Advertisement

ಸುಧಾಕರ್‌ ಪಕ್ಷದ್ರೋಹಿ, ಊಸರವಳ್ಳಿ ರಾಜಕಾರಣಿ

09:59 PM Nov 15, 2019 | Team Udayavani |

ಚಿಕ್ಕಬಳ್ಳಾಪುರ: ಪಕ್ಷಾಂತರ ಮಾಡುವ ಮೂಲಕ ಪಕ್ಷ ದ್ರೋಹ ಮಾಡಿರುವ ಊಸರವಳ್ಳಿ ರಾಜಕಾರಣಿ ಸುಧಾಕರ್‌ರನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಸ್ವಾಭಿಮಾನವನ್ನು ಉಳಿಸಬೇಕೆಂದು ಕಾಂಗ್ರೆಸ್‌ ಪಕ್ಷದ ಚುನಾವಣಾ ಉಸ್ತುವಾರಿಗಳಾದ ಎನ್‌.ಹೆಚ್‌.ಶಿವಶಂಕರರೆಡ್ಡಿ ಹಾಗೂ ಹಿರಿಯ ಶಾಸಕ ವಿ.ಮುನಿಯಪ್ಪ ನುಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲಾ ರೀತಿಯ ಅಧಿಕಾರ ಪಡೆದು ಪಕ್ಷಕ್ಕೆ ದ್ರೋಹ ಮಾಡಿರುವ ಸುಧಾಕರ್‌ಗೆ ಕ್ಷೇತ್ರದ ಮತದಾರರು ತಕ್ಕಪಾಠ ಕಲಿಸಲಿದ್ದಾರೆ. ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿದ್ದೇನೆ ಎನ್ನುವುದು ಸುಳ್ಳು. ನಾವು ಆಡಳಿತ ಪಕ್ಷದಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ ಎಂದರು.

ಚುನಾವಣೆ ಗಿಮಿಕ್‌: ಸುಧಾಕರ್‌, ಹಣ, ಅಧಿಕಾರಕ್ಕಾಗಿ ಪಕ್ಷಾಂತರ ಆಗಿರುವುದು ಸ್ಪಷ್ಟ. ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆಗಲೇ ಮೆಡಿಕಲ್‌ ಕಾಲೇಜು ಸಹ ಮಂಜೂರಾಗಿತ್ತು. ಆದರೆ ಚುನಾವಣೆ ಗಿಮಿಕ್‌ಗಾಗಿ ಸಿಎಂ ಯಡಿಯೂರಪ್ಪರನ್ನು ಕರೆದು ಅಡಿಗಲ್ಲು ಹಾಕಿಸಿದ್ದಾರೆ ಎಂದು ಶಿವಶಂಕರರೆಡ್ಡಿ ಟೀಕಿಸಿದರು.

ಭೂಮಿಗೆ ಬೆಲೆ ಹೆಚ್ಚಳ: ಜಿಲ್ಲಾಸ್ಪತ್ರೆಯನ್ನು 16 ಕಿ.ಮೀ ದೂರದಲ್ಲಿ ಸ್ಥಾಪಿಸುವ ಉದ್ದೇಶ ಏನು, ತಮ್ಮ ಹಾಗೂ ಸ್ನೇಹಿತರ ಜಮೀನುಗಳಿಗೆ ಬೆಲೆ ಹೆಚ್ಚಾಗಬೇಕಾ ಎಂದು ಪ್ರಶ್ನಿಸಿದರು. ವೈಯಕ್ತಿಕ ಲಾಭ, ಆಸೆಗಾಗಿ ಮೆಡಿಕಲ್‌ ಕಾಲೇಜು ನಗರದಲ್ಲಿ ಸ್ಥಾಪಿಸುತ್ತಿಲ್ಲ. ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗಲ್ಲ. ಇವರ ಅಭಿವೃದ್ಧಿ ಮಂತ್ರ ನಾನು ಖುದ್ದು ನೋಡಿದ್ದೇನೆ ಎಂದರು.

ಮುಖ್ಯ ರಸ್ತೆಗಳು ಬಿಟ್ಟರೆ ಏನು ಅಭಿವೃದ್ಧಿ ಆಗಿಲ. ನಗರದ ಚರಂಡಿ, ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಅಧಿಕಾರಿಗಳ ಮೂಲಕವೇ ಸುಧಾಕರ್‌ ಭ್ರಷ್ಟಾಚಾರ ನಡೆಸುತ್ತಾರೆ. ಇದಕ್ಕೆ ಸ್ಪಷ್ಟ ನಿರ್ದೇಶನ ಪ್ರಾಧಿಕಾರ ಕಚೇರಿ ಮೇಲೆ ನಡೆದ ಎಸಿಬಿ ದಾಳಿ ಎಂದರು.

Advertisement

ಬ್ಲಾಕ್‌ಮೇಲ್‌ ರಾಜಕಾರಣಿ: ಕ್ಷೇತ್ರದಲ್ಲಿ ತಮ್ಮ ಪರ ಇಲ್ಲದ ಮುಖಂಡರನ್ನು ಬ್ಲಾಕ್‌ಮೇಲ್‌ ಮಾಡಿ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಭಯ, ಆತಂಕ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹುಡುಗ ಅಂತ ಬೆಳೆಸಿದರು. ಸಿದ್ದರಾಮಯ್ಯ ಇಲ್ಲದೇ ಹೋಗಿದ್ದರೆ ಈತ ಎಲ್ಲಿರುತ್ತಿದ್ದ ಎಂದು ದೂರಿದರು.

ಹಿರಿಯ ಕಾಂಗ್ರೆಸ್‌ ಶಾಸ ವಿ.ಮುನಿಯಪ್ಪ ಮಾತನಾಡಿ, ಸುಧಾಕರ್‌ 10 ವರ್ಷದಿಂದ ಪಕ್ಷವನ್ನು ದುರ್ಬಳಕೆ ಮಾಡಿಕೊಂಡು ಎಲ್ಲರಿಗೂ ಮೋಸ ಮಾಡಿದ್ದಾನೆ. ಆತ ರಾಜಕಾರಣಕ್ಕೆ ಸರಿ ಅಲ್ಲ. ಜನ ಸಾಮಾನ್ಯರೊಂದಿಗೆ ಬೆರೆಯದೇ ಸದಾ ಆಕಾಶದಲ್ಲಿ ಬಂದು ಹೋಗುವ ರಾಜಕಾರಣಿ ಏತಕ್ಕೆ ಬೇಕೆಂದರು. ಚುನಾವಣೆ ಸತ್ಯ ಹಾಗೂ ಅಸತ್ಯದ ಮೇಲೆ ನಡೆಯಲಿದೆ. ಜನ ಅಕ್ರಮ ದುಡ್ಡಿನ ಮುಖ ನೋಡದೇ ಅರ್ಹತೆ ನೋಡಿ ಮತ ಹಾಕಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ, ಅನುಸೂಯಮ್ಮ, ಜಿ.ಹೆಚ್‌.ನಾಗರಾಜ್‌, ಯಲುವಹಳ್ಳಿ ರಮೇಶ್‌, ಗಂಗರೇಕಾಲುವೆ ನಾರಾಯಣಸ್ವಾಮಿ, ಕೆ.ವಿ.ನವೀನ್‌ ಕಿರಣ್‌, ಜಿಪಂ ಸದಸ್ಯ ಮಂಚೇನಹಳ್ಳಿ ಪ್ರಕಾಶ್‌, ಮಂಚನಬಲೆ ಇಸ್ಮಾಯಿಲ್‌, ಲಕ್ಷ್ಮಣ್‌, ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮೋಹನರೆಡ್ಡಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಅವುಲರೆಡ್ಡಿ, ಪ್ರಕಾಶ್‌, ಸುರೇಶ್‌, ಮುನೀಂದ್ರ ಉಪಸ್ಥಿತರಿದ್ದರು.

ಡಾ.ಕೆ.ಸುಧಾಕರ್‌ ಪಕ್ಷಾಂತರಕ್ಕೆ ಕ್ಷೇತ್ರದ ಅಭಿವೃದ್ಧಿ ವಿಚಾರ ಕಾರಣವಲ್ಲ. ಹಣ, ಅಧಿಕಾರವೇ ಕಾರಣ. ಸುಧಾಕರ್‌ ಮತ್ತೆ ಗೆದ್ದು ಬಂದರೆ ಇಡೀ ಜಿಲ್ಲೆ ಹಾಳಾಗುತ್ತದೆ. ಕೆಟ್ಟ ಸಂಪ್ರದಾಯಕ್ಕೆ ಜನ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಜನತೆ ಕ್ಷೇತ್ರದ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು. ಸುಧಾಕರ್‌ರಂತಹ ಊಸರವಳ್ಳಿ ರಾಜಕಾರಣಿಯನ್ನು ರಾಜ್ಯದಲ್ಲಿ ನೋಡಿಲ್ಲ.
-ಎನ್‌.ಹೆಚ್‌.ಶಿವಶಂಕರರೆಡ್ಡಿ, ಮಾಜಿ ಸಚಿವರು

ಜನ ಸಾಮಾನ್ಯರು ಅಥವಾ ರೈತರು ಆಕಸ್ಮಿಕವಾಗಿ ಹಸ್ತಲಾಘವ ಮಾಡಿದರೆ ತಕ್ಷಣ ಹೋಗಿ ಬಿಸಿ ನೀರಿನಲ್ಲಿ ಕೈ ತೊಳೆದುಕೊಳ್ಳುವಂತಹ ರಾಜಕಾರಣಿ ಸುಧಾಕರ್‌. ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಿರುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬೇಕಾ? ಬ್ಲಾಕ್‌ಮೇಲ್‌ ರಾಜಕಾರಣ ಯಾರಿಗೂ ತರವಲ್ಲ. ರಾಜಕೀಯ ಸಂಚು ರೂಪಿಸುವ ಇಂತಹ ವ್ಯಕ್ತಿ ಹುಡುಕಿದರೂ ಸಿಗಲ್ಲ.
-ವಿ.ಮುನಿಯಪ್ಪ, ಶಿಡ್ಲಘಟ್ಟ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next