ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆಯೇ, ಕನ್ನಡ ಚಿತ್ರರಂಗದ ನಟರು “ಅವರ ನೆರವಿಗೆ ನಾವಿದ್ದೇವೆ’ ಎಂದು ಹೇಳುವ ಮೂಲಕ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ಬುಧವಾರ ಬೆಳಗ್ಗೆ ಸದಾಶಿವ ಬ್ರಹ್ಮಾವರ್ ಅವರ ಬಗ್ಗೆ ಸುದ್ದಿ ಹೊರ ಬೀಳುತ್ತಿದ್ದಂತೆಯೇ, ನಟ ಸುದೀಪ್, ಶಿವರಾಜಕುಮಾರ್ ಹಾಗೂ ಜಗ್ಗೇಶ್ ಅವರು ಸದಾಶಿವ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಬಹುತೇಕ ಚಿತ್ರಗಳಲ್ಲಿ ಬಡ ಮೇಷ್ಟ್ರು ಆಗಿ, ಅಸಹಾಯಕ ಅಜ್ಜನಾಗಿ, ದೇವಸ್ಥಾನದ
ಪೂಜಾರಿಯಾಗಿ, ದುಷ್ಟರಿಗೆ ನೀತಿ ಪಾಠ ಹೇಳುವ ಪ್ರಾಮಾಣಿಕ ರಾಜಕಾರಣಿಯಾಗಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದ ಸದಾಶಿವ ಬ್ರಹ್ಮಾವರ್, ಸಂಕಷ್ಟದಲ್ಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಸುದೀಪ್ ಅವರು ತಮ್ಮ ಅಭಿಮಾನಿ ಸಂಘಕ್ಕೆ ಬ್ರಹ್ಮಾವರ್ ಅವರನ್ನು ಹುಡುಕಿ ಸಹಾಯ ಮಾಡುವಂತೆ ಸೂಚಿಸಿದ್ದಾರೆ.
ಅಷ್ಟೇ ಅಲ್ಲ, ಶಿವರಾಜಕುಮಾರ್ ಅವರು ಕೂಡ ವಿಷಯ ತಿಳಿದು, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರಿಗೆ ಕರೆ ಮಾಡಿ, ಸದಾಶಿವ ಅವರ ಬಗ್ಗೆ ಇನ್ನಷ್ಟು ಮಾಹಿತಿ ಪಡೆದು, ಸಹಾಯ ಮಾಡುವಂತೆ ಸೂಚಿಸಿದ್ದು, ಆ ಹಿನ್ನೆಲೆಯಲ್ಲಿ ಶ್ರೀಕಾಂತ್ ಕೂಡ ಸದಾಶಿವ ಬ್ರಹ್ಮಾವರ್ ಅವರು ಮಾತಿಗೆ ಸಿಕ್ಕ ಬಳಿಕ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುವುದಾಗಿ ಹೇಳಿದ್ದಾರೆ.
ಇನ್ನು, ನಟ ಜಗ್ಗೇಶ್ ಅವರು ಸಹ, ಸದಾಶಿವ ಬ್ರಹ್ಮಾವರ್ ಅವರ ಪರಿಸ್ಥಿತಿ ಬಗ್ಗೆ ತಿಳಿದು, ಟ್ವೀಟ್ ಮಾಡುವ ಮೂಲಕ ಅವರ ನೆರವಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ. “ದಯಮಾಡಿ ವಿಳಾಸ ಮಾಹಿತಿ ನೀಡಿ. ನಾವು ನಮ್ಮ ಕಲಾವಿದರ ಸಂಘ ಅವರಿಗಾಗಿ ಇದ್ದೇವೆ.
ಅವರನ್ನು ಅನಾಥರಾಗಲು ಬಿಡುವುದಿಲ್ಲ. ದುಃಖವಾಯಿತು. ಪಾಪಿ ದುನಿಯಾ, ಯಾಕೆ ಬೇಕು ಇಂತ ಬಂಧುಗಳು’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಸದಾಶಿವ ಬ್ರಹ್ಮಾವರ್ ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ . ಈವರೆಗೆ ಡಾ.ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವರಾಜಕುಮಾರ್, ಉಪೇಂದ್ರ, ದರ್ಶನ್, ಸುದೀಪ್, ಪುನೀತ್‌ರಾಜಕುಮಾರ್ ಸೇರಿದಂತೆ ಇತರೆ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ.
ನಾನು ಚೆನ್ನಾಗಿದ್ದೇನೆ: ಬ್ರಹ್ಮಾವರ್: ಇಷ್ಟೆಲ್ಲಾ ಸುದ್ದಿ ಹರಿದಾಡಿದ ನಂತರ ಸದಾಶಿವ ಬ್ರಹ್ಮಾವರ್, ಕೊನೆಗೂ ಕೆಲ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. “ನಾನೆಲ್ಲೂ ಹೋಗಿಲ್ಲ. ನನಗೇನೂ ಆಗಿಲ್ಲ. ನಾನು ಬೈಲಹೊಂಗಲದಲ್ಲಿನ ಮಗನ ಮನೆಯಲ್ಲಿದ್ದೇನೆ. ನಾನು ಪ್ರತಿ ವರ್ಷದಂತೆ ಈ ಸಲವೂ ಬಿಜಾಪುರದಲ್ಲಿರುವ ದಾನಮ್ಮ ದೇವಸ್ಥಾನಕ್ಕೆ ಹೋಗಿದ್ದೆ. ಆದರೆ, ಹಿಂದಿರುಗುವುದು ತಡವಾಗಿದೆ. ಅಷ್ಟಕ್ಕೇ ಇಷ್ಟೆಲ್ಲಾ ಸುದ್ದಿ ಹರಿದಾಡಿದೆ. ನನಗೇನೂ ಆಗಿಲ್ಲ. ನಾನು ಸು ಖವಾಗಿದ್ದೇನೆ’ ಎಂದು ಹೇಳುವ ಮೂಲಕ ಹರಿದಾಡಿದ್ದ ಊಹಾಪೋಹಗಳ ಸುದ್ದಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.