ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ.ಕೆ.ಸುಧಾಕರ್ ಬ್ಲಾಕ್ ಮೇಲ್ ರಾಜಕಾರಣದಲ್ಲಿ ನಿಪುಣರಿದ್ದು, ಬ್ಲಾಕ್‌ಮೇಲ್ರಾ ಜಕಾರಣವನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳುವುದರ ಬದಲು ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿ ಕೊಳ್ಳಲಿ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್. ಆಂಜನೇಯರೆಡ್ಡಿ ಟೀಕಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಸಿಎಂ ಆಗಿದ್ದಾಗ ಬ್ಲಾಕ್ ಮೇಲ್ ಮಾಡಿದ. ಅದೇ ರೀತಿ ಈಗ ಸಿಎಂ ಯಡಿ ಯೂರಪ್ಪನ್ನು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಶಾಶ್ವತ ನೀರಾವರಿಗೆ ಮಾಡಲಿ: ರಾಜಕಾರಣಿಗೆ ಬ್ಲಾಕ್ ಮೇಲ್ ಅಥವಾ ಒತ್ತಡ ಹಾಕುವ ಕೆಲಸ ಮಾಡಬೇಕು. ಆದರೆ ಸ್ವಾರ್ಥಕ್ಕಾಗಿ ಬ್ಲಾಕ್ ಮೇಲ್ ಮಾಡುವುದಲ್ಲ. ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬ್ಲಾಕ್ ಮೇಲ್ ಮಾಡಲಿ ಎಂದು ತಾಕೀತು ಮಾಡಿದರು.
ಅಂತರ್ಜಲ ವೃದ್ಧಿಗೆ ಬೇಕಾದ ರೀತಿಯಲ್ಲಿ ವೈಜ್ಞಾನಿಕವಾದ ನಿಖರವಾದ ಯೋಜನೆಗಳನ್ನು ಜಾರಿಗೆ ತರಬೇಕೆಂದರು. ಕೆರೆ, ಕುಂಟೆಗಳ ಪುನಶ್ಚೇನಕ್ಕೆ ಆದ್ಯತೆ ಕೊಡಬೇಕಿದೆ. ವಿಶೇಷ ಪ್ಯಾಕೇಜ್ ಮೂಲಕ ಬತ್ತಿ ಹೋಗಿರುವ ಕೊಳವೆ ಬಾವಿಗಳ ಜಲಮರುಪೂರ್ಣಕ್ಕೆ ಕ್ರಮ ವಹಿಸ ಬೇಕೆಂದರು. ಡಾ.ಪರಮಶಿವಯ್ಯ ವರದಿ ಜಾರಿ ಯಾಗಬೇಕೆಂದರು.
ಪರಿಶೀಲನೆಗೆ ಒಳಪಡಿಸಿಲ್ಲ: ಕಳೆದ 9 ವರ್ಷ ಗಳಿಂದ ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಸಾವಿ ರಾರು ಕೋಟಿ ರೂ. ಖುರ್ಚ ಮಾಡಿದ್ದು ಬಿಟ್ಟರೆ ಜಿಲ್ಲೆಗೆ ಹನಿ ನೀರು ಕೂಡ ಬಂದಿಲ್ಲ. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾದದ್ದು ಎಂದು ಪದೇ ಪದೆ ಹೋರಾಟ ಸಮಿತಿ ಹೇಳುತ್ತಿದ್ದರೂ ಸರ್ಕಾರ ಯೋಜನೆಯನ್ನು ಪುನರ್ ಪರಿಶೀಲಿಸುವುದಾಗಲಿ ಅಥವಾ ತಜ್ಞರ ಪರಿಶೀಲನೆಗೆ ಒಳಪಡಿಸುವುದಾಗಲಿ ಇದುವರೆಗೂ ಮಾಡಿಲ್ಲ ಎಂದರು.
ನೀರಾವರಿ ಹೋರಾಟ ಸಮಿತಿ ಮುಖಂಡರಾದ ಮಳ್ಳೂರು ಹರೀಶ್, ಎಸ್.ಲಕ್ಷ್ಮಯ್ಯ, ಸುಷ್ಮಾ ಶ್ರೀನಿವಾಸ್, ನಾಗದೇನಹಳ್ಳಿ ನಾರಾಯಣಸ್ವಾಮಿ, ಆನಂದಪ್ಪ ಮತ್ತಿತರರು ಉಪಸ್ಥಿತರಿದ್ದರು.