Advertisement

ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ: ಸುಧಾಮೂರ್ತಿ

01:01 PM Dec 12, 2020 | Suhan S |

ಲಂಡನ್‌: ಕರ್ನಾಟಕ ರಾಜ್ಯೋತ್ಸವ ಒಂದು ದಿನ ಮಾಡಿ ಮರೆಯುವ ಕಾರ್ಯವಲ್ಲ. ಅದನ್ನು ನಿರಂತರವಾಗಿಸಿಕೊಂಡು ಸಂಸ್ಕೃತಿಯನ್ನು ಬೆಳೆಸಬೇಕು. ಎಲ್ಲೇ ಇದ್ದರೂ ಕನ್ನಡವನ್ನು ಮರೆಯಬೇಡಿ ಎಂದು ಇನ್ಫೋಸಿಸ್‌ ಫೌಂಡೇಶನ್‌ನ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.
ಅವರು, ಅಂತಾರಾಷ್ಟ್ರೀಯ ಶುಶ್ರೂಷಕರ ಸಂಘದ ವತಿಯಿಂದ ಲಂಡನ್‌ನ ನ. 29ರಂದು ನಡೆದ ಕರ್ನಾಟಕ ರಾಜ್ಯೋತ್ಸವ ವರ್ಚುವಲ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

Advertisement

ನೀವೆಲ್ಲ ಭಾರತೀಯ ಕನ್ನಡಿಗರು. ನಿಮ್ಮ ಮೂಲಕ ಕನ್ನಡ ಶುಶ್ರೂಷಕರು ಇನ್ನೂ ಹೆಚ್ಚು ಬೆಳೆಯಬೇಕು. ಅಂತಾರಾಷ್ಟ್ರೀಯ ಶುಶ್ರೂಷಕರ ಸಂಘಟನೆ ಬಗ್ಗೆ ನಾನು ಕೇಳಿದ್ದು ಇದೇ ಮೊದಲು. ಫ್ಲಾರೆನ್ಸ್‌ ನೈಟಿಂಗೇಲ್‌ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಮೆಡಿಕಲ್‌ ಕಾಲೇಜಿನ ಬೆನ್ನೆಲುಬು ಶುಶ್ರೂಷಕರು. ಹೀಗಾಗಿ ಮೊದಲು ಅವರ ಕಾಲೇಜು ಸ್ಥಾಪನೆಯಾಗಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಆಗ ಮಾತ್ರ ಆಸ್ಪತ್ರೆ ಬೆಳೆಯಲು ಸಾಧ್ಯ. ಎಲೆ ಮರೆ ಕಾಯಿಯಂತೆ ಕೆಲಸ ಮಾಡುವ ಕೆಲಸವೇ ಶುಶ್ರೂಷಕ ವೃತ್ತಿ. ಡಾಕ್ಟರ್‌ ಹೆಸರು ಎಲ್ಲರಿಗೂ ನೆನಪಿರುತ್ತದೆ. ಆದರೆ ಶುಶ್ರೂಷಕರನ್ನು ಯಾರೂ ಕೂಡ ಹೇಳಲ್ಲ. ಅವರು ಇಲ್ಲ ಅಂದ್ರೆ ವೈದ್ಯಕೀಯ ರಂಗವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸಂಘಟನೆಯು ಐತಿಹಾಸಿಕವಾಗಿ ತಮ್ಮತನವನ್ನು ಸುವರ್ಣಾಕ್ಷರದಲ್ಲಿ ಬರೆಯುವಂತೆ ಮಾಡಿದೆ. ಯುಕೆಯ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರಿಗೆ ಕರೋನಾ ಬಂದು ಹುಷಾರಾದಾಗ ಅವರು ಹೇಳಿದ್ದು ಡಾಕ್ಟರ್‌ ಹೆಸರಲ್ಲ ಇಬ್ಬರು ಪೋರ್ಚುಗಲ್‌ ಮತ್ತು ಇಟೆಲಿಯ ಶುಶ್ರೂಷಕಿಯವರದ್ದು. ಅಂತಹ ಕೆಲಸವನ್ನು ನೀವೆಲ್ಲರೂ ಮಾಡುತ್ತಿದ್ದೀರಿ. ನೀವೆಲ್ಲ ಅಲ್ಲಿ ವಿದೇಶಿಯರ ಜತೆಗೂಡಿ ಮಾಡುವ ಕೆಲಸ ಯಾರೂ ಮರೆಯುವಂತಿಲ್ಲ. ಭಾರತ ದೇಶದ ಪ್ರಗತಿಯಲ್ಲಿ ನಿಮ್ಮೆಲ್ಲರ ಸಹಾಯ, ಸಹಕಾರ ಬಹಳಷ್ಟಿದೆ. ಅದಕ್ಕೆ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

Advertisement

ಒಳ್ಳೆಯ ಸಮಾರಂಭ ಏರ್ಪಡಿಸಿದ್ದೀರಿ. ಬಹಳ ಸಂತೋಷವಾಯಿತು. ನೀವಿರುವ ದೇಶಕ್ಕೆ ಬಂದಾ ಮೊದಲು ನಿಮ್ಮನ್ನು ಭೇಟಿಯಾಗುತ್ತೇನೆ ಎಂದ ಅವರು, ಕರ್ನಾಟಕದಲ್ಲಿ ಶುಶ್ರೂಷಕರ ಸಂಬಳದ ಬಗ್ಗೆ ಬೇಸರ ವ್ಯಕ್ತಪಡಿಸಿ ಈ ಬಗ್ಗೆ ಸರಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ನಾಡೋಜ ಡಾ| ಮನು ಬಳಿಗಾರ್‌ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಸಂಘವೊಂದು ಇಂತಹ ಕಾರ್ಯಕ್ರಮ ನೀಡುತ್ತಿರುವುದು ಹೆಮ್ಮೆಯ ವಿಷಯ. ನಾವಿದನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ಕ್ಷಣವಾಗಿದೆ ಎಂದು ಹೇಳಿದರು.
ವೈದ್ಯರು ಎಷ್ಟು ಮುಖ್ಯವೋ ಶುಶ್ರೂಷಕರೂ ಅಷ್ಟೇ ಮುಖ್ಯ. ಹೆಣ್ಣು ಮಕ್ಕಳು ಸ್ವಾಭಿಮಾನದ ಸಂಕೇತ. ಅವರಿಗೆ ಕೊಡುವುದು ಗೊತ್ತು ಸಂಘಟಿಸುವುದು ಗೊತ್ತಿಲ್ಲ. ಅಂತಹ ಮಹಿಳೆಯರು ಯಾವತ್ತು ಮನಸು ಬಿಚ್ಚಿ ಮಾತನಾಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಶುಶ್ರೂಷಕರು ಯೋಧರಂತೆ ಹೋರಾಡಿದ್ದಾರೆ. ಅವರ ಸಹನೆ ಮತ್ತು ತಾಳ್ಮೆಗೆ ಅಭಿನಂದನೆಗಳು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣ ಮಾತನಾಡಿ, ಕನ್ನಡ ವಿಶ್ವವ್ಯಾಪಿಯಾಗಿದೆ. ಹೊರ ದೇಶದಲ್ಲಿರುವ ಶುಶ್ರೂಷಕರು ರಾಜ್ಯದ ಜನರನ್ನು ಒಂದುಗೂಡಿಸುವ ಕಾರ್ಯಕ್ರಮ ನಡೆಸಿದ್ದು ಮೆಚ್ಚುವಂತದ್ದು ಎಂದರು.

ನಿಮ್ಮ ಮನವಿಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿ ಬೇಡಿಕೆ ಈಡೇರಿಸಲು ಸಹಾಯ ಮಾಡುತ್ತೇನೆ. ಈಗಾಗಲೇ ಕನ್ನಡವನ್ನು ಎಲ್ಲ ಭಾಗದಲ್ಲಿ ಬೆಳೆಸಲು ಪಣ ತೊಟ್ಟಿದ್ದೇನೆ. ಶುಶ್ರೂಷ ವೃತ್ತಿಯಲ್ಲಿ ಕನ್ನಡ ಬಳಕೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಕನ್ನಡ ಶುಶ್ರೂಷಕರಿಗೆ ಕರ್ನಾಟಕದಲ್ಲಿ ಸಿಂಹಪಾಲು ದೊರೆಯುವಂತಾಗಬೇಕು ಎಂದು ಹೇಳಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕಲುಪತಿ ಡಾ| ಎಸ್‌. ಸಚ್ಚಿದಾನಂದ ಮಾತನಾಡಿ, ನೀವೆಲ್ಲ ನೊಂದವರ ಪಾಲಿನ ಬೆಳಕಾಗಿ ವೈದ್ಯರಿಗಿಂತಲೂ ಹೆಚ್ಚಿನ ಕೆಲಸ, ನಿಸ್ವಾರ್ಥ ಸೇವೆ ಮಾಡುತ್ತಿದ್ದೀರಿ. ಆ ಬಗ್ಗೆ ಹೆಮ್ಮೆ ಇದೆ ಎಂದ ಅವರು, ಮುಂದಿನ ದಿನಗಳಲ್ಲಿ ಶುಶ್ರೂಷ ಮಹಾವಿದ್ಯಾಲಯಗಳಲ್ಲಿ ಬೋಧಕೇತರ ಸಿಬಂದಿಯ ಕಾಯಂ ಸ್ಥಾನ ಸೃಷ್ಟಿಸಲು ಸರಕಾರಕ್ಕೆ ಮನವಿ ಮಾಡುವಂತೆ ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಭಾರತೀಯ ಶುಶ್ರೂಷಕ ಪರಿಷತ್ತಿನ ಅಧ್ಯಕ್ಷ ಡಾ| ಟಿ. ದಿಲೀಪ್‌ ಕುಮಾರ್‌ ಮಾತನಾಡಿ, ಶುಶ್ರೂಷಕ ಸೇವೆಯ ಸ್ಮರಣಾರ್ಥ 2020ರ ವರ್ಷವನ್ನು ಆಧುನಿಕ ಶುಶ್ರೂಷಕ ಸ್ಥಾಪಕಿ ಮತ್ತು ಫ್ಲಾರೆನ್ಸ್‌ ನೈಟಿಂಗೇಲ್‌ ಅವರ 200 ವರ್ಷಗಳ ಸವಿ ನೆನಪಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ವಿಶ್ವ ದಾದಿಯರ ವರ್ಷ ಎಂದು ಘೋಷಣೆ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘ ಕಟ್ಟಿ ಬೆಳೆಸುತ್ತಿರುವುದು ಶ್ರೇಷ್ಟ ಕಾರ್ಯ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಈಗ 60 ಸಾವಿರ ಶುಶ್ರೂಷಕರ ಅವಶ್ಯಕತೆ ಇದೆ.ಶುಶ್ರೂಷಕ ಶಿಕ್ಷಣಕ್ಕೆ ಉದ್ಯೋಗದ ಸಂಖ್ಯೆ ಕಡಿಮೆ ಇದೆ. ನಾವು ಹೊಸ ಉದ್ಯೋಗವನ್ನು ಸೃಷ್ಟಿಸಬೇಕು. ಅದಕ್ಕೆ ಸರಕಾರ ಸಹಾಯ ನೀಡಬೇಕು. ಜತೆಗೆ ಸಾಗರೋತ್ತರ ಉದ್ಯೋಗದ ಕಾರ್ಯ ಅತ್ಯವಶ್ಯಕ. ಹೊರದೇಶಗಳಿಗೆ ವೃತ್ತಿಯನ್ನು ಅರಸಿ ಹೋಗುವ ಶುಶ್ರೂಷಕರಿಗೆ ಭಾರತೀಯ ಶುಶ್ರೂಷ ಪರಿಷತ್‌ ಹಲವು ತರಬೇತಿಯನ್ನು ಪ್ರಾರಂಭಿಸಿದ್ದು ಈ ಬಗ್ಗೆ ಅಂತಾರಾಷ್ಟ್ರೀಯ ಕನ್ನಡ ಶುಶ್ರೂಷಕರ ಸಂಘವು ಗಮನಹರಿಸಿ ಇಲ್ಲಿಯವರಿಗೆ ನಿಮ್ಮಿಂದಾಗುವ ಸಹಾಯ ಮಾಡಿ. ಮುಂದಿನ ಕಾರ್ಯಗಳಿಗೆ ಭಾರತ ಮತ್ತು ಕರ್ನಾಟಕ ಸರಕಾರದ ಸಂಪರ್ಕ ಸೇತುವೆಯಾಗಿ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‌ನ ಸಹಾಯಕ ನಿರ್ದೇಶಕಿ, ಕುಲ ಸಚಿವೆ ಉಷಾ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಸಹಾಯಕ ನಿರ್ದೇಶಕಿ ಡಾ| ಎಸ್‌. ವಿಜಯಮ್ಮ, ರಾಜ್ಯ ಶುಶ್ರೂಷಕರ ಸಂಘದ ಅಧ್ಯಕ್ಷ ರಾಜಕುಮಾರ ಮಾಳಗೆರ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನ ಸಂಸ್ಥೆಯ ಖಾಯಂ ಶುಶ್ರೂಷಕರ ಸಂಘದ ಅಧ್ಯಕ್ಷ ಸಂತೋಷ ಕುಮಾರ್‌ ಬಿ. ಮಾತನಾಡಿ ಶುಭ ಹಾರೈಸಿದರು.

ಅಂತಾರಾಷ್ಟ್ರೀಯ ಕನ್ನಡ ಶುಶ್ರೂಷಕ ಸಂಘದ ಅಧ್ಯಕ್ಷ ಗೋಪಾಲ ಕುಲಕರ್ಣಿ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮದ ಮೂಲಕ ಜತೆಗಿರುತ್ತೇವೆ. ಶುಶ್ರೂಷಕರ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ವೆಬ್‌ಸೈಟ್‌ ಅನಾವರಣಗೊಳಿಸಲಾಗಿದೆ. ಇದು ಭಾರತೀಯ ಶುಶ್ರೂಷಕರಿಗೆ ಬಹಳಷ್ಟು ಅನುಕೂಲಕರವಾಗಲಿದೆ. ಜತೆಗೆ ನಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಡೋಣ ಎಂದು ಹೇಳಿದರು.

ಶ್ರೀಧರ್‌ ಕುಲಕರ್ಣಿ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಇಟೆಲಿಯ ಮಧು ಹೇಮೇಗೌಡ ಅವರು ನಿರೂಪಿಸಿದರು.
ಕಾರ್ಯಕ್ರಮ ಉದ್ಘಾಟನೆಯಲ್ಲಿ ಪಾಲ್ಗೊಳ್ಳಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್‌ ನಾರಾಯಣ,

ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌, ನಟ ಡಾ| ಶಿವರಾಜಕುಮಾರ್‌ ವೀಡಿಯೋ ಮೂಲಕ ಶುಭ ಹಾರೈಸಿದರು.
ಸಮಿತಿ ಅಧ್ಯಕ್ಷ ಯುಕೆಯ ರಾಘವೇಂದ್ರ ಕಂಬಳು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಉಪಾಧ್ಯಕ್ಷ ಸೌದಿ ಅರೇಬಿಯಾದ ರವಿ ಮಹಾದೇವ ಅವರು ಸ್ವಾಗತಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಯುಕೆಯ ಬಸವ ಪಾಟೀಲ್‌ ಸಂಘದ ಧೇಯೋದ್ದೇಶಗಳ ಮತ್ತು ಬೆಳೆದು ಬಂದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಶುಶ್ರೂಷ ಪರೀಕ್ಷಾ ಮಂಡಳಿ ಬೆಂಗಳೂರಿನ ಕಾರ್ಯದರ್ಶಿ ಬೇಬಿ ಮುನಿಸ್ವಾಮಿ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಿಗಳ ಮಹಾವಿದ್ಯಾಲಯ ಬೆಂಗಳೂರಿನ ಸಹಾಯ ಕುಲಸಚಿವೆ ಜಯಲಕ್ಷ್ಮಿ ಎನ್‌., ಮುಖ್ಯಸ್ಥರಾದ ಡಾ| ಕೆ. ರಾಮು, ಕರ್ನಾಟಕ ರಾಜ್ಯ ಶುಶ್ರೂಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್‌ ನಾಯಕ್‌, ಟಿ.ಎನ್‌.ಐ.ಐ. ಬೆಂಗಳೂರು ಶಾಖೆಯ ಅಧ್ಯಕ್ಷ ಡಾ| ಎ.ಟಿ.ಎಸ್‌. ಗಿರಿಯ, ಬೆಂಗಳೂರು ನಿಮ್ಹಾನ್ಸ್‌ ಕನ್ನಡ ಬಳಗದ ಪ್ರಧಾನ ಕಾರ್ಯದರ್ಶಿ ಎಸ್‌. ತಮ್ಮಣ್ಣ, ಕಿದ್ವಾಯ್‌ ಶುಶ್ರೂಷಕರ ಕಲ್ಯಾಣ ಸಂಘದ ಅಧ್ಯಕ್ಷೆ ವಿ. ಶಾರದಾ, ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ನಿವೃತ್ತ ಶುಶ್ರೂಷಾಧಿಕಾರಿ ಲೀಲಾ ಗಣೇಶ್‌ ರಾವ್‌, ಮೈಸೂರು ಸರಕಾರಿ ನೌಕರರ ಸಂಘ, ಸರಕಾರಿ ಶುಶ್ರೂಷಕರ ಸಂಘದ ಮಾಜಿ ಉಪಾಧ್ಯಕ್ಷೆ ಶಿವಮ್ಮ ಸಹಿತ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
ಅಂಜಲಿ ಹಳಿಯಾಳ ಅವರಿಂದ ಗಾಯನ, ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯೋತ್ಸವ ಸಮಿತಿಯ ಉಪಾಧ್ಯಕ್ಷ ಶಿವಾನಂದ ಸಾವಳಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next