ಚಿಕ್ಕಬಳ್ಳಾಪುರ: ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕ್ಷೇತ್ರದ ಅನರ್ಹ ಶಾಸಕ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಕೆ.ಸುಧಾಕರ್, ದಿಢೀರನೇ ಹುದ್ದೆ ತೊರೆದಿರುವುದು ಕುತೂಹಲ ಕೆರಳಿಸಿದೆ.
ಕ್ಷೇತ್ರದಲ್ಲಿ ಶನಿವಾರ ನಡೆದ ಪಿಕಾರ್ಡ್ ಬ್ಯಾಂಕ್‌ನ ವಾರ್ಷಿಕ ಸರ್ವರ ಸಭೆಯಲ್ಲಿ ಭಾಗವಹಿಸಿದ್ದ ಸುಧಾಕರ್, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4 ಗಂಟೆ ಭೇಟಿಯಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಶಾಸಕರಾಗಿದ್ದ ಡಾ.ಕೆ.ಸುಧಾಕರ್, ಹಿಂದಿನ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಲು ಸಾಕಷ್ಟು ಹೋರಾಟ ನಡೆಸಿದ್ದರು. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲಾಗದೇ ಪಕ್ಷದ ವಿರುದ್ಧ ಹಾಗೂ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದರು. ನಿಗಮ ಮಂಡಳಿ ಹುದ್ದೆಯನ್ನು ಪುಟಗೋಸಿಗೆ ಸಹ ಹೋಲಿಸಿದ್ದರು.
ಆದರೆ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದು ಕುಮಾರಸ್ವಾಮಿ ಅವರು ಸುಧಾಕರ್‌ರನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಕಳೆದ ನಾಲ್ಕೈದು ತಿಂಗಳಿಂದ ರಾಜ್ಯ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರವಾಸ ಮಾಡಿ ಮಾಲಿನ್ಯ ನಿಯಂತ್ರಣದ ಬಗ್ಗೆ ಕೆಲಸ ಮಾಡುತ್ತಿದ್ದರು. ಆದರೆ ಶನಿವಾರ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸುಧಾಕರ್ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆಗೆ ಆಗ್ರಹಿಸಿದ್ದ ಕೈ ನಾಯಕರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುಧಾಕರ್, ಮೈತ್ರಿ ಸರ್ಕಾರ ನೇಮಿಸಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಿದ್ದಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಂಡಳಿಗೆ ರಾಜೀನಾಮೆ ಕೊಡಲಿ. ಬೇಕಾದರೆ ಬಿಜೆಪಿಯಿಂದ ಮರು ನೇಮಕವಾಗಲಿ ಎಂದು ವ್ಯಂಗ್ಯವಾಡಿದ್ದರು.
ಕಾನೂನು ಬಾಹಿರ ಎಂದಿದ್ದ ಹೈಕೋರ್ಟ್: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಾ.ಕೆ.ಸುಧಾಕರ್ ನೇಮಕದ ವಿರುದ್ದ ಚಿಕ್ಕಬಳ್ಳಾಪುರದ ನಾಯನಹಳ್ಳಿ ನಿವಾಸಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ಇತ್ತೀಚೆಗೆ ಕೋರ್ಟ್ ಸುಧಾಕರ್ ನೇಮಕ ಕಾನೂನು ಬಾಹಿರ ಎಂದು ಅಭಿಪ್ರಾಯ ಪಟ್ಟು ಈ ಬಗ್ಗೆ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಜೊತೆಗೆ ಮುಂದಿನ ವಿಚಾರಣೆಯನ್ನು ಸೆ.23ಕ್ಕೆ ನಿಗದಿ ಮಾಡಿತ್ತು. ಕೋರ್ಟ್‌ನಲ್ಲಿ ತಮಗೆ ಏನಾದರೂ ಹಿನ್ನಡೆ ಆಗುತ್ತಾ ಎಂಬುದನ್ನು ಅರಿತು ಸುಧಾಕರ್ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ತೊರೆದರಾ ಎಂಬ ಬಗ್ಗೆಯು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.