Advertisement
ಮಳೆಗಾಲ ಹತ್ತಿರವಾಗುತ್ತಿದೆ. ಮೂರು ತಿಂಗಳು ಕಳೆದರೆ ಮಳೆಗಾಲ ಬಂದಂತೆಯೇ,. ಪ್ರತಿ ಬಾರಿ ಮಳೆಗಾಲ ಬಂದಾಗಲೂ ಸಾತೊಡ್ಡಿ ಜಲಪಾತ ಧುತ್ತನೆ ನನಗೆ ನೆನಪಾಗುತ್ತದೆ. ನಮ್ಮ ಕುಟುಂಬ ಸಾತೊಡ್ಡಿಗೆ ಹೋಗಬೇಕೆಂದು ಹಲವು ತಿಂಗಳಿಂದ ಯೋಚಿಸುತ್ತಿತ್ತು. ಅದು ಈಡೇರಿದ್ದು ಕಳೆದ ಮಳೆಗಾಲದಲ್ಲಿ. ಅಂದರೆ ಜೋರು ಮಳೆ ಸುರಿಯುವ ಸಮಯದಲ್ಲಲ್ಲ. ಒಂದು ಜೋರು ಮಳೆ ಬಂದು, ತಣ್ಣಗಾದ ಸಂದರ್ಭ. ಅಂದರೆ ಆಗಸ್ಟ್ ಸಮಯದಲ್ಲಿ. ಮಂಗಳೂರಿನಿಂದ ಹೊರಟದ್ದು ಬೆಳಗ್ಗೆಯೇ. ಕುಮಟಾಕ್ಕೆ ಹೋಗುವ ದಾರಿಯಲ್ಲಿ ಮರವಂತೆ ಬಳಿ ಸಮುದ್ರ ತೀರಕ್ಕೆ ಮೊರೆ ಹೋದೆವು. ಜಾಸ್ತಿ ಹೊತ್ತು ಅಲ್ಲಿ ನಿಲ್ಲಲು ಮನಸ್ಸು ಬಿಡಲಿಲ್ಲ. ಸಾತೊಡ್ಡಿ ಜಲಪಾತ ಕೂಗಿ ಕರೆಯುತ್ತಿತ್ತು.
Related Articles
Advertisement
ಎಂಥಾ ನೀರು, ಎಂಥಾ ಸಂಭ್ರಮ. ಮಳೆ ಬಂದು ನಿಂತದ್ದರಿಂದ ಸುತ್ತಲೂ ಹಸಿರು ಕಣ್ಣಿಗೆ ರಾಚುತ್ತಿತ್ತು. ನೀರಿಗೆ ಇಳಿದರೆ ಎದ್ದು ಬರಲಿಕ್ಕೇ ಮನಸ್ಸಿರಲಿಲ್ಲ. ಅದು ಸುಮಾರು ಆರು ಧಾರೆಯಾಗಿ ಧುಮುಕುತ್ತದೆ. ಅದರಲ್ಲಿ ಎಲ್ಲ ಧಾರೆಯ ಕೆಳಗೆ ಹೋಗಿ ನಿಲ್ಲುವುದು ಸ್ವಲ್ಪ ಕಷ್ಟ. ಆದರೆ ಬಲ ಬದಿಯಲ್ಲಿ ಬರುವ ಧಾರೆಯ ಕೆಳಗೆ ನಿಲ್ಲಬಹುದು. ತುಸು ಪ್ರಯಾಸ ಪಡಬೇಕು. ಮಳೆಗಾಲವಾದ್ದರಿಂದ ಅಲ್ಲಿಗೆ ಸಾಗುವ ಕಲ್ಲುಗಳ ಮೇಲೆ ಪಾಚಿ ಇದ್ದು, ಕಾಲು ಜಾರುವ ಸಂಭವವೂ ಇದೆ. ಬಹಳ ಎಚ್ಚರದಿಂದ ಸಾಗಬೇಕು. ಹಾಗೆ ಸಾಗಿ ಧುಮುಕುವ ಧಾರೆಯ ಕೆಳಗೆ ನಿಂತರೆ ಸಿಗುವ ಖುಷಿಯೇ ಬೇರೆ. ನನ್ನ ಮಗನೂ ಸೇರಿದಂತೆ ಎಲ್ಲರೂ ಕಷ್ಟಪಟ್ಟು ಆ ಧಾರೆಯ ಕೆಳಗೆ ಹೋದೆವು. ಮಗನನ್ನು ಅಕ್ಷಯ ಹೊತ್ತುಕೊಂಡು ಬಂದ. ಸುಮಾರು ಎರಡು ಗಂಟೆ ಅಲ್ಲಿ ಕಳೆದರೂ ಸಾಕೆನಿಸಲಿಲ್ಲ. ಸಂಜೆಯಾಗತೊಡಗಿತ್ತು. ಅಕ್ಷಯನು ಜೇನುಕಲ್ಲು ಗುಡ್ಡದ ನೆನಪು ಮಾಡಿದ. ಗತ್ಯಂತರವಿಲ್ಲದೇ ಅಲ್ಲಿಂದ ಹೊರಟು ಜೇನುಕಲ್ಲುಗುಡ್ಡಕ್ಕೆ ಬಂದೆವು. ಅಲ್ಲಿ ಮೆಟ್ಟಿಲು ಹತ್ತುವಾಗಲೇ ಸುಸ್ತಾಗಿತ್ತು. ಇದು ಒಂದು ರೀತಿಯಲ್ಲಿ ಇಡೀ ಉತ್ತರ ಕನ್ನಡದ ಕಣಿವೆಗಳಿಗೆ ಕಣ್ಣು ಇದ್ದ ಹಾಗೆ. ಅಂದರೆ, ಇಲ್ಲಿ ನಿಂತರೆ ಇಡೀ ಉತ್ತರ ಕನ್ನಡದ ಕಾನನದ ವಿಹಂಗಮ ದೃಶ್ಯ ಲಭ್ಯವಾಗುತ್ತದೆ. ಇಲ್ಲಿಯ ಸೂರ್ಯಾಸ್ತದ ಸೊಬಗೂ ಚೆಂದ. ಅವೆಲ್ಲವನ್ನೂ ಮುಗಿಸಿ ವಾಪಸು ಅಕ್ಷಯನ ಮನೆಗೆ ವಾಪಸಾದೆವು. ರಾತ್ರಿಯೆಲ್ಲಾ ಕಾಲುಗಳು ಸೋತಿದ್ದವು. ಬೆಳಗ್ಗೆ ಏಳುವಾಗ ಸುಂದರವಾದ ಕನಸಿನ ಲೋಕದಿಂದ ಬಂದಂತೆ ಅನಿಸುತ್ತಿತ್ತು. ರೂಟ್ ಮ್ಯಾಪ್
– ಮಂಗಳೂರಿನಿಂದ ಸಾತೊಡ್ಡಿಗೆ ದೂರ ಸುಮಾರು 325 ಕಿ.ಮೀ.
– ಸ್ವಂತ ವಾಹನದಲ್ಲಾದರೆ ತಗಲುವ ಅವಧಿ ಸುಮಾರು 6 ಗಂಟೆ
– ಯಲ್ಲಾಪುರ ಸಮೀಪ ದಾರಿ ಮಧ್ಯೆ ಜೇನುಕಲ್ಲು ಗುಡ್ಡವೂ ಲಭ್ಯ
– ಶಿರಸಿ ಯಲ್ಲಾಪುರ ಮಧ್ಯೆ ಬರುವಂಥ ತಾಣ – ಸುಧಾ, ಮಂಗಳೂರು