Advertisement

ಷಹಜಾನ್‌ ಮಹಾರಾಜನ ಗುಲಾಬ್‌ ಜಾಮೂನು

12:58 AM Mar 31, 2017 | Karthik A |

ಎಲ್ಲರ ಮನೆಯಲ್ಲೂ ಗುಲಾಬ್‌ ಜಾಮೂನು ಮಾಡುವುದೆಂದರೆ ಖುಷಿ. ಅದು ಸುಲಭ ಮತ್ತು ಸರಳ. ಜತೆಗೆ ತಿನ್ನಲೂ ರುಚಿಯಾಗಿರುವುದರಿಂದ ಮಕ್ಕಳಿಗೂ ಇಷ್ಟ. ಈ ಗುಲಾಬ್‌ ಜಾಮೂನಿನಲ್ಲೇ ಹಲವಾರು ವಿಧಗಳಿವೆ. ಒಂದೊಂದಕ್ಕೂ ವಿಶಿಷ್ಟವಾದ ರುಚಿ. ಸಿಹಿ ತಿಂಡಿಗಳಿಗೆ ಎಲ್ಲರ ಮನೆಯಲ್ಲೂ ಮಹಾರಾಜನ ಸ್ಥಾನಮಾನ. ಅದು ಉತ್ತರದ ಗುಲಾಬ್‌ ಜಾಮೂನಿಗಿರಬಹುದು, ದಕ್ಷಿಣದ ಮೈಸೂರು ಪಾಕ್‌ಗಿರಬಹುದು. ಇದಕ್ಕೂ ಕಾರಣವಿದೆ. ಹಲವಾರು ಸಿಹಿತಿಂಡಿಗಳಿಗೆ ಮಹಾರಾಜರ ನಂಟಿದೆ. ಅವುಗಳು ಹೊರಟಿರುವುದು ಮಹಾರಾಜರ ಅರಮನೆಯ ಪಾಕಶಾಲೆಗಳಿಂದ ಎನ್ನುವುದು ವಿಶೇಷ. ಮೈಸೂರು ಮಹಾರಾಜರ ಆಸ್ಥಾನದ ಪಾಕಪ್ರವೀಣರಿಂದ ಮೊದಲಿಗೆ ಸಿದ್ಧವಾದದ್ದು ಮೈಸೂರು ಪಾಕ್‌. ಅದರಲ್ಲೂ ಗಡಿಬಿಡಿಯಲ್ಲಿ ಮಾಡಿದ್ದಂತೆ. ಗುಲಾಬ್‌ ಜಾಮೂನ್‌ ಸಹ ಮೊಘಲರ ದೊರೆ ಷಹಜಾನನ ಆಸ್ಥಾನದ ಪಾಕಶಾಲೆಯಲ್ಲಿ ರಾಜನ ಪ್ರಮುಖ ಬಾಣಸಿಗನೇ ಗಡಿಬಿಡಿಯಲ್ಲೇ ತಯಾರಿಸಿದ್ದಂತೆ ಎನ್ನುತ್ತವೆ ಲಭ್ಯ ಮಾಹಿತಿ.

Advertisement

ಗುಲಾಬ್‌ ಜಾಮೂನು ಎಷ್ಟು ಪರಿಸರ ಪ್ರಿಯವೆಂದರೆ ಅದರ ಹೆಸರಿನಲ್ಲಿರುವ ಎರಡೂ ಪರಿಸರದಿಂದ ಬಂದವುಗಳೇ. ಗುಲಾಬಿ ನೀರನ್ನು ಬಳಸಿದ್ದಕ್ಕೆ ಗುಲಾಬ್‌ ಸೇರಿಕೊಂಡರೆ, ಜಾಮಾನ್‌ಎನ್ನುವ ಹಣ್ಣಿನ ಆಕಾರದಲ್ಲಿದ್ದರಿಂದ ಜಾಮೂನು ಹೆಸರು ಸೇರಿಕೊಂಡಿತಂತೆ. ಪರ್ಸಿಯನ್‌ ಭಾಷೆಯ ಗೋಲ್‌ ಆಬ್‌ (ಗುಲಾಬಿ ನೀರು) ಹೆಸರಿನಲ್ಲಿ ಸೇರಿಕೊಂಡಿದೆ. ಜಾಮೂನಿನ ಜತೆಗಿರುವ ರಸ (ಪಾಕ) ಕ್ಕೆ ಗುಲಾಬಿ ಪರಿಮಳದ ಹನಿಗಳನ್ನು ಸೇರಿಸುತ್ತಾರೆ. ಇದಕ್ಕೆ ಟರ್ಕಿಯ ಮೂಲವಿದೆ. ಮಧ್ಯ ಏಷ್ಯಾದ ಪ್ರವಾಸಿಗರು ಭಾರತಕ್ಕೆ ತಂದರು ಎಂಬ ಮಾತಿದೆ. ಅರಬ್‌ ದೇಶದಲ್ಲಿ ಇದನ್ನೇ ಹೋಲುವಂಥ ತಿಂಡಿಯೊಂದಿದೆಯಂತೆ. ನಮ್ಮ ಗುಲಾಬ್‌ ಜಾಮೂನ್‌ ಅನ್ನು ಹಾಲಿನ ಕೋವಾ ಮತ್ತು ಸಕ್ಕರೆಯಿಂದ ಮಾಡಿದರೆ ಅರಬ್ಬರ ಜಾಮೂನಿಗೆ ಬೇರೆ ಹಿಟ್ಟಂತೆ. ಆದರೆ ಎರಡಕ್ಕೂ ಇರುವ ಸಾಮ್ಯವೆಂದರೆ ಗುಲಾಬಿ ಪರಿಮಳಯುಕ್ತ ಪಾಕ. ಒಂದು ಗುಲಾಬ್‌ ಜಾಮೂನು ಸಾಮಾನ್ಯವಾಗಿ 140 ರಿಂದ 1450 ಕ್ಯಾಲೊರಿಗಳಿರುತ್ತವಂತೆ! ಹಾಲಿನಂಶದಿಂದ ಮಾಡುವುದರಿಂದ ಕ್ಯಾಲ್ಸಿಯಂ ಅಂಶವೂ ಹೆಚ್ಚು. 

ಬ್ರೆಡ್‌ ಗುಲಾಬ್‌ ಜಾಮೂನ್‌
ಬೇಕಾಗುವ ಸಾಮಗ್ರಿಗಳು

6-8 ಬ್ರೆಡ್‌ ತುಂಡು
ಒಂದು ಚಮಚ ಮೈದಾ ಹಿಟ್ಟು
1 ಚಮಚ ನುಣ್ಣಗಿನ ರವೆ
3 ಚಮಚ ಹಾಲು
ಚಮಚ ಏಲಕ್ಕಿ ಪುಡಿ
ಚಮಚ ಸಕ್ಕರೆ ಪುಡಿ
1 ಚಮಚ ಖೋವಾ
1 ಚಮಚ ಕತ್ತರಿಸಿದ ಪಿಸ್ತಾ
1 ಕಪ್‌ ಕರಿಯಲು ಎಣ್ಣೆ

ಮಾಡುವ ವಿಧಾನ
ಕತ್ತರಿಸಿದ ಬ್ರೆಡ್‌ಗಳ ತುಂಡನ್ನು ಪ್ಲೇಟ್‌ ನಲ್ಲಿ ಹಾಕಿ, ಅದರ ಮೇಲೆ ಹಾಲನ್ನು ಹಾಕಿ. ಅನಂತರ ಬಿಸಿಯಾದ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಖೋವಾ ಬೆರೆಸಿ.

ಐದು ನಿಮಿಷದ ಅನಂತರ ಬ್ರೆಡ್‌ ತುಂಡುಗಳಿಗೆ ಮೈದಾ ಮತ್ತು ರವೆ ಸೇರಿಸಿ, ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ತುಂಬಾ ಮೆದು ಅಥವಾ ತುಂಬಾ ಗಟ್ಟಿಯಾಗಬಾರದು. ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.

Advertisement

ಎಣ್ಣೆಯನ್ನು ಬಿಸಿಯಾಗಿಟ್ಟು, ತಯಾರಾದ ಉಂಡೆಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿ.

ಅನಂತರ ಸಕ್ಕರೆ ಪಾಕದಲ್ಲಿ ಅದನ್ನು ಮುಳುಗಿಸಿಡಿ. 2-3 ಗಂಟೆ ಸಕ್ಕರೆ ಪಾಕದಲ್ಲಿ ಉಂಡೆಗಳು ಚೆನ್ನಾಗಿ ನೆನೆಯಲಿ. ಅನಂತರ ಜಾಮೂನ್‌ ಮೇಲೆ ಪಿಸ್ತಾ ತುಂಡುಗಳನ್ನಿಟ್ಟು ಸರ್ವ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next