“ಸಂಕಷ್ಟಕರ ಗಣಪತಿ’ ಚಿತ್ರತಂಡದವರು ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಯಶಸ್ವಿಯಾಗಿ ಚಿತ್ರ ಪ್ರದರ್ಶನವಾಗುತ್ತಿರುವುದು. ಚಿತ್ರತಂಡದವರು ಹೇಳುವುದನ್ನು ನಂಬುವುದಾದರೆ, ವಾರದ ದಿನಗಳಲ್ಲಿ ಚಿತ್ರಮಂದಿರಗಳು ಶೇ 60ರಷ್ಟು ತುಂಬುತ್ತಿದ್ದರೆ, ವಾರಂತ್ಯಗಳಲ್ಲಿ ಫುಲ್ ಆಗುತ್ತಿದೆಯಂತೆ. ಇದೇ ರೇಂಜಿನಲ್ಲಿ ಚಿತ್ರ ಓಡಿದರೆ, ಮೂರನೆಯ ವಾರ ಮುಗಿಯುವುದರೊಳಗೆ, ಚಿತ್ರತಂಡದವರು ಹಾಕಿದ ದುಡ್ಡು ವಾಪಸ್ಸು ಬಂದಂತಾಗುತ್ತದೆ.
ಈ ಕುರಿತು ಮಾತನಾಡುವ ನಿರ್ದೇಶಕ ಅರ್ಜುನ್ ಕುಮಾರ್. “ಸದ್ಯಕ್ಕೆ ಎ ಸೆಂಟರ್‌ಗಳಲ್ಲಿ ಚಿತ್ರ ಬಿಡುಗಡೆ ಮಾಡಿದ್ದೇವೆ. ಕ್ರಮೇಣ ಬಿ ಮತ್ತು ಸಿ ಕೇಂದ್ರಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಇದೆ. ಶುಕ್ರವಾರದಿಂದ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು 19ರಂದು ಆಸ್ಟ್ರೇಲಿಯಾದ ಸಿಡ್ನಿ ಮತ್ತು ಮೆಲ್ಬೋರ್ನ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅದೇ ವಾರ ಅಥವಾ ಅದರ ಮುಂದಿನವಾರ ಅಮೇರಿಕಾ ಮತ್ತು ಕೆನೆಡಾಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡುವ ಆಸೆಯೂ ಇದೆ. ಈಗಾಗಲೇ ಕೆಲವು ಮಲ್ಟಿಪ್ಲೆಕ್ಸ್‌ಗಳ ಜೊತೆಗೆ ಇದೇ ವಿಷಯವಾಗಿ ಮಾತುಕತೆ ನಡೆದಿದೆ. ಸದ್ಯದಲ್ಲೇ ಸ್ಪಷ್ಟವಾಗಲಿದೆ’ ಎನ್ನುತ್ತಾರೆ ಅರ್ಜುನ್. ಇನ್ನು ಲಿಖಿತ್ ಸಹ ಖುಷಿಯಾಗಿದ್ದಾರೆ. ಇದುವರೆಗೂ ಅವರು ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಆ ಚಿತ್ರಗಳಲ್ಲಿ ಬೇರೆ ಹೀರೋಗಳು ಸಹ ಇದ್ದರು.
ಇದೇ ಮೊದಲ ಬಾರಿಗೆ solo ಹೀರೋ ಆಗಿ ಅವರು ಕಾಣಿಸಿಕೊಂಡಿದ್ದು, ಆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದು ಖುಷಿ ತಂದಿದೆ. “ಇದೊಂದು ಬೇರೆ ತರಹದ ಚಿತ್ರ. ಹಾಗಾಗಿ ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ ಕಾಡುತಿತ್ತು. ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆಗಳು ಬರುವುದರ ಜೊತೆಗೆ, ಚಿತ್ರವನ್ನು ನೋಡುವವರ ಸಂಖ್ಯೆ ಸಹ ಹೆಚ್ಚಾಗಿದೆ’ ಎನ್ನುತ್ತಾರೆ ಅವರು. ಚಿತ್ರ ಇಷ್ಟೊಂದು ದೂರ ಸಾಗಬಹುದು ಎಂದು ನಾಯಕಿ ಶ್ರುತಿ ಗೊರಾಡಿಯಾ ಯೋಚನೆಯನ್ನೇ ಮಾಡಿರಲಿಲ್ಲವಂತೆ.
“ಆ ಮಟ್ಟಿಗೆ ನನಗೆ ಇದೊಂದು ಹೆಮ್ಮೆಯ ವಿಷಯ. ಮೂಲತಃ ನಾನು ಗುಜರಾತಿಯಾದರೂ, ಇಲ್ಲಿ ಸಿಕ್ಕ ಪ್ರೋತ್ಸಾಹವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಚಿತ್ರದಲ್ಲಿ ನಟಿಸಿದ ನಂತರ ನನ್ನ ಭಾಷೆಯೂ ಇಂಪ್ರೂವ್ ಆಯ್ತು. ಇನ್ನು ಈ ಸಿನಿಮಾದಲ್ಲಿ ಅಭಿನಯಿಸಿದ ಮೇಲೆ, ಇನ್ನೊಂದು ಚಿತ್ರದಲ್ಲಿ ನಾಯಕಿಯಾಗುವ ಅವಕಾಶವೂ ಬಂದಿತು’ ಎಂದು ಹೇಳುವುದಕ್ಕೆ ಶ್ರುತಿ ಮರೆಯುವುದಿಲ್ಲ.