Advertisement

ದುರಸ್ತಿಗೆ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿತ್ತು ಯುವಕನ ಮೃತದೇಹ!

03:15 AM Nov 20, 2018 | Team Udayavani |

ಉಪ್ಪಿನಂಗಡಿ: ನೆಕ್ಕಿಲಾಡಿಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಇಂಡಿಕಾ ಕಾರಿನಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಫೆ. 12, 2017ರಂದು ಅಪರಿಚಿತ ವ್ಯಕ್ತಿಯ ಮೃತದೇಹವು ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಕೊಲೆಯಾಗಿರಬಹುದು ಎಂದು ಶಂಕಿಸಿ, ವಿವಿಧ ಆಯಾಮಗಳಲ್ಲಿ ಪೊಲೀಸ್‌ ತನಿಖೆ ಮುಂದುವರಿದಿದೆ.

Advertisement

34ನೇ ನೆಕ್ಕಿಲಾಡಿಯಲ್ಲಿ ಹಾದು ಹೋಗುವ ರಾ.ಹೆ. 75ರ ಸನಿಹದಲ್ಲಿರುವ ಸದಾನಂದ ಅವರ ಮಾಲಕತ್ವದ ಗ್ಯಾರೇಜ್‌ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಉಡುಪುಗಳ ಆಧಾರದಲ್ಲಿ ಮೃತದೇಹವು ಯುವಕನದ್ದಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಕೆಲವು ದಿನಗಳಿಂದ ವಾಸನೆ ಬರುತ್ತಿದ್ದರೂ ಮೊದಮೊದಲು ನಾಯಿ ಸತ್ತಿರಬಹುದು ಎಂದು ಭಾವಿಸಿ ಜನ ಸುಮ್ಮನಾಗಿದ್ದರು. ಆದರೆ, ಕಾರಿನಲ್ಲಿ ರಕ್ತ ಸೋರಿಕೆಯಾಗುತ್ತಿರುವುದನ್ನು ಸ್ಥಳೀಯರು ಗಮನಿಸಿದ ಮೇಲೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕಾರಿನ ಚಾಲಕನ ಸೀಟಿನಲ್ಲಿ ಮಲಗಿದ ಸ್ಥಿತಿಯಲ್ಲಿ ಕೊಳೆತ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹದಲ್ಲಿ ಜೀನ್ಸ್‌ ಪ್ಯಾಂಟ್‌, ಉದ್ದ ತೋಳಿನ ಡಿಸೈನ್‌ ಅಂಗಿ, ಕಪ್ಪು ಬಣ್ಣದ ಶೂ ಕಂಡುಬಂದಿದ್ದವು. ಮೃತದೇಹವು ಗುರುತು ಹಿಡಿಯಲಾಗದಷ್ಟು ಕೊಳೆತು ಹೋಗಿತ್ತು.

ಮಂಗಳೂರಿನ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಡಾ| ಮಹಾಬಲೇಶ್ವರ ಶೆಟ್ಟಿ ಹಾಗೂ ಡಾ| ಸೂರಜ್‌ ಶೆಟ್ಟಿ ಅವರ ನೇತೃತ್ವದ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕಾಗಮಿಸಿ ಮೃತದೇಹದ ಪ್ರಾಥಮಿಕ ಪರಿಶೀಲನೆ ನಡೆಸಿದೆ. ಹೆಚ್ಚಿನ ಪರೀಕ್ಷೆಗಾಗಿ ಮೃತದೇಹವನ್ನು ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ಕಳುಹಿಸಲಾಗಿತ್ತು.

ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಭಾಸ್ಕರ ರೈ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್‌ ಎಸ್‌. ಕುಲಕರ್ಣಿ, ಉಪ್ಪಿನಂಗಡಿ ಎಸ್‌ಐ ರತನ್‌ ಹಾಗೂ ಪ್ರೊಬೇಷನರಿ ಎಸ್‌ಐ ಮಂಜುನಾಥ್‌ ಮತ್ತು ಸಿಬಂದಿ ಆಗಮಿಸಿ, ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ಗ್ಯಾರೇಜ್‌ ಮಾಲಕ ಸದಾನಂದ ಅವರು ನೀಡಿರುವ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಸಿಕ್ಕಿದ್ದು ಟಿಕೆಟ್‌ ಮಾತ್ರ!
ಮೃತ ವ್ಯಕ್ತಿಯ ಜೇಬಿನಲ್ಲಿ ಉಳ್ಳಾಲದಿಂದ ಪಾಣೆಮಂಗಳೂರು ಮೂಲಕ ಉಪ್ಪಿನಂಗಡಿಗೆ ಸರಕಾರಿ ಬಸ್ಸಿನಲ್ಲಿ ಸಂಚರಿಸಿದ ಟಿಕೆಟ್‌ಗಳು ಸಿಕ್ಕಿದೆ. ಗ್ಯಾರೇಜಿನ ಬಳಿ ದುರಸ್ತಿಗೆಂದು ಹಲವು ಸಮಯದಿಂದ ನಿಲ್ಲಿಸಿದ್ದ ಕಾರಿನಲ್ಲಿ ಈ ಮೃತದೇಹ ಪತ್ತೆಯಾಗಿತ್ತು. ಈ ಕಾರಿನಲ್ಲಿ ಆಗಾಗ ನಾಗರಹಾವೊಂದು ನುಸುಳಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ, ಈ ವ್ಯಕ್ತಿ ಪಾನಮತ್ತನಾಗಿ ಬಂದು ಕಾರಿನಲ್ಲಿ ಮಲಗಿ ಮೃತಪಟ್ಟನೇ? ಆತ್ಮಹತ್ಯೆ ಮಾಡಿಕೊಂಡನೇ? ಹಾವು ಕಚ್ಚಿ ಸತ್ತನೇ ಅಥವಾ ಯಾರಾದರೂ ಕೊಲೆ ಮಾಡಿ ಈತನನ್ನು ಕಾರಿನಲ್ಲಿ ತಂದೆಸೆದು ಹೋಗಿದ್ದಾರೋ ಎಂಬ ಸ್ಥಳೀಯರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

Advertisement

ಸಿಸಿ ಕೆಮರಾದಲ್ಲಿ ದಾಖಲು?
ಘಟನಾ ಸ್ಥಳದ ಸನಿಹದಲ್ಲಿ ಪೊಲೀಸ್‌ ಇಲಾಖೆ ಅಳವಡಿಸಿದ್ದ ಸಿಸಿ ಟಿವಿ ಕೆಮರಾ ಇತ್ತು. ಈ ವ್ಯಕ್ತಿ ಒಬ್ಬನೇ ಬಂದಿದ್ದನೇ? ಅಥವಾ ಯಾರಾದರೂ ಕೊಲೆ ಮಾಡಿ ಎಸೆದು ಹೋದರೆ? ಒಬ್ಬನದೇ ಕೃತ್ಯವೇ ಅಥವಾ ತಂಡವೊಂದು ಮಾಡಿತೇ? ಎನ್ನುವ ವಿಚಾರದಲ್ಲಿ ಪೊಲೀಸ್‌ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿಸಿ ಕೆಮರಾದಲ್ಲಿ ಈ ವ್ಯಕ್ತಿಯ ಚಹರೆಯನ್ನು ಪತ್ತೆಹಚ್ಚುವ ಪ್ರಯತ್ನವೂ ಕೈಗೂಡಿಲ್ಲ. ಹೀಗಾಗಿ, ಪ್ರಕರಣ ನಿಗೂಢವಾಗಿಯೇ ಉಳಿದಿದೆ.

ಪ್ರಯತ್ನ ನಡೆಸಿದ್ದೇವೆ
ಅಪರಿಚಿತ ಶವದ ಜಾಡು ಹಿಡಿದ ಪೊಲೀಸರು ಕಳೆದ ಒಂದು ವರ್ಷದಿಂದ ಪ್ರಯತ್ನ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಆದರೆ, ಈಗಾಗಲೇ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳಿಗೆ ಹಾಗೂ ಹೊರ ಜಿಲ್ಲೆಗಳ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪತ್ತೆಹಚ್ಚುವ ಪ್ರಯತ್ನ ನಡೆಸುತ್ತಿದ್ದೇವೆ.
– ನಂದಕುಮಾರ್‌, ಪಿಎಸ್‌ಐ, ಉಪ್ಪಿನಂಗಡಿ

— ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next