Advertisement

ಸುಧಾಕರ್‌ಗೆ ಆರೋಗ್ಯ-ಕುಟುಂಬ ಕಲ್ಯಾಣ ಖಾತೆ: ಗೊಂದಲಕ್ಕೆ ಆಸ್ಪದ ಬೇಡ

10:09 PM Oct 12, 2020 | mahesh |

ಈಗಿನ ಸಂದರ್ಭದಲ್ಲಿ ಜನರ ಹಿತಾಸಕ್ತಿ, ಕೋವಿಡ್ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ದೃಷ್ಟಿಯಿಂದ ಆಡಳಿತಾತ್ಮಕವಾಗಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಕ್ರಮಕೈಗೊಳ್ಳುವುದು ಅನಿವಾರ್ಯ. ಹೀಗಾಗಿಯೇ ರಾಜ್ಯ ಸರ್ಕಾರ ಇಂಥದ್ದೊಂದು ತೀರ್ಮಾನ ಕೈಗೊಂಡಿರಬಹುದು.

Advertisement

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಜವಾಬ್ದಾರಿ ಹೆಚ್ಚುವರಿಯಾಗಿ ವಹಿಸಲಾಗಿದೆ.

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎದುರಾಗಿದ್ದ ಗೊಂದಲ ನಿವಾರಿಸಿ ಸುಸೂತ್ರ ಹಾಗೂ ಸುಗಮ ಆಡಳಿತಕ್ಕೆ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂಬ ಸಮಜಾಯಿಷಿ ಸಹ ಸರ್ಕಾರ ನೀಡಿದೆ. ಕೊರೊನಾ ವಿಚಾರದಲ್ಲಿ ಆಯಾ ಸಂದರ್ಭದಲ್ಲಿ ಕೈಗೊಳ್ಳುವ ಆದೇಶ, ನಿರ್ಧಾರ, ನಿರ್ಣಯ, ತೀರ್ಮಾನಗಳು ಒಂದೇ ಕಡೆಯಿಂದ ಹೋದರೆ ಸೂಕ್ತ. ಅಧಿಕಾರಿಗಳಿಗೂ ಪಾಲನೆಗೆ ಸುಲಭ. ಸಮನ್ವಯತೆಗೂ ಸಹಕಾರಿ ಎಂಬುದು ಇದರ ಮುಖ್ಯ ಉದ್ದೇಶ ಇರಬಹುದು.

ಒಂದು ಕಡೆಯಿಂದ ನೋಡಿದರೆ ಇದು ಸೂಕ್ತವೂ ಹೌದು. ಏಕೆಂದರೆ, ಕೊರೊನಾ ಪ್ರಾರಂಭದಿಂದ ಇದುವರೆಗಿನ ಬೆಳವಣಿಗೆ ಗಮನಿಸಿ ದರೆ ಕೆಲವು ಸಲ ಒಮ್ಮತದ ತೀರ್ಮಾನವಾಗದೆ ಸಮಸ್ಯೆಗಳು ಎದುರಾಗಿದ್ದೂ ಉಂಟು. ಇದೇ ಕಾರಣಕ್ಕೆ ಕೋವಿಡ್ ಹೊಣೆಗಾರಿಕೆ ಇತರೆ ಸಚಿವರಿಗೂ ಕೆಲ ಸಮಯ ನೀಡಲಾಗಿತ್ತು. ಆರೋಗ್ಯ ಸೇವೆ ವಿಚಾರದಲ್ಲಿ ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಒಂದೇ ಇಲಾಖೆ ಅಥವಾ ಸಚಿವ ನಿಭಾಯಿಸುವುದು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತ.

ಆದರೆ, ದಿಢೀರ್‌ ಕ್ರಮದಿಂದ ರಾಜಕೀಯವಾಗಿ ಬೇರೆ ಅರ್ಥಗಳಿಗೆಕಾರಣವಾಗಬಹುದು ಜತೆಗೆ, ಇಷ್ಟು ದಿನ ಕೊರೊನಾ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿರಲಿಲ್ಲವೇ ಎಂಬ ಪ್ರಶ್ನೆಯೂ ಮೂಡಬಹುದು. ಆದರೆ, ಈಗಿನ ಸಂದರ್ಭದಲ್ಲಿ ಜನರ ಹಿತಾಸಕ್ತಿ, ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ದೃಷ್ಟಿಯಿಂದ ಆಡಳಿತಾತ್ಮಕವಾಗಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಕ್ರಮಕೈಗೊಳ್ಳುವುದು ಅನಿವಾರ್ಯ.

Advertisement

ಹೀಗಾಗಿಯೇ ರಾಜ್ಯ ಸರ್ಕಾರ ಇಂಥದ್ದೊಂದು ತೀರ್ಮಾನ ಕೈಗೊಂಡಿ ರಬಹುದು. ಆರೋಗ್ಯ ಮತ್ತು ಕುಟಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಸೇರಿದರೆ ದೊಡ್ಡ ವ್ಯಾಪ್ತಿ. ಸಮುದಾಯ ಆರೋಗ್ಯ ಕೇಂದ್ರದಿಂದ ಹಿಡಿದು ವೈದ್ಯಕೀಯ ಕಾಲೇಜು ಆಸ್ಪತ್ರೆಗಳವರೆಗೆ ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ. ವೈದ್ಯರು, ನರ್ಸ್‌ಗಳು, ತಜ್ಞ ವೈದ್ಯರು ಹೀಗೆ ಬೃಹತ್‌ ಸಿಬ್ಬಂದಿ ಜತೆಗೂಡಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ, ಡಾ.ಕೆ.ಸುಧಾಕರ್‌ ಅವರಿಗೂ ಇದು ಸವಾಲೇ ಸರಿ. ಆದರೂ ಸ್ವತಃ ವೈದ್ಯರೂ ಆಗಿರುವ ಡಾ.ಕೆ.ಸುಧಾಕರ್‌ ಎಲ್ಲವನ್ನೂ ಸರಿದೂಗಿಸಿಕೊಂಡು ವಹಿಸಿರುವ ಜವಾಬ್ದಾರಿ ಯಾವ ರೀತಿ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next