Advertisement

ನಿರಂತರ ಅಪಘಾತ; ಇನ್ನೂ ಸಾಧ್ಯವಾಗದ ಪರ್ಯಾಯ ವ್ಯವಸ್ಥೆ

10:52 PM Jan 09, 2017 | Karthik A |

ವಿಟ್ಲ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ಗಳ ಸಂಚಾರದಿಂದ ಜೀವಕ್ಕೆ ಸಂಚಕಾರ ಬಂದೊದಗಿದೆ. ಅನಿಲ ಹೊತ್ತ ಟ್ಯಾಂಕರ್‌ಗಳು ಪದೇ ಪದೇ ಉರುಳಿ ಅಪಘಾತಕ್ಕೀಡಾಗುತ್ತಿದ್ದು ಪರಿಣಾಮವಾಗಿ ಸಾವುನೋವು ಸಂಭವಿಸುತ್ತಿವೆ. ಕಂಪೆನಿಗಳ ನಿರ್ಲಕ್ಷ್ಯತನದಿಂದ ಈ ದುರಂತಗಳು ಸಂಭವಿಸುತ್ತಿದ್ದು ಅಮಾಯಕರು ಬಲಿಯಾಗುತ್ತಿದ್ದಾರೆ. ಅಗತ್ಯ ಸುರಕ್ಷಾ ವ್ಯವಸ್ಥೆಯನ್ನು ಪಾಲಿಸದೆ ಆಗುತ್ತಿರುವ ಈ ತೊಂದರೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. 

Advertisement

2013ರಲ್ಲಿ ಪೆರ್ನೆಯಲ್ಲಿ ಟ್ಯಾಂಕರ್‌ ಪಲ್ಟಿಯಾಗಿ ಗ್ಯಾಸ್‌ ಸೋರಿಕೆ ಉಂಟಾಗಿತ್ತು. ಜತೆಗೆ ಬೆಂಕಿ ಹಚ್ಚಿಕೊಂಡು ಬಿಟ್ಟಿತ್ತಲ್ಲದೇ ಟ್ಯಾಂಕರ್‌ ಸ್ಫೋಟಗೊಂಡಿತ್ತು. ಸುತ್ತಮುತ್ತ ಮನೆಗಳಿಗೆ ಬೆಂಕಿ ಹರಡಿ 11 ಮಂದಿ ತಮ್ಮದಲ್ಲದ ತಪ್ಪಿಗೆ ಬಲಿಯಾಗಿದ್ದರು. ಟ್ಯಾಂಕರ್‌ ಸ್ಫೋಟದಿಂದ ಉಂಟಾದ ಈ ದುರಂತ ಜಿಲ್ಲೆಯಲ್ಲೇ ಅತಿ ದೊಡ್ಡದು. ಈ ಘಟನೆ ರಾಜ್ಯ ಬೆಚ್ಚಿ ಬೀಳುವಂತೆ ಮಾಡಿತ್ತು. ಮೂರು ವರ್ಷ ಕಳೆದುಹೋಗಿದೆ, ಇನ್ನೂ ಸರಕಾರ ಈ ವ್ಯವಸ್ಥೆಗೆ ಪರ್ಯಾಯ ಕ್ರಮಕೈಗೊಂಡಿಲ್ಲ. ಇಂದಿಗೂ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಕೆಲವು ತಿಂಗಳ ಹಿಂದೆ ಸೂರಿಕುಮೇರು ಎಂಬಲ್ಲಿ ಗ್ಯಾಸ್‌ ಟ್ಯಾಂಕರ್‌ ಉರುಳಿ ಅಂಗಡಿ ಭಸ್ಮಗೊಂಡು ಎರಡು ದಿನಗಳ ಕಾಲ ರಸ್ತೆ ಸಂಚಾರ ಬಂದ್‌ ಆಗಿ ಸ್ಥಳೀಯ ನಿವಾಸಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿತ್ತು. ತಡರಾತ್ರಿ ನಡೆದ ಈ ಘಟನೆಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರ ಉಸಿರುಗಟ್ಟಿಸಿ, ಭಯಭೀತರನ್ನಾಗಿಸಿತ್ತು.

30 ಅಪಘಾತಗಳು 
2015-16ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಒಟ್ಟು 78 ಅಪಘಾತಗಳಲ್ಲಿ 30 ಅಪಘಾತಗಳು ಟ್ಯಾಂಕರ್‌ಗೆ ಸಂಬಂಧಪಟ್ಟಿವೆ. ಎಚ್‌.ಪಿ.ಸಿ.ಎಲ್‌. ಕಂಪೆನಿಗೆ ಸೇರಿದ 15 ಟ್ಯಾಂಕರ್‌, ಐಒಸಿಗೆ ಸೇರಿದ 8 ಟ್ಯಾಂಕರ್‌, ಬಿಪಿಸಿಎಲ್‌ ಕಂಪೆನಿಯ 7 ಟ್ಯಾಂಕರ್‌ಗಳು ಅಪಘಾತಕ್ಕೀಡಾಗಿವೆ. ಈ ಸಂದರ್ಭದಲ್ಲಿ ಅನಿಲ ಸೋರಿಕೆ, ಸ್ಫೋಟಗೊಳ್ಳುವ, ಜತೆಗೆ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಹೆದ್ದಾರಿ ಸಂಚಾರ ಬಂದ್‌ ಆಗುವ ಭಯ ಆವರಿಸುತ್ತಲೇ ಇರುತ್ತದೆ. ನೆಲ್ಯಾಡಿಯಲ್ಲಿ ಟ್ಯಾಂಕರ್‌ ಉರುಳಿ ಬಿತ್ತು. ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡು ಹಲವು ಮಂದಿ 6 ಗಂಟೆಗಳ ಕಾಲ ನಡುರಸ್ತೆಯಲ್ಲೇ ಕಳೆಯುವಂತಾಗಿತ್ತು.

ಆದೇಶ ಲೆಕ್ಕಕ್ಕಿಲ್ಲ
ಈ ಎಲ್ಲ ಘಟನೆಗಳಿಂದ ಎಚ್ಚೆತ್ತ ಜಿಲ್ಲಾಡಳಿತ ಸಂಜೆ 6 ಗಂಟೆಯ ಅನಂತರ ಮಂಗಳೂರಿನಿಂದ ಯಾವುದೇ ಗ್ಯಾಸ್‌ ಟ್ಯಾಂಕರ್‌ಗಳು ತೆರಳದಂತೆ ಆದೇಶ ಹೊರಡಿಸಿತ್ತು. ಆರು ಗಂಟೆ ಅನಂತರ ಹೊರಟ ಗ್ಯಾಸ್‌ ಟ್ಯಾಂಕರ್‌ಗಳಿಗೆ ಉಪ್ಪಿನಂಗಡಿಯಲ್ಲಿ ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದನ್ನು ಗ್ಯಾಸ್‌ ಟ್ಯಾಂಕರ್‌ ಕಂಪೆನಿಗಳು ಗಮನಕ್ಕೆ ತೆಗೆದುಕೊಳ್ಳದೇ ಆದೇಶವನ್ನು ಗಾಳಿಗೆ ತೂರಿ ಸಂಚಾರ ಮಾಡುತ್ತಿವೆ. ಟ್ಯಾಂಕರ್‌ನಲ್ಲಿ ಇಬ್ಬರು ಚಾಲಕರು ಇರುವುದು ಕೂಡ ಕಡ್ಡಾಯವಾಗಿತ್ತು. ಆದರೆ  ಸದ್ಯ ಚಾಲಕರೊಬ್ಬರೇ ಇರುವುದು ಕಂಡುಬರುತ್ತಿದೆ. ಆತ ಚಾಲಕನೂ ನಿರ್ವಾಹಕನೂ ಕ್ಲೀನರೂ ಆಗಿದ್ದು, ಇವರ ನಿದ್ದೆಗೆಟ್ಟು ಅನಿಯಂತ್ರಿತ ಚಾಲನೆಯಿಂದ ಇಂತಹ ಘಟನೆಗಳು ಸಂಭವಿಸುತ್ತಿವೆೆ. ಗ್ಯಾಸ್‌ ಟ್ಯಾಂಕರ್‌ ಉರುಳಿ ಸಂಭವಿಸುವ ಅಪಘಾತ ಒಂದೆಡೆಯಾದರೆ, ಅತಿ ವೇಗವಾಗಿ ಗ್ಯಾಸ್‌ ಟ್ಯಾಂಕರ್‌ ಓಡಿಸುತ್ತಿರುವುದರಿಂದ ಬೈಕ್‌, ಕಾರು ಇನ್ನಿತರ ವಾಹನಗಳಿಗೆ ಢಿಕ್ಕಿ ಹೊಡೆದು ಕೂಡ ಅಪಘಾತಗಳು ಸಂಭವಿಸುತ್ತವೆ.

ಪೈಪ್‌ಲೈನ್‌ ಪೂರ್ತಿಯಾಗಿಲ್ಲ 
ಈ ಎಲ್ಲಾ ಅಪಾಯಗಳನ್ನು ತಪ್ಪಿಸುವ ಉದ್ದೇಶದಿಂದ ಮಂಗಳೂರಿನಿಂದ ಬೆಂಗಳೂರುವರೆಗೆ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು, ನೆಲಮಂಗಲದವರೆಗೆ ಕಾಮಗಾರಿ ಪೂರ್ತಿಯಾಗಿದೆ ಎಂದು ಅಧಿಕಾರಿಗಳು ವರ್ಷದ ಹಿಂದೆಯೇ ಹೇಳುತ್ತಿದ್ದು, ಅದು ಇನ್ನೂ ಪೂರ್ತಿಯಾಗಿಲ್ಲ. ಅದು ಪೂರ್ತಿಯಾಗದೇ ಪೈಪ್‌ಲೈನ್‌ ಮೂಲಕ ಅನಿಲ ಸಾಗಾಟ ಆರಂಭವಾಗದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮತ್ತು ಸುತ್ತಮುತ್ತ ವಾಸಿಸುವವರಿಗೆ ನಿದ್ದೆ ಇಲ್ಲದಾಗಿದೆ. ಕೆಲವೊಮ್ಮೆ ಈ ಟ್ಯಾಂಕರ್‌ಗಳು ರಾಷ್ಟ್ರೀಯ ಹೆದ್ದಾರಿಯಿಂದ ವಿಟ್ಲದಂತಹ ಚಿಕ್ಕ ನಗರಕ್ಕೂ ದಾಂಗುಡಿಯಿಡುತ್ತವೆ. ಇದು ಕೂಡಾ ಹಳ್ಳಿಯ ನಾಗರಿಕರನ್ನು ಭಯಭೀತಗೊಳಿಸುತ್ತಿವೆ. ಟ್ಯಾಂಕರ್‌ಗಳೆಂದರೆ ಭಯಾನಕವೆನಿಸಿಬಿಟ್ಟಿವೆ. ಸಂಚಾರ ನಿಷೇಧ ಕಾನೂನನ್ನು ಧಿಕ್ಕರಿಸಿ, ಸಾಗುವ ಈ ಟ್ಯಾಂಕರ್‌ಗಳ ಬಗ್ಗೆ ತೀವ್ರ ನಿಗಾ ಇರಿಸಬೇಕಾಗಿದೆ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ.

Advertisement

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next