Advertisement
ಲೋಕೋಪಕಾರಿಯಾದ ಇವರು ಟೊರೊಂಟೊದಲ್ಲಿ ನಡೆದ ಭವ್ಯವಾದ ಇಂಡೋ-ಕೆನಡಿಯನ್ ಗಾಲಾದಲ್ಲಿ ಪ್ರತಿಷ್ಠಿತ ಗ್ಲೋಬಲ್ ಇಂಡಿಯನ್ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯರಿಗೆ ಖಂಡಿತವಾಗಿಯೂ ಹೆಮ್ಮೆಯ ವಿಚಾರ. ಸುಧಾ ಮೂರ್ತಿ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡ ಭಾರತದ ಮೊದಲ ಮಹಿಳೆಯೂ ಹೌದು. 2014ರಲ್ಲಿ ಸುಧಾ ಮೂರ್ತಿಯವರ ಪತಿ ನಾರಾಯಣ ಮೂರ್ತಿಯವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 2023ರಲ್ಲಿ ಈ ಪ್ರಶಸ್ತಿ ಸುಧಾ ಮೂರ್ತಿಯವರ ಮುಡಿಗೇರಿದೆ. ಹಾಗಾಗಿ ಇವರು ಗ್ಲೋಬಲ್ ಇಂಡಿಯನ್ ಪ್ರಶಸ್ತಿ ಪಡೆದ ಭಾರತ ಮೊದಲ ದಂಪತಿ ಎಂಬ ಮನ್ನಣೆಗೂ ಪಾತ್ರರಾಗಿದ್ದಾರೆ.
Related Articles
Advertisement
ಸುಧಾ ಮೂರ್ತಿಯವರು ಮೊದಲಿನಿಂದಲೂ ಅನೇಕ ಸಮಾಜ ಸುಧಾರಣಾ ಕಾರ್ಯಗಳಿಗೆ ಹೆಸರಾದವರು. ಮಹಿಳೆಯರು ಮೌಲ್ಯವರ್ಧಿತ ಶಿಕ್ಷಣವನ್ನು ಪಡೆಯಬೇಕು ಹಾಗೂ ಅವರನ್ನು ಸಮಾಜದಲ್ಲಿ ಸಬಲರನ್ನಾಗಿ ಮಾಡಬೇಕು ಎಂಬುವುದು ಅವರ ಗುರಿ. ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಪ್ರಸ್ತುತ ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತಿತರ ವಿಷಯಗಳ ಕುರಿತು ಜಾಗೃತಿ ಮೂಡಿಸುವಲ್ಲಿಯೂ ನಿರತರಾಗುತ್ತಿದ್ದಾರೆ. ಸ್ವಚ್ಛ ಭಾರತದ ಅಗತ್ಯತೆಯನ್ನು ಅರ್ಥಮಾಡಿಕೊಂಡಿರುವ ಅವರು, ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುತ್ತಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುವುದರಲ್ಲೂ ಉತ್ಸಾಹದಿಂದ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ.
ಸುಧಾ ಮೂರ್ತಿಯವರು ಮಾಡುತ್ತಿರುವ ಸಮಾಜಕಾರ್ಯ ಒಂದಲ್ಲ ಎರಡಲ್ಲ. ಅವರು ಮಾಡಿದ ಕಾರ್ಯಗಳನ್ನು ಎಂದೂ ಹೇಳಿಕೊಂಡವರಂತೂ ಅಲ್ಲವೇ ಅಲ್ಲ. ಇವರನ್ನು ನೋಡಿದಾಗ ಇವರ ಮಾತುಗಳನ್ನು ಆಲಿಸಿದಾಗ ಒಬ್ಬ ಶ್ರೀಮಂತ ನಿಜವಾಗಿಯೂ ಇಷ್ಟು ಸರಳವಾಗಿರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದಂತೂ ನಿಜ. ತಮ್ಮ 73ರ ಇಳಿವಯಸ್ಸಿನಲ್ಲಿಯೂ, ಬಿಡುವಿಲ್ಲದ ಕೆಲಸದ ನಡುವೆಯೂ ನಾನಾ ಕ್ಷೇತ್ರಗಳಲ್ಲಿನ ಅವರ ಆಸಕ್ತಿ, ಸಮಾಜಕಾರ್ಯಕ್ಕಾಗಿ ಅವರ ತೊಡಗಿಸಿಕೊಳ್ಳುವಿಕೆ, ದೇಶದ ಅಭಿವೃದ್ಧಿಯತ್ತ ಅವರ ಉದಾತ್ತತೆ ಮೆಚ್ಚುವಂತಹದ್ದೇ ಸರಿ. ನಮ್ಮ ಜೀವನ ನೆಲೆಹೊಂದಿದರೆ ಸಾಕು, ನಾನೂ ನನ್ನ ಕುಟುಂಬ ಸುಖವಾಗಿದ್ದರೆ ಅದುವೇ ಸಂತೋಷ. ದಾನ ಧರ್ಮ ಮಾಡಿ ನಮಗೇನು ಸಾಧಿಸಬೇಕಿದೆ ಎಂದು ಕೈ ಕಟ್ಟಿ ಕೂರುತ್ತಿದ್ದರೆ ಬಹುಷಃ ಸುಧಾ ಮೂರ್ತಿಯವರಂತಹ ಜ್ಞಾನದ ದೀವಿಗೆ ನಮಗೆ ಸಿಗುತ್ತಿರಲಿಲ್ಲ. ನಾನು ನನ್ನದು ಎಂದು ಅವರು ಒಮ್ಮೆಯೂ ಯೋಚಿಸಿದವರಲ್ಲ ಎಂಬುವುದು ಅವರ ಸಮಾಜ ಕಾರ್ಯಗಳಿಂದಲೇ ತಿಳಿಯುತ್ತದೆ. ಪ್ರತಿಯೊಬ್ಬರೂ ಸಮಾಜದ ಚಿಂತನೆಯನ್ನು ಮಾಡಿದರೆ ದೇಶ ಅಭಿವೃದ್ಧಿಯಾಗುವುದಂತೂ ಖಂಡಿತ. ಜಗತ್ತಿಗೆ ಮಾದರಿಯಾದ ಇವರಿಗೆ ದೇವರು ಇನ್ನಷ್ಟು ಶಕ್ತಿ, ಅರೋಗ್ಯ ವನ್ನು ದಯಪಾಲಿಸಲಿ.
ಲಾವಣ್ಯ. ಎಸ್.
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು