Advertisement
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ಗಾಂಧಿ ಈ ಹಿಂದೆ ರಾಜ್ಯದ ಹಲವು ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವ ಸಂದರ್ಭದಲ್ಲಿ ಶಾಸಕ ಸುಧಾಕರ್‌ರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶಿಫಾರಸ್ಸು ಮಾಡಿದ್ದರು. ಆದರೆ ಕುಮಾರಸ್ವಾಮಿ, ಸುಧಾಕರ್ ನೇಮಕದ ಕಡತಕ್ಕೆ ಸಹಿ ಮಾಡದೇ ನಿವೃತ್ತ ಐಎಎಸ್ ಅಧಿಕಾರಿ ಜಯರಾಮ್ ಎಂಬುವರನ್ನು ಮಂಡಳಿ ಅಧ್ಯಕ್ಷರನ್ನಾಗಿ 3 ತಿಂಗಳ ಹಿಂದೆ ನೇಮಕ ಮಾಡಿದ್ದರು.
Related Articles
Advertisement
ಅತೃಪ್ತರಲ್ಲಿ ಬಣದಲ್ಲಿದ್ದ ಸುಧಾಕರ್: ಮಂತ್ರಿ ಸ್ಥಾನವೂ ಸಿಗದೇ ಇತ್ತ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವು ಕೈ ತಪ್ಪಿದ್ದರಿಂದ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದ ಶಾಸಕರು ಮಂತ್ರಿ ಸ್ಥಾನ ಸಿಗದಿದ್ದರಿಂದ ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಸುಧಾಕರ್ ಬಿಜೆಪಿಯ ಆಪರೇಷನ್ ಕಮಲದ ಪಟ್ಟಿಯಲ್ಲಿದ್ದರು. ಒಮ್ಮೆ ಮುಂಬೈಗೂ ಹೋಗಿ ಬಂದಿದ್ದರು.
ಆದರೆ ಇತ್ತೀಚೆಗೆ ವಿಸ್ತರಣೆಗೊಂಡ ಮೂರನೇ ಹಂತದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷೇತರ ಶಾಸಕರಿಗೆ ಮಾತ್ರ ಅವಕಾಶ ನೀಡಿದ್ದಕ್ಕೆ ಪಕ್ಷದ ರಾಜ್ಯ ನಾಯಕರ ವಿರುದ್ಧ ಗರಂ ಆಗಿ ತಮ್ಮ ತೀರ್ಮಾನವನ್ನು ಕ್ಷೇತ್ರದ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದರು.
ಕಳೆದ ನಾಲ್ಕೈದು ದಿನಗಳಿಂದ ಶಾಸಕರ ತಂದೆ ಪಿ.ಎನ್.ಕೇಶವರೆಡ್ಡಿ ಮಗನ ಪರ ಸರಣಿ ಸಭೆಗಳನ್ನು ನಡೆಸಿ ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಅಭಿಪ್ರಾಯ ಪಡೆಯುತ್ತಿದ್ದರು. ಸುಧಾಕರ್‌ರ ಅತೃಪ್ತಿಯನ್ನು ತಣ್ಣಾಗಿಸಲು ಸಿಎಂ ಕುಮಾರಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ತಾವೇ ಮೂರು ತಿಂಗಳ ಹಿಂದೆ ನೇಮಕ ಮಾಡಿದ್ದ ಜಯರಾಮ್‌ರಿಂದ ರಾಜೀನಾಮೆ ಪಡೆದು ಈಗ ಸುಧಾಕರ್‌ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಮೂರು ವರ್ಷ ಅಧಿಕಾರಾವಧಿ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಸುಧಾಕರ್‌ಗೆ ಅಧಿಕಾರ ಅವಧಿ ಕೇವಲ ಮೂರು ವರ್ಷ. ಈ ಕುರಿತು ಅವರೇ ಸ್ಪಷ್ಟಪಡಿಸಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನನ್ನನ್ನು ಮೂರು ವರ್ಷದ ಅಧಿಕಾರಾವಧಿಗೆ ನೇಮಕ ಮಾಡಲಾ ಗಿದ್ದು, ಈ ಅವಧಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯವೈಖರಿ ರಾಜ್ಯದ ಇತಿಹಾಸ ಪುಟದಲ್ಲಿ ದಾಖಲಾಗಬೇಕೆಂದರು.
ಹುದ್ದೆಗೆ ಅಪೇಕ್ಷೆ ಪಟ್ಟವನಲ್ಲ
ಚಿಕ್ಕಬಳ್ಳಾಪುರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಾಗಿ ಬರಬೇಕೆಂದು ಎಂದೂ ಕೂಡ ನಾನು ಅಪೇಕ್ಷೆ ಪಟ್ಟ ವನಲ್ಲ. ವೃತ್ತಿಯಲ್ಲಿ ವೈದ್ಯನಾಗಿರುವ ನನಗೆ ಈ ಹುದ್ದೆ ಸಿಕ್ಕಿರುವುದು ಸಂತಸ ತಂದಿದೆ. ಶಾಸಕನಿಗೆ ಸಿಕ್ಕಿರುವುದು ಇದೇ ಮೊದಲು. ಮಂಡಳಿಗೆ ಉತ್ತಮ ಹೆಸರು ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ಕಚೇರಿಯಲ್ಲಿ ಅಧಿಕಾರ ಸ್ವೀಕಾರ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೆ ಇದೇ ದಾರಿಯಲ್ಲಿ ಹೋಗಬೇಕೆಂದು ನಿರ್ಧರಿಸಿರುವುದಿಲ್ಲ. ಹಾಗಾಂತ ಯಾವುದೇ ದಾರಿ ಮನುಷ್ಯನಿಗೆ ಶಾಶ್ವತವಾಗುವುದಿಲ್ಲ ಎಂದರು.
ನಮಗೆ ಗೊತ್ತಿಲ್ಲದಂತೆ ಅನೇಕ ದಾರಿಗಳು ಬದಲಾಗುತ್ತವೆ. ನಮ್ಮ ಪ್ರಯಾಣದ ತಾಣಗಳು ಬದಲಾಗುತ್ತವೆ. ಒಬ್ಬ ವೈದ್ಯನಾಗಿ, ಕಾರ್ಪೋರೆಟ್ ಸಂಸ್ಥೆಯಲ್ಲಿ 15 ಸಾವಿರ ಉದ್ಯೋಗಿಗಳು ಕೆಲಸ ಮಾಡಿದ ಸಂಸ್ಥೆಯಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅದೇ ರೀತಿ ವಿದೇಶದಲ್ಲಿ ಕೆಲಸ ಮಾಡಲಿಕ್ಕೆ ನನ್ನ ರಾಜಕೀಯ ಗುರುಗಳಾದ ಎಸ್.ಎಂ.ಕೃಷ್ಣ ರವರು ಶ್ರೀಲಂಕಾದ ವಾಣಿಜ್ಯ ಪ್ರತಿನಿಧಿಯಾಗಿ ನನ್ನನ್ನು ನೇಮಕ ಮಾಡಿದ್ದರು.
ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದರು. ಭವಿಷ್ಯದ ದಿನಗಳಲ್ಲಿ ದೆಹೆಲಿಗೆ ಬಂದಿರುವ ಪರಿಸ್ಥಿತಿ ಬೆಂಗಳೂರಿಗೆ ಬರಬಾರದು. ಈ ಬಗ್ಗೆ ನಾವು ಈಗಲೇ ಎಚ್ಚೆತ್ತಿಕೊಳ್ಳಬೇಕಿದೆ ಎಂದರು. ಬೆಂಗಳೂರು ಜನ ಬಳಸಿ ಬಿಡುವ ತ್ಯಾಜ್ಯ ನೀರನ್ನು ಕೋಲಾರ, ಚಿಕ್ಕಬಳ್ಳಾಫುರ ಜಿಲ್ಲೆಗಳಿಗೆ ಹರಿಸುವ ಕೆಲಸ ಆಗುತ್ತಿದೆ. ಆದ್ದರಿಂದ ಬೆಂಗಳೂರಿನಲ್ಲಿ ಮೊದಲು ಪರಿಸರ ಮಾಲಿನ್ಯ ತಡೆಯಬೇಕಿದೆ. ಈ ನಿಟ್ಟಿನಲ್ಲಿ ಸದಸ್ಯರ, ಕಾರ್ಯದರ್ಶಿಗಳ ಸಂಪೂರ್ಣ ಸಹಕಾರ ಬೇಕಿದೆ ಎಂದರು.
ಜಯರಾಮ್‌ಗೆ ಒಳ್ಳೆಯದಾಗಲಿ: ಮೂರು ತಿಂಗಳಿಂದ ಜಯ ರಾಮ್ ಮಂಡಳಿ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆ ಸಿಗಲಿ ಎಂದು ಶಾಸಕರು ಹಾರೈಸಿದರು.