ಕಲಬುರಗಿ: ಸೈಕಲ್ ಬಳಕೆಯಿಂದ ಇಂಧನ ಉಳಿತಾಯವಷ್ಟೇ ಅಲ್ಲ, ಸ್ವತ್ಛ ಮತ್ತು ಆರೋಗ್ಯವಂತ ರಾಷ್ಟ್ರ ನಿರ್ಮಾಣವೂ ಸಾಧ್ಯವಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಹೇಳಿದರು.
ನಗರದಲ್ಲಿ ಇಂಧನ ಉಳಿತಾಯ ಕುರಿತ ಸಕ್ಷಮ ಸೈಕಲ್ ದಿನಾಚರಣೆ ಅಂಗವಾಗಿ ರವಿವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಪೊಲೀಸ್ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹಾಗೂ ಪೆಟ್ರೋಲ್ ಸಂರಕ್ಷಣಾ ಸಂಶೋಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಸೈಕ್ಲೋಥಾನ್‌ನಲ್ಲಿ
ಪಾಲ್ಗೊಂಡು ಅವರು ಮಾತನಾಡಿದರು. ಪೆಟ್ರೋಲ್ ಮತ್ತು ಡಿಸೇಲ್‌ನಂತ ಇಂಧನಗಳನ್ನು ಉಳಿತಾಯದ ಅರಿವು ಮೂಡಿಸಲು ವಾಹನ ಹೊಂದಿದ ಪ್ರತಿಯೊಬ್ಬರೂ ತಿಂಗಳಲ್ಲಿ ಒಂದು ದಿನವಾದರೂ ವಾಹನ ಓಡಿಸದೇ ಕಳೆಯಬೇಕು ಎನ್ನುವುದೇ ಸೈಕ್ಲೋಥಾನ್‌ನ ಪ್ರಮುಖ ಉದ್ದೇಶವಾಗಿದೆ. ಇದೇ ಸದುದ್ದೇಶದೊಂದಿಗೆ ಮುಂದಿನ ದಿನಗಳಲ್ಲಿ ಸೈಕಲ್ ರ್ಯಾಲಿಗಳನ್ನು ಆಯೋಜಿಸಲಾಗುವುದು. ವಾಹನ ಹೊಂದಿರುವ ಮಹಾನಗರ ಜನತೆ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸೈಕಲ್ ಬಳಕೆಯಿಂದ ಪರಿಸರವೂ ಸ್ವತ್ಛವಾಗುತ್ತದೆ. ಸೈಕಲ್ ತುಳಿಯುವುದರಿಂದ ಆರೋಗ್ಯ ಸದೃಢವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫೀಟ್ ಇಂಡಿಯಾ, ಸೈಕಲ್ ಫಾರ್ ಚೇಂಜ್, ಸ್ವತ್ಛ ಭಾರತ, ಸ್ವತ್ಛ ಕಲಬುರಗಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬೆಳಗ್ಗೆ 6:30ಕ್ಕೆ ನಗರ ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು ಸೈಕಲ್ ನಡೆಸುವ ಮೂಲಕ ಸೈಕ್ಲೋಥಾನ್‌ಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಸೈಕ್ಲೋಥಾನ್ ಅನ್ನಪೂರ್ಣ ಕ್ರಾಸ್ ಮೂಲಕ ಸೇಡಂ ರಸ್ತೆಯ ಖರ್ಗೆ ಪೆಂಟ್ರೊಲ್ ಪಂಪ್ ವೃತ್ತದ ವರೆಗೆ ನಡೆಯಿತು.
ಇದನ್ನೂ ಓದಿ:ಮಂಗಳೂರು: ದೇವಸ್ಥಾನದ ಹುಂಡಿ ಕಳ್ಳತನ, ಭಗವಧ್ವಜಕ್ಕೆ ಅವಮಾನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಡಿಸಿಪಿ ಡಿ. ಕಿಶೋರಬಾಬು, ಈಶಾನ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ., ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಸೈಕಲ್ ಸವಾರಿ ಮಾಡಿದರು. ಇಂಡಿಯನ್ ಆಯಿಲ್ ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ಆರ್. ನಿತಿನ್ ಗೆರ್ತಿ, ಸಹಾಯಕ ವ್ಯವಸ್ಥಾಪಕ ಮಹೇಶ ಶೆಲಕೆ, ವೆಂಕಟೇಶ್ವರ, ಪ್ರವೀಣಕುಮಾರ ಹಾಗೂ 100ಕ್ಕೂ ಹೆಚ್ಚು ಯುವಕ-ಯುವತಿಯರು ಪಾಲ್ಗೊಂಡಿದ್ದರು.