Advertisement

“ಬಿಜೆಪಿಯಲ್ಲಿ ಸುಧಾಕರ್‌ ಹಾಲಿನಂತೆ ಬೆರೆತ್ತಿದ್ದಾರೆ’

09:30 PM Nov 22, 2019 | Team Udayavani |

ಗೌರಿಬಿದನೂರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್‌ ಬಿಜೆಪಿ ಪಕ್ಷಕ್ಕೆ ಹಾಲಿನ ರೀತಿಯಲ್ಲಿ ಬಂದು ಬೆರೆತಿದ್ದು, ಬಿಜೆಪಿ ಹಾಲಿನಂತಾಗಿದೆ. ಅವರು ಹೊರಗಿನವರು ಎಂಬ ಆತಂಕವಿಲ್ಲದೇ ಅವರ ಗೆಲುವಿಗೆ ಮಂಚೇನಹಳ್ಳಿ ಹೋಬಳಿಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

Advertisement

ತಾಲೂಕಿನ ಮಂಚೇನಹಳ್ಳಿಯಲ್ಲಿ ಜಿಲ್ಲಾ ಬಿಜೆಪಿ ಘಟಕ ಕರೆದಿದ್ದ ಬಿಜೆಪಿ ಸಮನ್ವಯ ಸಮಿತಿ ಸಭೆ ಹಾಗೂ ನ.26ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಚೇನಹಳ್ಳಿಗೆ ಆಗಮಿಸಲಿದ್ದು, ಅದರ ಪೂರ್ವತಯಾರಿ ಬಗ್ಗೆ ಹಮ್ಮಿಕೊಂಡಿದ್ದ ಬಿಜೆಪಿ ಸಮನ್ವಯ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಸಚಿವರಾಗುತ್ತಾರೆ: ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್‌ ಕಾಲೇಜು ಆಗುವುದರಿಂದ ಬಡವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಮಂಚೇನಹಳ್ಳಿ ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿಯಾಗಲಿದೆ. ಸುಧಾಕರ್‌ ಗೆದ್ದ ನಂತರ ಸಚಿವರಾಗಲಿದ್ದು, ಜಿಲ್ಲೆಯ ಅಭವೃದ್ಧಿಗೆ ನಾಂದಿಯಾಗುತ್ತದೆ ಎಂದರು.

ನಿಮ್ಮ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾದಾಗ ಸುಧಾಕರ್‌ ನನ್ನ ಬಳಿ ಸಂತೋಷ ವ್ಯಕ್ತಪಡಿಸಿದ್ದರು. ನನಗೆ ಮಂತ್ರಿಗಿರಿಗಿಂತಲೂ ವೈದ್ಯಕೀಯ ಕಾಲೇಜು, ತಾಲೂಕು ಕೇಂದ್ರ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದು ಮುಖ್ಯ ಎಂದು ಕಳಕಳಿ ವ್ಯಕ್ತಪಡಿಸಿದರು ಎಂದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಲ್ಲಿ ಒಬ್ಬರನ್ನು ಒಬ್ಬರು ಮುಗಿಸುವ ಕೆಲಸ ಮಾಡುತ್ತಿದ್ದಾಗ ಬೇಸತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಬಂದಿದ್ದಾರೆ. ಇದು ಕೇವಲ ಸುಧಾಕರ್‌ಗೆ ಚುನಾವಣೆ ಅಲ್ಲ. ಚಿಕ್ಕಬಳ್ಳಾಪುರ ಜನರ ಸ್ವಾಭಿಮಾನದ ಚುನಾವಣೆ ನಡೆಯುತ್ತಿದೆ ಎಂದರು.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್‌ ಕಾಲೇಜು ಮಾಡಿಸದಿದ್ದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದ್ದರು. ಅದರಂತೆ ಮೆಡಿಕಲ್‌ ಕಾಲೇಜು ತಂದಿದ್ದಾರೆ. ಕಾಲೇಜು ಉಳಿಸಿಕೊಳ್ಳಲು ಸುಧಾಕರ್‌ರನ್ನು ಗೆಲ್ಲಿಸಿಕೊಳ್ಳಬೇಕು ಎಂದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಿಡ್ಲಘಟ್ಟದವರು, ಕಾಂಗ್ರೆಸ್‌ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯವರು. ಸ್ಥಳೀಯರಾದ ಡಾ.ಸುಧಾಕರ್‌ ಅವರನ್ನು ಗೆಲ್ಲಿಸುವ ಮೂಲಕ ನಮ್ಮ ಮಣ್ಣಿನ ಮಗ ಎಂಬುದನ್ನು ಸಾಬೀತು ಪಡಿಸಬೇಕು ಎಂದರು.

Advertisement

ಯಡಿಯೂರಪ್ಪರಿಂದ ಜನಪರ ಆಡಳಿತ: ಬಡವರಿಗೆ ಅಂತ್ಯಸಂಸ್ಕಾರಕ್ಕೆ ಮೊದಲು ಹಣ ನೀಡಿದ್ದು ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ. ನಮ್ಮ ಪಕ್ಷದಲ್ಲಿ 40 ಜನ ಸ್ಟಾರ್‌ ಕ್ಯಾಂಪೇನರ್‌ಗಳಿದ್ದಾರೆ. ಬೇರೆ ಪಕ್ಷವೊಂದರಲ್ಲಿ ಒಂದೇ ಕುಟಂಬದವರೇ ಸ್ಟಾರ್‌ ಕ್ಯಾಂಪೇನರ್‌ ಆಗಿದ್ದಾರೆ ಎಂದು ಲೇವಡಿ ಮಾಡಿದರು. ನ.26ರರಂದು 3 ಗಂಟೆಗೆ ಸಿಎಂ ಯಡಿಯೂರಪ್ಪನವರು ಮಂಚೇನಹಳ್ಳಿಗೆ ಬರುತ್ತಾರೆ. ಅಂದು ನಿಮ್ಮ ಶಕ್ತಿ ಪ್ರದರ್ಶನ ಮಾಡುವುದರ ಜೊತೆಗೆ ಸುಧಾಕರ್‌ ಗೆಲುವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕಿ ಎನ್‌.ಜ್ಯೋತಿರೆಡ್ಡಿ, ಮುಖಂಡರಾದ ಎನ್‌.ಎಂ.ರವಿನಾರಾಯಣರೆಡ್ಡಿ, ರಿಯಾಜ್‌, ಬಾಲಕೃಷ್ಣ, ಶೋಭಾ, ಮುರಳೀಧರ್‌, ಶಿವಕುಮಾರ್‌, ರಾಜಶೇಖರ್‌, ಯತೀಶ್‌, ಪುರಜಗನ್ನಾಥ್‌, ಹನುಮೇಗೌಡ, ನಾರಾಯಣಸ್ವಾಮಿ, ಎಸ್‌.ವಿ.ಸುಬ್ಟಾರೆಡ್ಡಿ ಮುಂತಾದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next