Advertisement

ಹಸಿದವರಿಗೆ ಅನ್ನ ನೀಡುವ ‘ಸುಧಾ’

02:33 PM May 18, 2019 | Suhan S |

ಕೊಪ್ಪಳ: ನಿತ್ಯವೂ ಗಂಟೆಗಟ್ಟಲೇ ಮೊಬೈಲ್ನಲ್ಲೇ ಕಾಲಹರಣ ಮಾಡುವ ಯುವಕರ ಮಧ್ಯೆಯೂ ಇಲ್ಲೊಂದು ಯುವಪಡೆ ಸಾಮಾಜಿಕ ಕೆಲಸಕ್ಕೆ ಟೊಂಕ ಕಟ್ಟಿದೆ. ಸಭೆ-ಸಮಾರಂಭಗಳಲ್ಲಿ ಉಳಿದ ಅನ್ನವನ್ನು ಹಸಿದವರಿಗೆ, ಬಡವರಿಗೆ, ನಿರ್ಗತಿಕರಿಗೆ ವಿತರಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದೆ.

Advertisement

ಹೌದು. ಇಲ್ಲಿಯ ಸುಧಾ ಕಲ್ಚರಲ್ ಅಕಾಡೆಮಿ ಇಂತಹ ಮಹತ್ಕಾರ್ಯ ಮುನ್ನಡೆಸಿಕೊಂಡು ಹೊರಟಿದೆ. ಜಿಲ್ಲೆಯ ಜನತೆಗೆ ದುಡಿಮೆ ಇಲ್ಲ, ಉದ್ಯೋಗವೂ ಅಷ್ಟಕ್ಕಷ್ಟೆ. ತುತ್ತಿನ ದುಡಿಮೆಗಾಗಿ ಇಂದಿಗೂ ಪರದಾಡುವ ಪರಿಸ್ಥಿತಿಯಿದೆ. ಅಲ್ಲದೇ ಅನಾಥರು, ಬಡ ಮಕ್ಕಳು, ನಾನಾ ಕಾರಣಕ್ಕೆ ಮನೆ ತೊರೆದು ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ತಾಣಗಳಲ್ಲಿ ನಿತ್ಯವೂ ಊಟಕ್ಕಾಗಿ ಜನರ ಮುಂದೆ ಕೈ ಚಾಚಿ ಬೇಡುವವರಿದ್ದಾರೆ. ಇದನ್ನೆಲ್ಲ ಮನಗಂಡ ಬಸವರಾಜ ಮರಡೂರು, ಬಿ.ಎನ್‌. ಹೊರಪೇಟೆ ಸೇರಿದಂತೆ ಇತರೆ ಯುವಕರು ಸೇರಿಕೊಂಡು ನಿರ್ಗತಿಕರಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ನಗರ ಪ್ರದೇಶದಲ್ಲಿ ಸಭೆ-ಸಮಾರಂಭ-ಮದುವೆ ಸೇರಿ ಇನ್ನಿತರ ಕಾರ್ಯಕ್ರಮಗಳಲ್ಲಿ ಉಳಿಯುವ ಅನ್ನ, ಸಾಂಬಾರು, ಸಿಹಿ ಪದಾರ್ಥವನ್ನು ವ್ಯರ್ಥವಾಗಿ ಬಿಸಾಡುತ್ತಾರೆ. ಇದನ್ನರಿತ ಈ ಯುವಪಡೆ ಅನ್ನ ಕಸದ ಬುಟ್ಟೆ ಸೇರುವ ಬದಲು ಹಸಿದ ಹೊಟ್ಟೆ ಸೇರಿದರೆ ಅನ್ನಕ್ಕೂ ಬೆಲೆ ಸಿಗಲಿದೆ, ಹಸಿದ ಹೊಟ್ಟೆಯೂ ತಣ್ಣಗಾಗಲಿದೆ ಎನ್ನುವುದನ್ನು ಅರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೊಂದು ಮೂರ್ತರೂಪ ಕೊಡಬೇಕೆಂದು ನಿಶ್ಚಯಿಸಿ ಕೆಲವೇ ತಿಂಗಳ ಹಿಂದಷ್ಟೆ ‘ಸುಧಾ ಕಲ್ಚರಲ್ ಅಕಾಡೆಮಿ’ ಸಂಸ್ಥೆ ಸ್ಥಾಪಿಸಿ ಇತ್ತೀಚೆಗೆ ಮೇ 12 ವಿಶ್ವ ಅಮ್ಮಂದಿರ(ತಾಯಂದಿರ) ದಿನಾಚರಣೆಯಂದೇ ಸಂಸ್ಥೆ ಉದ್ಘಾಟಿಸಿದೆ.’ಹಸಿವು ಇದ್ದ ಕಡೆ ನಮ್ಮ ನಡೆ’ಎನ್ನುವ ಧ್ಯೇಯ ವಾಕ್ಯವೇ ನಾಮಾಂಕಿತವನ್ನಿಟ್ಟು ಫೇಸ್‌ಬುಕ್‌-ವಾಟ್ಸ್‌ಆ್ಯಪ್‌ ಗ್ರುಪ್‌ನಲ್ಲಿ ಶೇರ್‌ ಮಾಡಿದೆ.

ಯುವಪಡೆಯ ಕಾರ್ಯಕ್ಕೆ ಮೆಚ್ಚಿದ ಜನತೆ ಮೊದಲ ದಿನವೇ ಯುವಕರನ್ನು ಸಂಪರ್ಕಿಸಿ ವಿವಿಧ ಸಭೆ-ಸಮಾರಂಭಗಳಲ್ಲಿ ಉಳಿದ ಅನ್ನವನ್ನು ನೀಡಿದ್ದಾರೆ. ಈ ಯುವಕರು ಪ್ಯಾಕೆಟ್‌ನಲ್ಲಿ ಎಲ್ಲವನ್ನೂ ಸಿದ್ಧಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಹಸಿವಿನಿಂದ ಬಳಲುವ ಬಡವರಿಗೆ, ಅಂಗವಿಕಲರಿಗೆ ಅರ್ಪಿಸಿ ಅನ್ನಕ್ಕೂ ಬೆಲೆ ಕೊಟ್ಟಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಿತ್ಯ ಒಂದೊತ್ತಿನ ಊಟಕ್ಕಾಗಿ ಬಳಲುವವರನ್ನು ಕಣ್ಣಾರೆ ನೋಡುತ್ತಿದ್ದೆವು. ಅವರಿಗೆ ನಮ್ಮ ಕೈಲಾದಷ್ಟು ಸಹಾಯ-ಸಹಕಾರ ಮಾಡಬೇಕೆಂಬ ನಿರ್ಧಾರ ಮಾಡಿ ನಮ್ಮೆಲ್ಲ ಸ್ನೇಹಿತರೊಡಗೂಡಿ ಸಭೆ-ಸಮಾರಂಭಗಳಲ್ಲಿ ಉಳಿದ ಅನ್ನವನ್ನು ವ್ಯರ್ಥ ಮಾಡದೆ ನಮಗೇ ಕೊಡುವಂತೆ ಮನವಿ ಮಾಡಿ ಆ ಅನ್ನವನ್ನು ಹಸಿದವರಿಗೆ ಕೊಡುತ್ತಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅನ್ಯ ಜಿಲ್ಲೆಗಳಿಂದಲೂ ಕರೆಗಳು ಬರುತ್ತಿವೆ. ನಮ್ಮ ಕೈಲಾದದ್ದು ಮಾಡುತ್ತಿದ್ದೇವೆ.-ಬಸವರಾಜ ಮರಡೂರು,ಸುಧಾ ಕಲ್ಚರಲ್ ಅಕಾಡೆಮಿ ಸಂಸ್ಥಾಪಕ.

Advertisement

ಅಚ್ಚರಿಯ ವಿಷಯವೆಂದರೆ ಕೊಪ್ಪಳದ ಗವಿಮಠ, ಮಳೆ ಮಲ್ಲೇಶ್ವರ ದೇವಸ್ಥಾನಗಳಿಂದಲೂ ಈ ಯುವಕರಿಗೆ ಕರೆಗಳು ಬರುತ್ತಿದ್ದು, ನಿತ್ಯ ಒಂದೆರೆಡು ಗಂಟೆ ಅಳಿಲು ಸೇವೆ ಆರಂಭಿಸಿದ್ದಾರೆ. ಇವರ ಸೇವಾ ಕಾರ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆಗಳಿಂದಲೂ ಕರೆ ಬರುತ್ತಿವೆ. ಸದ್ಯಕ್ಕೆ ಕೊಪ್ಪಳ ನಗರ ಪ್ರದೇಶದಲ್ಲಿ ಈ ಸಾಮಾಜಿಕ ಕಾರ್ಯ ಆರಂಭಿಸಲಾಗಿದೆ.

ಮಠದಿಂದಲೂ ಕರೆ:

ಅಚ್ಚರಿಯ ವಿಷಯವೆಂದರೆ ಕೊಪ್ಪಳದ ಗವಿಮಠ, ಮಳೆ ಮಲ್ಲೇಶ್ವರ ದೇವಸ್ಥಾನಗಳಿಂದಲೂ ಈ ಯುವಕರಿಗೆ ಕರೆಗಳು ಬರುತ್ತಿದ್ದು, ನಿತ್ಯ ಒಂದೆರೆಡು ಗಂಟೆ ಅಳಿಲು ಸೇವೆ ಆರಂಭಿಸಿದ್ದಾರೆ. ಇವರ ಸೇವಾ ಕಾರ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆಗಳಿಂದಲೂ ಕರೆ ಬರುತ್ತಿವೆ. ಸದ್ಯಕ್ಕೆ ಕೊಪ್ಪಳ ನಗರ ಪ್ರದೇಶದಲ್ಲಿ ಈ ಸಾಮಾಜಿಕ ಕಾರ್ಯ ಆರಂಭಿಸಲಾಗಿದೆ.
ಸುಧಾ ಕಲ್ಚರಲ್ ಅಕಾಡೆಮಿ ಕಾರ್ಯಕ್ಕೆ ಕೈ ಜೋಡಿಸುವವರು ಮೊ. 9620639192, 8296642031,9663132663, 9731588737 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
•ದತ್ತು ಕಮ್ಮಾರ
Advertisement

Udayavani is now on Telegram. Click here to join our channel and stay updated with the latest news.

Next