‌ ಎನ್ನುವವರು ಗಡಿನಿಯಂತ್ರಣ ರೇಖೆಯ ಬಳಿ ಶತ್ರುಗಳ ಗುಂಡಿಗೆ ಬಲಿಯಾಗಿದ್ದರು. 

ಇನ್ನೊಬ್ಬ ಮಗನನ್ನೂ ಅರ್ಪಿಸಲು ಸಿದ್ಧ
ಬಿಹಾರ ಮೂಲದ ಸಿಆರ್‌ಪಿಎಫ್ ಯೋಧ ರತನ್‌ ಠಾಕೂರ್‌ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಅವರ ತಂದೆ “” ಒಬ್ಬ ಮಗನನ್ನು ನಾನು ಭಾರತ ಮಾತೆಯ ಸೇವೆಗೆ ಅರ್ಪಿಸಿದ್ದೇನೆ. ದೇಶ ಸೇವೆಗಾಗಿ ನನ್ನ ಇನ್ನೊಬ್ಬ ಮಗನನ್ನೂ° ಅರ್ಪಿಸಲು ನಾನು ಸಿದ್ಧನಿದ್ದೇನೆ. ಆದರೆ ಉಗ್ರ ಕೃತ್ಯಕ್ಕೆ ಭಾರತ ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು” ಎನ್ನುತ್ತಾ ಕಣ್ಣೀರಾದ ವಿಡಿಯೋ ಈಗ ವೈರಲ್‌ ಆಗಿದೆ. 

15 ಜನರನ್ನು ಹೊಡೆದುರುಳಿಸುತ್ತಿದ್ದ 
ವಾರಾಣಸಿಯ ತೋಕಾಪುರದ ನಿವಾಸಿ ರಮೇಶ್‌ ಯಾದವ್‌ ಕೂಡ ಪುಲ್ವಾಮಾ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ರಜೆ ಮುಗಿಸಿಕೊಂಡು ಕಾಶ್ಮೀರಕ್ಕೆ ತೆರಳುವ ಮುನ್ನ ರಮೇಶ್‌ “ಈ ಬಾರಿ ಹೋಳಿ ಹಬ್ಬಕ್ಕೆ ವಾಪಸ್‌ ಬರುತ್ತೇನೆ.’ ಎಂದು ತಮ್ಮ ಸಹೋದರಿಗೆ ಹೇಳಿದ್ದರಂತೆ. ಆದರೆ ಅಣ್ಣ ಸುಳ್ಳು ಹೇಳಿದ ಎಂದು ಕಣ್ಣೀರಾಗುತ್ತಾರೆ ಅವರ ಸಹೋದರಿ. ರಮೇಶ್‌ ಯಾದವ್‌ರ ತಂದೆ ಶ್ಯಾಮ ನಾರಾಯಣ್‌ ಅವರೂ ದುಃಖೀಸುತ್ತಲೇ ಹೇಳುತ್ತಾರೆ- “ನನ್ನ ಮಗನನ್ನು ಈ ದೇಶದ್ರೋಹಿಗಳು ವಂಚಿಸಿ ಕೊಂದಿದ್ದಾರೆ. ಅವರೇನಾದರೂ ಅವನೆದುರಿಗೆ ಬಂದಿದ್ದರೆಂದರೆ 15 ಉಗ್ರರಾದರೂ ಅವನಿಗೆ ಕಡಿಮೆಯೇ ಆಗುತ್ತಿತ್ತು. ಎಲ್ಲರನ್ನೂ ಹೊಡೆದುರುಳಿಸುತ್ತಿದ್ದ’

ಕ್ಯಾನ್ಸರ್‌ ಪೀಡಿತ ಅಮ್ಮನ ಒಡೆದ ಕನಸು
ಉತ್ತರಪ್ರದೇಶದ ಬಹಾದುರಪುರ ಗ್ರಾಮದ ನಿವಾಸಿ ಅವಧೇಶ್‌ ಯಾದವ್‌ ಇತ್ತೀಚೆಗಷ್ಟೇ ರಜೆ ಮುಗಿಸಿ ಕಾಶ್ಮೀರಕ್ಕೆ ತೆರಳಿದ್ದರು. ಅವರಿಗೆ ಎರಡು ವರ್ಷದ ಮಗುವಿದೆ. ಅವರ ತಾಯಿ ಕೆಲವು ತಿಂಗಳಿಂದ ಕ್ಯಾನ್ಸರ್‌ಗೆ ಗುರಿಯಾಗಿದ್ದಾರೆ. “ಎಲ್ಲವೂ ಸರಿಹೋಗುತ್ತದಮ್ಮ, ನಾವೆಲ್ಲ ನಿನ್ನ ಜೊತೆಗೆ ಇದ್ದೀವಲ್ಲ. ನೀನು ಟೈಮ್‌ ಟು ಟೈಮ್‌ ಔಷಧ ತೊಗೋ. ಎಲ್ಲಾ ಸರಿಹೋಗುತ್ತೆ’ ಎಂದು ತಮ್ಮ ತಾಯಿಗೆ ಸಮಾಧಾನ ಮಾಡಿ ಹೋಗಿದ್ದರಂತೆ ಅವಧೇಶ್‌. ಮಗನ ಸಾವಿನ ಸುದ್ದಿ ಕೇಳಿ, ನಾನಾದರೂ ಮೊದಲು ಸಾಯಬಾರದಿತ್ತೇ ಎಂದು ಅವಧೇಶ್‌ರ ಅಮ್ಮ ದುಃಖೀಸುತ್ತಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next