Advertisement

ಕಲಿಕೆಯ ಜತೆಗಿರಲಿ ಸಹಪಠ್ಯ ಚಟುವಟಿಕೆ

04:46 PM Feb 17, 2017 | Karthik A |

ಈ ವರ್ಷ ಮಗಳನ್ನು ಡ್ಯಾನ್ಸ್ ಕ್ಲಾಸ್‌ಗೆ ಕಳಿಸುವುದಿಲ್ಲ. ಅವಳು ಹತ್ತನೇ ತರಗತಿಯಲ್ಲಿ ಇದ್ದಾಳಲ್ವ? ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಈ ರೀತಿ ಹೇಳಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಕಾರಣ ತಾನು ಈ ವರ್ಷ ಯಾವುದೇ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ನನ್ನ ವಿದ್ಯಾರ್ಥಿನಿಯೊಬ್ಬಳು ಹೇಳಿದ್ದು ನೆನಪಾಯ್ತು.

Advertisement

ಬಹುತೇಕ ಜನರ ನಂಬಿಕೆ ಇದು. ಉತ್ತಮ ಫ‌ಲಿತಾಂಶ ಲಭಿಸಬೇಕಾದರೆ ಸಹಪಠ್ಯ ಚಟುವಟಿಕೆಗಳಿಂದ ದೂರವಿದ್ದು ಕಲಿಕೆಯಲ್ಲಿ ಮುಳುಗಬೇಕು. ಸಹಪಠ್ಯ ಚಟುವಟಿಕೆಗಳಿಂದ ಸುಮ್ಮನೆ ಸಮಯ ಹಾಳು. ಅದಕ್ಕೆ ವಿನಿಯೋಗಿಸುವ ಸಮಯದಲ್ಲಿ ಪಠ್ಯ ವಿಷಯಗಳನ್ನು ಇನ್ನಷ್ಟು ಚೆನ್ನಾಗಿ ಕಲಿಯಬಹುದು. ಸಹಪಠ್ಯ ಚಟುವಟಿಕೆಗಳನ್ನು ಕಲಿಯುವ ಮಗುವಿನ ಗಮನ ವಿಕೇಂದ್ರೀಕರಣಗೊಳ್ಳುವಂತೆ ಮಾಡುತ್ತದೆ. ದ್ವಿತೀಯ ಪಿ.ಯು.ಸಿ., ಎಸೆಸೆಲ್ಸಿ ಇತ್ಯಾದಿ ನಿರ್ಣಾಯಕ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಸಹಪಠ್ಯ ಚಟುವಟಿಕೆಗಳು ಬೇಕಿಲ್ಲ. ಹಿಂದೆ ಪಠ್ಯೇತರ ಚಟುವಟಿಕೆಗಳು ಎಂದು ಕರೆದು ಕಡಿಮೆ ಪ್ರಾಧಾನ್ಯ ಕೊಟ್ಟಿದ್ದ ಕಲೆ, ಸಾಹಿತ್ಯ, ಕ್ರೀಡೆ ಇತ್ಯಾದಿಗಳನ್ನು ಸಹಪಠ್ಯ ಚಟುವಟಿಕೆಗಳೆಂದು ಶಿಕ್ಷಣ ಇಲಾಖೆ ಕರೆದುದರ ಉದ್ದೇಶವೇ ಅನೇಕರಿಗೆ ಗೊತ್ತಿಲ್ಲ. ಮಗುವಿನ ಸರ್ವತೋಮುಖ ಬೆಳವಣಿಗೆ ಶಿಕ್ಷಣದ ಗುರಿ. ಆ ಗುರಿ ಸಾಧನೆಗೆ ಸಹಪಠ್ಯ ಚಟುವಟಿಕೆಗಳು ಅತ್ಯಗತ್ಯ. 

ವಿದ್ಯಾರ್ಥಿಯಲ್ಲಿರುವ ಪ್ರತಿಭೆಗಳಿಗೆ, ವಿಶೇಷ ಸಾಮರ್ಥ್ಯಗಳಿಗೆ ಮನ್ನಣೆ ಸಿಕ್ಕಿದಾಗ, ಅವು ಗುರುತಿಸಲ್ಪಟ್ಟಾಗ  ಅವನ ಆತ್ಮವಿಶ್ವಾಸ ಹೆಚ್ಚುತ್ತದೆ. ಮನಸ್ಸು ಉಲ್ಲಾಸಭರಿತವಾಗುತ್ತದೆ. ಇದರಿಂದ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಇದು ಕಲಿಕೆಯ ಏಕತಾನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ನಿರಂತರ ಕಲಿಕೆಯಿಂದ ಅವನಲ್ಲಾದ ಮಾನಸಿಕ ಆಯಾಸವನ್ನು ನಿವಾರಿಸಲು ಇಂತಹ ಚಟುವಟಿಕೆಗಳಿಗಷ್ಟೇ  ಸಾಧ್ಯ. ಮಕ್ಕಳನ್ನು ಎಲ್ಲ ಚಟುವಟಿಕೆಗಳಿಂದ ದೂರವಿಟ್ಟು ಕೇವಲ ಓದಿನಲ್ಲೇ ಮುಳುಗುವಂತೆ ಮಾಡಿದ ತತ್‌ಕ್ಷಣ ಅವರು ರ್‍ಯಾಂಕ್‌ ಪಡೆಯುತ್ತಾರೆ ಎಂದು ಭಾವಿಸುವುದು ಹೆತ್ತವರ ಮೂರ್ಖತನ. ಮಕ್ಕಳಲ್ಲಿ ಕಲಿಕೆಯ ಒತ್ತಡ ಹೆಚ್ಚಾದಾಗ, ಆತಂಕ, ಒತ್ತಡ, ಖನ್ನತೆ, ಮಾನಸಿಕ ಸಮಸ್ಯೆಗಳು ತಲೆದೋರಬಹುದು. ಸಹಪಠ್ಯ ಚಟುವಟಿಕೆಗಳು ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತವೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು  ಸಹಪಠ್ಯ ಚಟುವಟಿಕೆಗಳು ಅನಿವಾರ್ಯ. 

ಆದುದರಿಂದ ಹೆತ್ತವರು ತಮ್ಮ ಮಕ್ಕಳು ದಿನವಿಡೀ ಉಳಿದೆಲ್ಲ ಚಟುವಟಿಕೆಗಳಿಂದ ದೂರವಿದ್ದು ಓದಿನಲ್ಲೇ ಮುಳುಗಬೇಕು ಎಂಬ ಹಟದಿಂದ ಹೊರಬನ್ನಿ. ನಿಮ್ಮ ಮಗು ಸ್ವಲ್ಪ ಹೊತ್ತು ಮಾನಸಿಕವಾಗಿ ಸ್ವತಂತ್ರವಾಗಿರಲು, ಅವನಿಗಿಷ್ಟವಾದ ಒಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ದಿನದಲ್ಲಿ ಸ್ವಲ್ಪ ಸಮಯ ನೀಡಿ. ಇದರಿಂದ ಅವರ ಕಲಿಕೆಯ ಸಮಯ ನಷ್ಟವಾಗುವುದಿಲ್ಲ. ಬದಲಿಗೆ ಹೊಸ ಹುರುಪಿನಿಂದ ಕಲಿಕೆಯಲ್ಲಿ ತೊಡಗಿಕೊಂಡು ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ಉತ್ತಮ ಅಂಕ ಗಳಿಸಿದ ಮಾತ್ರಕ್ಕೆ ಬದುಕು ಯಶಸ್ವಿಯಾಗಬೇಕಿಲ್ಲ. ಬದುಕಿನ ಕೌಶಲಗಳನ್ನು ಕಲಿಯಲು, ಸಾಮಾಜಿಕವಾಗಿ ಹೊಂದಾಣಿಕೆಯಿಂದ ಬದುಕಲು, ಬಾಲ್ಯ ,ಯೌವನಗಳನ್ನು ಸ್ವಲ್ಪಮಟ್ಟಿಗಾದರೂ  ಸಕಾರಾತ್ಮಕವಾಗಿ ಆಸ್ವಾದಿಸಲು ಅವರು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲಿ.

– ಜೆಸ್ಸಿ. ಪಿ. ವಿ., ಕೆಯ್ಯೂರು, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next