Advertisement
ಭಾನುವಾರ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ತುರ್ತು ಸುದ್ದಿಗೋಷ್ಠಿ ನಡೆಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಸುಧಾಕರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್‌ನ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಹೊರಡಿಸಿದ ಆದೇಶ ರಾಜ್ಯ ರಾಜಕೀಯ ವಲಯದಲ್ಲಿ ಮಾತ್ರವಲ್ಲದೇ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ತಂದಿದೆ.
Related Articles
Advertisement
ಸುಧಾಕರ್ ಮುಂದಿನ ರಾಜಕೀಯ ನಡೆ ಕುರಿತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದ 2018ರ ವಿಧಾನಸಭೆಯ ಸಾರ್ವ ತ್ರಿಕ ಚುನಾವಣೆಯಲ್ಲಿ 30 ಸಾವಿರ ಅತ್ಯಧಿಕ ಮತಗಳ ಅಂತರ ದಿಂದ ಸತತ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅತೃಪ್ತಗೊಂಡು ಕೊನೆ ಗಳಿಗೆಯಲ್ಲಿ ಕೈಗೆ ಬಂದ ಮಹತ್ವದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳದೇ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸರ್ಕಾರದ ಪತನಕ್ಕೆ ವರು ಸಹ ಕಾರಣರಾಗಿದ್ದರು.
ರಾಜಕೀಯ ಭವಿಷ್ಯ ಡೋಲಾಯಮಾನ: ಸದ್ಯ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಸುಧಾಕರ್‌ರ ಮುಂದಿನ ರಾಜಕೀಯ ಭವಿಷ್ಯ ಸದ್ಯಕ್ಕೆ ಡೋಲಾಯಮಾನವಾಗಿದೆ. ಅನರ್ಹದ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ ಸಹ ಪ್ರಕರಣ ಇತ್ಯರ್ಥವಾಗುವವರೆಗೂ ಕ್ಷೇತ್ರದಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ಸುಧಾಕರ್ ಸದ್ಯಕ್ಕೆ ರಾಜಕೀಯ ಅನಿಶ್ಚಿತತೆಯ ಕಾರ್ಮೋಡ ದಲ್ಲಿ ಕಾಲ ಕಳೆಯಬೇಕಿದೆ. ಇನ್ನೂ ಸುಧಾಕರ್ ಅನರ್ಹ ಪ್ರಕರಣ ಅವರ ಬೆಂಬಲಿಗರನ್ನು ಚಿಂತೆಗೀಡು ಮಾಡಿದೆ.
ಸ್ಪೀಕರ್ ತೀರ್ಪಿಗೆ ಪರ, ವಿರೋಧ: ಸದ್ಯ ಅತೃಪ್ತ ಶಾಸಕರ ಅನರ್ಹ ಪ್ರಕರಣ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸ್ಪೀಕರ್ ನಡೆ ಬಗ್ಗೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೂಡ ಪರ, ವಿರೋಧ ಚರ್ಚೆ ಆಗುತ್ತಿದೆ. ಮತ್ತೂಂದು ಕ್ಷೇತ್ರದ ಕೆಲ ಹಳೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ಪೀಕರ್ ಆದೇಶ ಸಂತಸ ತಂದಿದೆ. ಸುಧಾಕರ್‌ಗೆ ತಕ್ಕಪಾಠ ಆಗಬೇಕಿದೆ.
ಉತ್ತಮ ಸಂಸದೀಯ ಪಟುಗಳಿಗೆ ಜಿಲ್ಲೆ ಖ್ಯಾತಿ:
ಆವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಹೋರಾಟಗಳ ತವರು. ಒಂದು ಕಾಲಕ್ಕೆ ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚಿದ್ದ ಜಿಲ್ಲೆಯೆಂಬ ಹೆಗ್ಗಳಿಕೆ ಚಿಕ್ಕಬಳ್ಳಾಪುರ, ಕೋಲಾರಕ್ಕಿದೆ. ಅದರಲ್ಲೂ ಉತ್ತಮ ಸಂಸದೀಯ ಪಟುಗಳು ಆಯ್ಕೆಗೊಂಡ ಜಿಲ್ಲೆಗಳು ಎಂಬ ಖ್ಯಾತಿ ಇಂದಿಗೂ ಇದೆ. ಕೋಲಾರದಿಂದ ವೇಮಗಲ್ ಕ್ಷೇತ್ರದ ಶಾಸಕ ಸಿ.ಬೈರೇಗೌಡ, ಮುಳಬಾಗಿಲಿನ ಶಾಸಕರಾಗಿದ್ದ ಎಂ.ವಿ.ಕೃಷ್ಣಪ್ಪ, ಎಂ.ವಿ.ವೆಂಕಟಪ್ಪ, ಗೌರಿಬಿದನೂರು ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಯ್ಯರೆಡ್ಡಿ, ಸಚಿವರಾಗಿದ್ದ ಲಕ್ಷ್ಮಿಪತಿ ಉತ್ತಮ ಸಂಸದೀಯ ಪಟುಗಳೆಂದು ಹೆಸರಾಗಿದ್ದಾರೆ. ಅದೇ ರೀತಿ ಶಿಡ್ಲಘಟ್ಟದ ಕ್ಷೇತ್ರದಲ್ಲಿ ಶಾಸಕರಾಗಿದ್ದ ಮಳ್ಳೂರು ಪಾಪಣ್ಣ, ಚಿಕ್ಕಬಳ್ಳಾಪುರದ ವೆಂಕಟರವಣಪ್ಪ, ಸಿ.ವಿ.ವೆಂಕಟರಾಯಪ್ಪ, ಬಾಗೇಪಲ್ಲಿಯ ಶ್ರೀರಾಮರೆಡ್ಡಿ, ಚಿಂತಾಮಣಿಯ ಟಿ.ಕೆ.ಗಂಗಿರೆಡ್ಡಿ, ಕೆ.ಎಂ.ಕೃಷ್ಣಾರೆಡ್ಡಿರಂತಹ ಅನೇಕ ಶಾಸಕರು ಜಿಲ್ಲೆಯ ರಾಜಕಾರಣದ ಇತಿಹಾಸದಲ್ಲಿ ಉತ್ತಮ ಸಂಸದೀಯ ಪಟುಗಳಾಗಿ ಗಮನ ಸೆಳೆದಿದ್ದಾರೆ.
ಕರೆ ಸ್ವೀಕರಿಸದ ಸುಧಾಕರ್:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಸದ್ಯ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದ ನಾಯಕರ ದೂರಿನ ಮೇರೆಗೆ ಶಾಸಕ ಸ್ಥಾನದಿಂದ ಭಾನುವಾರ ಅನರ್ಹಗೊಂಡಿ ರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ರವರ ಪ್ರತಿಕ್ರಿಯೆ ಪಡೆಯಲು ಅನೇಕ ಬಾರಿ ಡಾ.ಕೆ.ಸುಧಾಕರ್‌ರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಪ್ರತಿಕ್ರಿಯೆಗೆ ಮಾಜಿ ಸಂಸದ ಮೊಯ್ಲಿ ನಕಾರ:
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ರನ್ನು ಸ್ಪೀಕರ್ ಅನರ್ಹಗೊಳಿಸಿರುವ ಕುರಿತು ಕ್ಷೇತ್ರದ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಅವರನ್ನು ಉದಯವಾಣಿ ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದರೆ, ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರಾ ಎಂದರು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಎಲ್ಲವನ್ನು ಹೇಳುವ ಸಮಯ ಬರುತ್ತದೆ. ಕಾದು ನೋಡಿ ಎಂದರು.
ಗಮನ ಸೆಳೆದಿದ್ದ ಉದಯವಾಣಿ ಸರಣಿ ವರದಿ:
● ಕಾಗತಿ ನಾಗರಾಜಪ್ಪ ಚಿಕ್ಕಬಳ್ಳಾಪುರ ಕ್ಷೇತ್ರದ ರಾಜಕೀಯ ವಿದ್ಯಮಾನಗಳ ಕುರಿತು ಶಾಸಕ ಡಾ.ಕೆ.ಸುಧಾಕರ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡು ಕ್ಷೇತ್ರದಲ್ಲಿ ಎದುರಾಗುವ ಉಪ ಚುನಾವಣೆ ಕುರಿತು ಉದಯವಾಣಿ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ಜು.25 ರಂದು ”ಸುಧಾಕರ್‌ಗೆ ಕಾಂಗ್ರೆಸ್ ಬಾಗಿಲು ಬಂದ್” ಶೀರ್ಷಿಕೆಯಡಿ ಹಾಗೂ ಜು.28 ರಂದು ಪ್ರಕಟಗೊಂಡಿದ್ದ ”ಚಿಕ್ಕಬಳ್ಳಾಪುರ: ತಾರಕಕ್ಕೇರಿದ ಉಪ ಚುನಾವಣೆಯ ಲೆಕ್ಕಾಚಾರ” ಶೀರ್ಷಿಕೆಯಡಿ ಮಾಡಲಾಗಿದ್ದ ವಿಶೇಷ ವರದಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು.