Advertisement

‘ಮ್ಯಾನ್ ವರ್ಸಸ್ ವೈಲ್ಡ್’ ಶೂಟಿಂಗ್ : ರಜನಿಗೆ ಗಾಯ? ಈಗ ಹೇಗಿದ್ದಾರೆ ಸ್ಟೈಲ್ ಕಿಂಗ್?

08:31 AM Jan 30, 2020 | Hari Prasad |

ಮೈಸೂರು: ಬ್ರಿಟಿಶ್ ಸಾಹಸಿಗ ಬೇರ್ ಗ್ರಿಲ್ ಜೊತೆ ಕರ್ನಾಟಕದ ಬಂಡೀಪುರದಲ್ಲಿರುವ ಹುಲಿ ಸಂರಕ್ಷಣಾ ಮತ್ತು ರಾಷ್ಟ್ರೀಯ ಉದ್ಯಾನದಲ್ಲಿ ‘ಮ್ಯಾನ್ ವರ್ಸ್ಸಸ್ ವೈಲ್ಡ್’ ಕಾರ್ಯಕ್ರಮದ ಶೂಟಿಂಗ್ ನಲ್ಲಿರುವ ಸೂಪರ್ ಸ್ಟಾರ್ ‘ತಲೈವಾ’ ರಜನಿಕಾಂತ್ ಅವರು ಶೂಟಿಂಗ್ ಸ್ಥಳದಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿ ಅವರ ಅಭಿಮಾನಿಗಳಲ್ಲಿ ಗಾಬರಿಯನ್ನುಂಟುಮಾಡಿತ್ತು.

Advertisement

ಆದರೆ ಈ ಸುದ್ದಿ ಪೂರ್ತಿ ನಿಜವಲ್ಲ ಎಂದು ಇದೀಗ ಸಾಬೀತಾಗಿದೆ. ಶೂಟಿಂಗ್ ಸಂದರ್ಭದಲ್ಲಿ ರಜನಿ ಅವರಿಗೆ ಸಣ್ಣ ಪ್ರಮಾಣದ ತರಚು ಗಾಯಗಳುಂಟಾಗಿವೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಮಾತ್ರವಲ್ಲದೇ ಬೇರ್ ಜೊತೆಗಿನ ಒಂದು ದಿನದ ಶೂಟಿಂಗ್ ಮುಗಿಸಿ ರಜನಿ ಇದೀಗ ಚೆನ್ನೈಗೆ ವಾಪಾಸಾಗಿದ್ದಾರೆ. ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಈ ಶೂಟಿಂಗ್ ನಡೆದಿದೆ.

ಬಳಿಕ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಜನಿ ಅವರು ತನ್ನ ಶೂಟಿಂಗ್ ಅನುಭವದ ಕುರಿತು ಹೇಳಿದ್ದಿಷ್ಟು, ‘ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ಅನ್ನು ಮುಗಿಸಿದ್ದೇನೆ. ಶೂಟಿಂಗ್ ನಡೆಯುತ್ತಿದ್ದ ಆ ಜಾಗದಲ್ಲಿ ಬಹಳಷ್ಟು ಮುಳ್ಳುಗಿಡಗಳಿದ್ದವು ಹಾಗಾಗಿ ನನಗೆ ಅಲ್ಲಲ್ಲಿ ಸ್ವಲ್ಪ ತರಚು ಗಾಯಗಳಾಗಿವೆಯಷ್ಟೇ, ಉಳಿದಂತೆ ಐ ಯಾಮ್ ಫೈನ್’ ಎಂದು ಹೇಳಿದರು.

ಇನ್ನು ಶೂಟಿಂಗ್ ಸಮಯದಲ್ಲಿ ರಜನಿಕಾಂತ್ ಅವರು ಗಾಯಗೊಂಡಿದ್ದಾರೆ ಎಂಬ ಸುದ್ದಿಯನ್ನು ಬಂಡೀಪುರ ರಕ್ಷಿತಾರಣ್ಯದ ಅಧಿಕಾರಿಗಳೂ ಸಹ ಅಲ್ಲಗಳೆದಿದ್ದಾರೆ. ‘ಸ್ಕ್ರೀನ್ ಪ್ಲೇಯಲ್ಲಿದ್ದಂತೆ ರಜನಿ ಅವರು ಬೀಳುವ ದೃಶ್ಯವಿತ್ತು. ಆ ರೀತಿಯಾಗಿ ರಜನಿ ಹಗ್ಗದಿಂದ ಕೆಳಗೆ ಜಾರುವ ಸಂದರ್ಭದಲ್ಲಿ ಅವರು ಸೂಚನೆಯಂತೇ ಬೀಳುತ್ತಾರೆ, ಆ ಸಂದರ್ಭದಲ್ಲಿ ಅಲ್ಲಿದ್ದವರೆಲ್ಲರೂ ಅವರಲ್ಲಿಗೆ ಧಾವಿಸುತ್ತಾರೆ. ಮತ್ತು ಇದೆಲ್ಲವೂ ಪೂರ್ವನಿರ್ಧಾರಿತವಾಗಿತ್ತು. ಆ ಬಳಿಕ ರಜನಿಕಾಂತ್ ಅವರು ಸಾವರಿಸಿಕೊಂಡು ಎದ್ದು ನಿಂತರು ಮತ್ತು ಶೂಟಿಂಗ್ ಮುಗಿಸಿ ಚೆನ್ನೈಗೆ ವಾಪಾಸು ತೆರಳಿದ್ದಾರೆ’ ಎಂದು ಸ್ಥಳದಲ್ಲಿ ಹಾಜರಿದ್ದ ಅರಣ್ಯಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶೂಟಿಂಗ್ ಗಾಗಿ ರಜನಿಕಾಂತ್ ಅವರು ಬಂಡೀಪುರಕ್ಕೆ ಆಗಮಿಸುತ್ತಿರುವ ವಿಡಿಯೋ ಒಂದನ್ನು ಎ.ಎನ್.ಐ. ಸುದ್ದಿಸಂಸ್ಥೆ ಮಂಗಳವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.

Advertisement

ವಿಶ್ವಾದ್ಯಂತ ಜನಪ್ರಿಯವಾಗಿರುವ ಈ ಸಾಹಸ ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ ಜೊತೆ ಕಾಣಿಸಿಕೊಳ್ಳುತ್ತಿರುವ ಎರಡನೇ ಭಾರತೀಯ ರಜನಿಕಾಂತ್ ಆಗಿದ್ದಾರೆ. ಇವರಿಗೂ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಮತ್ತು ಅವರ ಭಾಗದ ಚಿತ್ರೀಕರಣವನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಉತ್ತರಾಖಂಡ್ ನಲ್ಲಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರೀಕರಿಸಲಾಗಿತ್ತು. ಮತ್ತು ಈ ಕಾರ್ಯಕ್ರಮ ಆಗಸ್ಟ್ ತಿಂಗಳಲ್ಲಿ ಪ್ರಸಾರಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next