ಚಿಕ್ಕಬಳ್ಳಾಪುರ: ಅಕ್ರಮ ಅಸ್ತಿ ಸಂಪಾದನೆ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಯಾದರೆ ಇಂದಲ್ಲ ನಾಳೆ ಅನರ್ಹ ಶಾಸಕ ಡಾ.ಕೆ. ಸುಧಾಕರ್ ತಿಹಾರ್ ಜೈಲಿಗೆ ಹೋಗಲಿದ್ದಾರೆಂದು ಮಾಜಿ ಸಚಿವ ಎನ್.ಹೆಚ್. ಶಿವಶಂಕರರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಂದಿ ಹೋಬಳಿಯಲ್ಲಿ ಶುಕ್ರವಾರ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅನರ್ಹ ಶಾಸಕ ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಸುಧಾಕರ್ ಗೆ ಎರಡು ನಾಲಿಗೆ ಇದೆಯೆಂದರು. ಸುಧಾಕರ್ ರಾಜಕಾಣಿಯಲ್ಲ. ವ್ಯಾಪಾರಸ್ಥ, ಡೋಂಗಿ ರಾಜಕಾರಣಿ ಎಂದ ಶಿವಶಂಕರ ರೆಡ್ಡಿ, ಸುಧಾಕರ್ ಎತ್ತಿನ ಹೊಳೆ ಗುತ್ತಿಗೆದಾರರಿಂದ 50 ಕೋಟಿ ಕಿಕ್ ಬ್ಯಾಗ್ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಎಂದು ಹೇಳುವ ಸುಧಾಕರ್ ಶಾಸಕ ರಾಜೀನಾಮೆ ಏಕೆ ಕೊಟ್ಟರು ಎಂದರು. ಸುಧಾಕರ್ ಭ್ರಷ್ಟಾಚಾರದ ಮೂಲಕ ಸಾಕಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿದರೆ ಇಂದಲ್ಲ ನಾಳೆ ತಿಹಾರ್ ಜೈಲಿಗೆ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಸುಧಾಕರ್ ಅಕ್ರಮಗಳ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ದರೆಂದ ಅವರು, ಸುಧಾಕರ್ ಉಪ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಏನಾದರೂ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಇವರು ಏನಾದರೂ ಸಂಪರ್ಕ ಮಾಡಿದ್ದರಾ ಎಂದು ಪ್ರಶ್ನಿಸಿದರು. ಅನರ್ಹಗೊಂಡ ಹತಾಶೆಯಿಂದ ಸುಧಾಕರ್ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆತನ ರಾಜಕೀಯ ಭವಿಷ್ಯ ಈ ಚುನಾವಣೆಯಲ್ಲಿ ಅಂತ್ಯವಾಗಲಿದೆ ಎಂದರು.
ಕೇಂದ್ರದ ವಿರುದ್ದ ಕಿಡಿ
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಹೀನಾಯವಾಗಿದೆ
ಬಿಜೆಪಿ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ತೊಲಗಲಿ, ನಾವು ಅಧಿಕಾರ ನಡೆಸಲು ಸಮರ್ಥವಾಗಿ ಇದ್ದೇವೆ ಎಂದರು.
ಈ ಸಂದರ್ಭದಲ್ಲಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಎನ್.ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಟಿಕೆಟ್ ಆಕಾಂಕ್ಷಿಗಳಾದ ನಂದಿ ಅಂಜಿನಪ್ಪ, ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣಸ್ವಾಮಿ, ಅಡ್ಡಗಲ್ ಶ್ರೀಧರ್, ಕೊಡೇಸ್ ವೆಂಕಟೇಶ್, ಎಸ್.ಪಿ.ಶ್ರೀನಿವಾಸ್, ಮಂಚನಬಲೆ ಇಸ್ಮಾಯಿಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.